2023ರ ಚುನಾವಣೆಯಲ್ಲಿ ಸುರೇಶ್ಗೌಡ ಗೆಲ್ತಾರೆ: ಸಿಎಂ

233

Get real time updates directly on you device, subscribe now.


ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ಮಾಜಿ ಶಾಸಕ ಸುರೇಶ್ಗೌಡ ಗೆದ್ದೇ ಗೆಲ್ಲುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಹೇಳಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಬಿ.ಸುರೇಶ್ಗೌಡ ಅವರು ನಿರ್ಮಿಸಿರುವ ಗ್ರಾಮಾಂತರ ಬಿಜೆಪಿ ಕಚೇರಿ ಶಕ್ತಿಸೌಧ ಉದ್ಘಾಟಿಸಿ ಮಾತನಾಡಿ, 2023ರ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ. ವಿಶಿಷ್ಟ ವ್ಯಕ್ತಿತ್ವ ಹೊಂದಿರುವ ಸುರೇಶ್ಗೌಡ ಅವರು ಶಾಶ್ವತವಾಗಿ ಶಾಸಕರಾಗುವ ಕೆಲಸವನ್ನು ಈ ಕ್ಷೇತ್ರದಲ್ಲಿ ಮಾಡಿದ್ದಾರೆ ಎಂದರು.

ಸ್ವಚ್ಛವಾದ ಹೃದಯ, ಕೊಟ್ಟ ಮಾತಿನಂತೆ ನಡೆಯುವ ಧೀಮಂತಿಕೆ ಸುರೇಶ್ಗೌಡ ಅವರಲ್ಲಿದೆ. ಅವರು ಮಾಡಿರುವ ಕೆಲಸ ನೋಡಿದರೆ 2008 ರಿಂದ 13 ರ ವರೆಗೆ ಅವರು ಶಾಶ್ವತ ಶಾಸಕರಾಗುವ ಕೆಲಸ ಮಾಡಿದ್ದಾರೆ. ವಿದ್ಯುತ್ ಶಕ್ತಿ ಗ್ರಿಡ್, ಶಾಲೆಗಳು, ರೈತರಿಗೆ ಉಪಯುಕ್ತವಾಗುವ ಪಂಪ್ ಸೆಟ್ಗಳಿಗೆ ವಿದ್ಯುತ್ ಪರಿವರ್ತಕ ಅಳವಡಿಕೆ ಸೇರಿದಂತೆ ಸರ್ಕಾರದ ಕಾರ್ಯಕ್ರಮವನ್ನು ಜನರಿಗೆ ಮುಟ್ಟಿಸುವ ಹಂಬಲ ಅವರಿಗಿದೆ. ತಾತ್ಕಾಲಿಕವಾಗಿ ಅವರು ವಿಧಾನಸೌಧದಲ್ಲಿ ಇರದಿದ್ದರೂ ಕ್ಷೇತ್ರದ ಪ್ರತಿಯೊಬ್ಬ ಮತದಾರನ ಮನದಲ್ಲಿದ್ದಾರೆ. ಸೋತರೂ ಮನೆಯಲ್ಲಿ ಕುಳಿತಿಲ್ಲ ಎಂದು ಹೇಳಿದರು.

