ಕುಣಿಗಲ್: ದಿನಾಲೂ ಜನತೆಗೆ ಸುಳ್ಳನ್ನೆ ಹೇಳುತ್ತಾ, ಸುಳ್ಳನ್ನೆ ಸತ್ಯಮಾಡಲು ಹೊರಟಿರುವ ಕಾಂಗ್ರೆಸ್ಸಿಗರು ಕೇವಲ ಅಧಿಕಾರಕ್ಕೆ ಹಾತೊರೆಯುತ್ತಾರೆ. ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್ ಪಕ್ಷ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬುಧವಾರ ಪಟ್ಟಣ ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿ ತಾಲೂಕು ಬಿಜೆಪಿ ಹಮ್ಮಿಕೊಂಡಿದ್ದ ಜನಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಎರಡು ಲಕ್ಷ ಕೋಟಿ ರೂ.ಸಾಲ ಮಾಡಿದ್ದಾರೆ. ಇದರಲ್ಲಿ 50 ಸಾವಿರ ಕೋಟಿ ವೆಚ್ಚ ಮಾಡಿ ಎರಡು ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಮಾಡಿದ್ದಾರೆ. ಅದೆ ಬಿಜೆಪಿ ಸರ್ಕಾರದಲ್ಲಿ 32 ಸಾವಿರ ಕೋಟಿ ವೆಚ್ಚ ಮಾಡಿ ಏಳು ಲಕ್ಷ ಎಕರೆ ಪ್ರದೇಶಕ್ಕೆ ನೀರುಣಿಸಿದ್ದೇವೆ. ಇದು ಸಣ್ಣ ಉದಾಹರಣೆ ಎಂದರು.
ಕೋವಿಡ್ ನಂತರ ರಾಜ್ಯದಲ್ಲಿ ಅಭಿವೃದ್ಧಿ ಪರ್ವವೆ ಆರಂಭವಾಗಿದೆ. ಸುಮಾರು ಹತ್ತು ಲಕ್ಷ ಕೋಟಿ ರೂ. ವಿದೇಶಿ ಹೂಡಿಕೆದಾರರು ಕರ್ನಾಟಕದಲ್ಲಿ ಹೂಡಿಕೆ ಮಾಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ರಾಜ್ಯದ ಯುವಕರಿಗೆ ಉದ್ಯೋಗ ಕಲ್ಪಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಕೃಷಿಕರ ಕುಟುಂಬ ಹೆಚ್ಚುತ್ತಿದೆ. ಆದರೆ ಆದಾಯ ಕೊರತೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೃಷಿಕರ ಮಕ್ಕಳಿಗೆ ವಿದ್ಯಾಸಿರಿ ಯೋಜನೆ ಜಾರಿಮಾಡಿದ್ದು, ಮುಂದಿನ ದಿನಗಳಲ್ಲಿ ಕ್ಯಾಬ್ ಚಾಲಕರು ಸೇರಿದಂತೆ ಇತರರಿಗೆ ನೀಡಲಾಗುವುದು ಎಂದರು.
