ಕೃಷಿ ಪರಿಕರಗಳಿಗೆ ಜಿಎಸ್ಟಿ ಹಾಕೋದು ಬೇಡ

175

Get real time updates directly on you device, subscribe now.


ತುಮಕೂರು: ರೈತರು ಬಳಕೆ ಮಾಡುವ ಕೃಷಿ ಪರಿಕರಗಳನ್ನು ಜಿಎಸ್ಟಿಯಿಂದ ಹೊರಗಿಡಬೇಕು. ಕಿಸಾನ್ ಸನ್ಮಾನ್ ನಿಧಿ ಮೊತ್ತವನ್ನು ದ್ವಿಗುಣಗೊಳಿಸುವುದು ಹಾಗೂ ಕೃಷಿ ಖರ್ಚನ್ನು ಗಣನೆಗೆ ತೆಗೆದುಕೊಂಡು, ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಬೇಕು ಎಂದು ಒತ್ತಾಯಿಸಿ ಡಿಸೆಂಬರ್ 19 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾರತೀಯ ಕಿಸಾನ್ ಸಂಘದವತಿಯಿಂದ ಬೃಹತ್ ರೈತರ ಘರ್ಜನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತೀಯ ಕಿಸಾನ್ ಸಂಘ 1979 ರಿಂದಲೂ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಬೇಕೆಂದು ಆಗ್ರಹಿಸಿ ಹೋರಾಟ ನಡೆಸುತ್ತಾ ಬಂದಿದ್ದೇವೆ. ಆದರೆ ಇದುವರೆಗೂ ಯಾವುದೇ ಸರಕಾರಗಳು ನಮ್ಮ ಮನವಿಗೆ ಸ್ಪಂದಿಸಿಲ್ಲ. ರೈತರ ಬೆಳೆಗೆ ವೆಚ್ಚದ ಆಧಾರದಲ್ಲಿ ಬೆಲೆ ನಿಗದಿ ಪಡಿಸಬೇಕೆಂಬುದು ನಮ್ಮ ಆಗ್ರಹವಾಗಿದೆ. ಕೃಷಿ ಪರಿಕರಗಳಾದ ಗೊಬ್ಬರ, ಹನಿ ನೀರಾವರಿ ಪೈಪುಗಳು, ಬಿತ್ತನೆ ಬೀಜ, ಕೃಷಿ ಕಾರ್ಮಿಕರ ಕೂಲಿ, ಮಿಷನರಿಗಳ ಬಾಡಿಗೆ ಸೇರಿದಂತೆ ಎಲ್ಲವೂ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಸರಕಾರಗಳು ಅವೈಜ್ಞಾನಿಕವಾದ ಎಂಎಸ್ಪಿಗೆ ಜೋತು ಬಿದ್ದು, ಭಿಕ್ಷೆಯ ರೀತಿ, ಒಂದಿಷ್ಟು ರೂಪಾಯಿ ಹೆಚ್ಚಿಸಿ, ರೈತರಿಗೆ ಅಪಮಾನ ಮಾಡುತ್ತಿವೆ. ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದರೆ ರೈತರು ವೆಚ್ಚ ಮಾಡುವ ಬೆಳೆಯ ಆಧಾರದಲ್ಲಿ ಬೆಲೆ ನಿಗದಿಯಾದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ತುಮಕೂರು ಜಿಲ್ಲೆಯಲ್ಲಿ ಕೊಬ್ಬರಿ ಪ್ರಮುಖ ಬೆಳೆಯಾಗಿದ್ದು, ಇಂದು ಕ್ವಿಂಟಾಲ್ ಕೊಬ್ಬರಿ 11 ಸಾವಿರಕ್ಕೆ ಕುಸಿದಿದೆ. ಒಂದು ಕ್ವಿಂಟಾಲ್ ಕೊಬ್ಬರಿ ಬೆಳೆಯಲು ಸುಮಾರು 15000 ರೂ. ಖರ್ಚು ಬರುತ್ತದೆ. ಹಾಗಾಗಿ ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 20000 ಸಾವಿರ ರೂ. ನಿಗದಿಪಡಿಸಬೇಕು. 2018ರ ರೈತರ 2 ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡಿದ್ದು, ಈ ಅವಧಿಯಲ್ಲಿ ಉಳಿಕೆ ರೈತರ ಸಾಲ ಮಾನ್ನಾ ಮಾಡಬೇಕೆಂಬುದು ನಮ್ಮ ಒತ್ತಾಯವಾಗಿದೆ.

ಪ್ರಧಾನ ಮಂತ್ರಿಗಳ ಫಸಲ್ ಭೀಮಾ ಯೋಜನೆಯನ್ನು ಎಲ್ಲಾ ಋತುಮಾನಗಳಲ್ಲಿಯೂ ಬೆಳೆಯುವ ಬೆಳೆಗಳಿಗೆ ವಿಸ್ತರಿಸಬೇಕು. ಹಾಗೆಯೇ ಹತ್ತಾರು ವರ್ಷಗಳಿಂದ ಸರಕಾರಿ ಭೂಮಿ ಉಳುಮೆ ಮಾಡುತ್ತಾ ಸರಕಾರದಿಂದ ಜಮೀನು ಮಂಜೂರಾಗಿರುವ ಕುಟುಂಬಗಳ ಹೆಸರಿಗೆ ಖಾತೆ ಮಾಡಿಕೊಡುವ ಜೊತೆಗೆ, ಪಹಣಿ ಮತ್ತು ಪೋಡಿ ಮಾಡಿ ಕೊಡಬೇಕೆಂಬುದು ನಮ್ಮ ಆಗ್ರಹವಾಗಿದೆ. ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿಸೆಂಬರ್ 19 ರಂದು ಬೃಹತ್ ರೈತ ಘರ್ಜನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಸುಮಾರು 25 ಲಕ್ಷಕ್ಕೂ ಅಧಿಕ ರೈತರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ತುಮಕೂರು ಜಿಲ್ಲೆಯಿಂದ 500ಕ್ಕೂ ಹೆಚ್ಚು ರೈತರು ಪಾಲ್ಗೊಳ್ಳುವರು, ಈಗಾಗಲೇ ರೈಲ್ವೆ ಬುಕ್ಕಿಂಗ್ ಮಾಡಲಾಗಿದೆ ಎಂದು ವಿಜಯಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ ಸುರೇಶ್, ಸದಸ್ಯರಾದ ಸಂತೋಷ ಹಾರೋಹಳ್ಳಿ, ಜಿಲ್ಲಾ ಕಾರ್ಯದರ್ಶಿ ಸಿ.ಎಸ್.ಗಂಗಾಧರ ಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಡಾ.ಮೋಹನ್, ಕೋಶಾಧ್ಯಕ್ಷ ಮಹಾಲಿಂಗಪ್ಪ, ಮಹಿಳಾ ಪ್ರಮುಖ ನವಿನಾ, ಸದಾಶಿವಯ್ಯ ಇದ್ದರು.

Get real time updates directly on you device, subscribe now.

Comments are closed.

error: Content is protected !!