ಜನಸಾಮಾನ್ಯರಿಗೆ ಜನಪ್ರಿಯ ಶಾಸಕರು ಬೇಕಿಲ್ಲ. ಜನೋಪಯೋಗಿ ಶಾಸಕರು ಬೇಕು. ಚುನಾವಣೆ ಮುಗಿಯುವ ಮುನ್ನವೇ ಜನಪ್ರಿಯ ಶಾಸಕರಾಗಿರುತ್ತಾರೆ. ಇಪ್ಪತ್ತೈದು ಸಾವಿರ ಅಂತರದಲ್ಲಿ ಸುರೇಶ್ಗೌಡ ಗೆಲ್ಲುತ್ತಾರೆ. ಇದನ್ನು ತಡೆಯಲು ಯಾರಿಗೂ ಶಕ್ತಿ, ತಾಕತ್ ಇಲ್ಲ ಎಂದರು. ಅಭಿವೃದ್ಧಿ ಚಕ್ರ ನಿರಂತರವಾಗಿ ತಿರುಗಬೇಕು. ನಿಮ್ಮ ಬದುಕಿನ ಗುಣಮಟ್ಟ ಹೆಚ್ಚಾಗಬೇಕು. ಸರ್ಕಾರದ ಯೋಜನೆ ಕಟ್ಟಕಡೆಯ ವ್ಯಕ್ತಿಗೂ ಮುಟ್ಟಬೇಕೆಂದರೆ ಸುರೇಶ್ಗೌಡರ ಕೈ ಹಿಡಿಯಬೇಕು ಎಂದು ಕರೆ ನೀಡಿದರು.
ದುಡಿಯುವ ವರ್ಗಕ್ಕೆ ಸಹಾಯ ಮಾಡಬೇಕು. ಅವರು ದೇಶ ಕಟ್ಟುತ್ತಾರೆ. ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚು ಮಾಡಿದ್ದೇವೆ. ಎಲ್ಲಾ ವರ್ಗದವರಿಗೂ ವಿಶೇಷ ಹಣಕಾಸಿನ ಸಹಾಯ ಮಾಡುತ್ತಿದ್ದೇವೆ. ಸ್ತ್ರೀ ಶಕ್ತಿ ಸಂಘಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿದ್ದೇವೆ ಎಂದರು.

ಸಾವಿರ ಎಕರೆ ಇಂಡಸ್ಟ್ರಿಯಲ್ ಟೌನ್ಶಿಫ್ ಸ್ಥಾಪಿಸಲಿದ್ದೇವೆ. ಇದರಿಂದ ತುಮಕೂರು ಗ್ರಾಮೀಣ ಪ್ರದೇಶದ ಯುವಕರಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಮಾಜಿ ಶಾಸಕ ಸುರೇಶ್ಗೌಡ ಮಾತನಾಡಿ, ಗ್ರಾಮಾಂತರ ಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಜಾರಿಗೊಳಿಸಬೇಕು. ಹೆಬ್ಬೂರು- ಗೂಳೂರು ಹೋಬಳಿಗಳ ಕೆರೆಗಳಿಗೆ ನೀರು ತುಂಬಿಸಲು ಶಾಶ್ವತ ನೀರಾವರಿ ಯೋಜನೆ ಜಾರಿ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ವೃಷಭಾವತಿಯಿಂದ ತುಮಕೂರು ಗ್ರಾಮಾಂತರ ಪ್ರದೇಶದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಈ ಎರಡು ಯೋಜನೆಗಳನ್ನು ಇನ್ನೊಂದು ತಿಂಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದು ಕೋರಿದರು.
ದಿನದ 24 ಗಂಟೆಯೂ ಗ್ರಾಮಾಂತರ ಕ್ಷೇತ್ರ ಜನರಿಗಾಗಿ ನಮ್ಮ ಕಚೇರಿ ತೆರೆದಿರುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಖಡ್ಗ ನೀಡಿ ಗೌರವಿಸಲಾಯಿತು. ನಂತರ ಮುಖ್ಯಮಂತ್ರಿಗಳು ಆ ಖಡ್ಗವನ್ನು ಗ್ರಾಮ ದೇವತೆಗೆ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಸಚಿವರಾದ ಗೋವಿಂದ ಕಾರಜೋಳ, ಗೋಪಾಲಯ್ಯ, ಬಿ.ಸಿ.ನಾಗೇಶ್, ಶಾಸಕರಾದ ಜ್ಯೋತಿಗಣೇಶ್, ಡಾ.ರಾಜೇಶ್ಗೌಡ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!