ತುಮಕೂರು ಜಿಲ್ಲೆ ಭವಿಷ್ಯದಲ್ಲಿ ರಾಜ್ಯದ ರಾಜಧಾನಿಗೆ ಸರಿಸಮಾನವಾಗಿ ಅಭಿವೃದ್ಧಿ ಹೊಂದುತ್ತಿದ್ದು ಮುಂದಿನ ದಿನಗಳಲ್ಲಿ ಸಾಕಷ್ಟು ಉದ್ಯೋಗವಕಾಶ ಸೃಷ್ಟಿಯಾಗಿ ತುಮಕೂರಿನಲ್ಲೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬರುವ ದಿನ ದೂರವಿಲ್ಲ. ಕುಣಿಗಲ್ ತಾಲೂಕಿನಲ್ಲಿ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಚಿಂತನೆ ನಡೆಸುತ್ತಿದ್ದು ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕೆ ಸೇರಿದಂತೆ ಪಟ್ಟಣದ ಕುದುರೆ ಫಾರಂನಲ್ಲಿ ಉತ್ತಮ ಶೈಕ್ಷಣಿಕ ಸಂಸ್ಥೆ ಸ್ಥಾಪಿಸುವ ಮೂಲಕ ಜಿಲ್ಲೆಯ ಜನತೆಗೆ ಉತ್ತಮ ಶಿಕ್ಷಣ ದೊರಕಿಸಿ ಕೊಡಲು ಶ್ರಮಿಸಲಾಗುವುದು. ತಾಲೂಕಿನಲ್ಲಿ ಕೃಷಿ, ತೋಟಗಾರಿಕೆ, ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಬೇಕಾಗಿರುವುದರಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಜನ ಆಶೀರ್ವಾದ ಮಾಡಬೇಕೆಂದ ಅವರು, ಮಾರ್ಕೋನಹಳ್ಳಿ ಜಲಾಶಯದಿಂದ ಮಂಗಳಾ ಫೀಡರ್ ಕೆನಾಲ್ ಕಾಮಗಾರಿ ಎಲ್ಲಾ ಅನುಮೋದನೆ ನೀಡಿದ್ದು, ಮುಂದಿನ ದಿನಗಳಲ್ಲಿ ತಾವೆ ಬಂದು ಗುದ್ದಲಿ ಪೂಜೆ ನೆರವೇರಿಸುವುದಾಗಿ ಹೇಳಿದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, 60ವರ್ಷಗಳ ಕಾಲ ರಾಜ್ಯ, ದೇಶವನ್ನಾಳಿದ ಕಾಂಗ್ರೆಸ್ ದೀನ-ದಲಿತರು, ಅಲ್ಪಸಂಖ್ಯಾತರನ್ನು ಓಟ್ ಬ್ಯಾಂಕ್ ಮಾಡಿಕೊಂಡು, ಜಾತಿಯಲ್ಲಿ ಉಪಜಾತಿ, ಪಂಗಡ ಸೃಷ್ಟಿಸಿ, ಧರ್ಮ ಧರ್ಮಗಳ ನಡುವೆ ಕಿಚ್ಚು ಹಚ್ಚಿಸಿ ಒಂದು ಕುಟುಂಬದ ಅಧಿಕಾರ ಉಳಿಸಿಕೊಳ್ಳಲು ಜನರಿಗೆ ಸುಳ್ಳು ಹೇಳಿದ್ದು ಜನತೆ ಇದೀಗ ಎಚ್ಚೆತ್ತುಕೊಂಡು ಕಾಂಗ್ರೆಸ್ ತಿರಸ್ಕರಿಸುತ್ತಿದ್ದಾರೆ. ಬಿಜೆಪಿ ಎಲ್ಲಾ ವರ್ಗದ ಜನರ ಅನುಕೂಲಕ್ಕೆ ಹಲವು ಜನಪರ ಯೋಜನೆ ನೀಡಿದ್ದು ದೇಶದಲ್ಲೆ ಮೊದಲ ಬಾರಿಗೆ ಪ.ಪಂಗಡ, ಪ.ಜಾತಿ ಮೀಸಲು ಹೆಚ್ಚಿಸಿ ದಲಿತಪರ ಕಾಳಜಿ ತೋರಿದೆ ಎಂದರು.
ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ವಿರೋಧ ಪಕ್ಷದ ಸಿದ್ದರಾಮಯ್ಯನವರು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕುಸಿದಿದೆ ಎನ್ನುತ್ತಾರೆ. ಬರೀ ಸುಳ್ಳು ಹೇಳುವುದೆ ಅವರ ಕೆಲಸವಾಗಿದೆ. ಮತಾಂತರದ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸುವವರಿಗೆ ಪಾಠ ಕಲಿಸಲು ಸರ್ಕಾರ ಮತಾಂತರ ನಿಷೇಧ ಕಾಯಿದೆ ಜಾರಿಗೆ ತಂದಿದೆ. ರಾಜ್ಯ ಬಿಜೆಪಿ ಸರ್ಕಾರ ಹಲವಾರು ಜನಪರ ಕಾರ್ಯಕ್ರಮ ಮಾಡುತ್ತಿದೆ. ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಹಲವು ಮಹತ್ವದ ಕ್ರಮ ಕೈಗೊಂಡಿದೆ ಎಂದರು.
ಸಚಿವ ಮಾಧುಸ್ವಾಮಿ ಮಾತನಾಡಿ, ಕುಣಿಗಲ್ ತಾಲೂಕಿನ ಸಮಗ್ರ ಅಬಿವೃದ್ಧಿಗೆ ಬಿಜೆಪಿ ಸಕಾರ ಸಾಕಷ್ಟು ಕೊಡುಗೆ ನೀಡಿದೆ. ತಾಲೂಕಿನ ನೀರಾವರಿ ಸಮಸ್ಯೆ ಬಗೆಹರಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ. ತಾಲೂಕಿನಲ್ಲಿ ಬಿಜೆಪಿ ಪಕ್ಷವೂ ಅತ್ಯಲ್ಪ ಮತಗಳಿಂದ ಅಧಿಕಾರ ಕಳೆದುಕೊಂಡಿದ್ದು 2023ರ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರಬೇಕಿದೆ ಎಂದರು.
ಮಾಜಿ ಸಂಸದ ಮುದ್ದಹನುಮೇಗೌಡ ಮಾತನಾಡಿ, ಕುಣಿಗಲ್ ಕ್ಷೇತ್ರ ಪ್ರತಿನಿಧಿಸುವ ಕಾಂಗ್ರೆಸ್ನ ಹಾಲಿ ಸಂಸದರು ತಾಲೂಕಿನಲ್ಲಿ ಗಂಡಸ್ತನದ ಬಗ್ಗೆ ಮಾತನಾಡುತ್ತಾರೆ. ಅವರದೆ ಪಕ್ಷದ ಕಾರ್ಯಕರ್ತರನ್ನು ಗದರಿಸುತ್ತಾರೆ. ಇಂತಹ ದಬ್ಬಾಳಿಕೆ ನಡೆಸುವ ಜನಪ್ರತಿನಿಧಿಗಳ ಬಗ್ಗೆ ತಾಲೂಕಿನ ಜನರು ಎಚ್ಚರಿದಿಂದ ಇರಬೇಕು. ಮುಂದಿನ ಚುನಾವಣೆಯಲ್ಲಿ ಇವರಿಗೆ ತಕ್ಕ ಪಾಠ ಕಲಿಸಬೇಕೆಂದರು.
ತಾಲೂಕು ಬಿಜೆಪಿ ಮುಖಂಡ, ಪಿಎಲ್ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ಮಾತನಾಡಿ, ಸಂಸದರ ಚುನಾವಣೆಯಲ್ಲಿ ಹಣ ಹಂಚಲು ಬಂದಂತಹ ವ್ಯಕ್ತಿ ತಾಲೂಕಿನ ಶಾಸಕರಾಗಿ ಆಯ್ಕೆಯಾಗಿ ಅಭಿವೃದ್ಧಿ ಕೆಲಸ ಮಾಡದೆ ಜನರಿಗೆ ಸೀರೆ, ತವಾ, ಕುಕ್ಕರ್, ಹಣ ಹಂಚುತ್ತಾ ತಾಲೂಕಿನ ಗಣಿ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ಸದಾ ಜನತೆಯ ಮಧ್ಯ ಇರುವ ನನಗೆ ಮೂರು ಬಾರಿ ಚುನಾವಣೆಯಲ್ಲಿ ಸೋಲಿಸುವ ಶಿಕ್ಷೆ ನೀಡಿರುವುದು ಸರಿಯೆ, ಈ ಬಾರಿ ದಯಮಾಡಿ ತಮ್ಮನ್ನು ಗೆಲ್ಲಿಸುವಂತೆ ಕಣ್ಣೀರು ಹಾಕಿ ಬೇಡಿಕೊಂಡರು.
ಸಚಿವರಾದ ಗೋಪಾಲಯ್ಯ, ನಾಗೇಶ್, ಶಾಸಕರಾದ ಜ್ಯೋತಿಗಣೇಶ, ಚಿದಾನಂದ, ವೈ.ಎ.ಲಕ್ಷ್ಮೀನಾರಾಯಣ, ಯೋಗೀಶ್ವರ, ನವೀನ್ ಕುಮಾರ, ರವಿಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್, ತಾಲೂಕು ಅಧ್ಯಕ್ಷ ಬಲರಾಮ್ ಪ್ರಮುಖರಾದ ವೈ.ಎಚ್.ಹುಚ್ಚಯ್ಯ, ಭೈರಪ್ಪ, ಶ್ರೀಧರ, ದೇವರಾಜ, ದಿಲೀಪ, ಧನುಶ್ ಇತರರು ಇದ್ದರು.
Comments are closed.