ಯುವ ಸಮೂಹ ಕಲೆಯತ್ತ ಆಸಕ್ತಿ ಹೊಂದಲಿ

227

Get real time updates directly on you device, subscribe now.


ತುಮಕೂರು: ಪ್ರಸ್ತುತ ದಿನಗಳಲ್ಲಿ ಜಾನಪದ ಮತ್ತು ಸಾಂಸ್ಕೃತಿಕ ಕಲೆಗಳು ನಶಿಸಿ ಹೋಗುತ್ತಿದ್ದು, ಯುವ ಸಮೂಹ ಕಲೆಯನ್ನು ರೂಢಿಸಿಕೊಳ್ಳುವ ಮೂಲಕ ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀಧರ್ ಕರೆ ನೀಡಿದರು.

ನಗರದ ಬಾಲ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕಲಾವಿದರಿಂದ ನಮ್ಮ ನಾಡಿನ ಕಲೆ, ಸಂಸ್ಕೃತಿ ಉಳಿಯುತ್ತಿದೆ. ಈ ಕಲೆ ಉಳಿಸಿ ಬೆಳೆಸಲು ನಾವು ನೀವೆಲ್ಲರೂ ಪಣ ತೊಡಬೇಕು ಎಂದು ಹೇಳಿದರು.

ನಮ್ಮ ನಾಡಿನ ಕಲೆ, ಸಂಸ್ಕೃತಿಯಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ಹಾಗಾಗಿ ಯುವ ಜನತೆ ಶಿಕ್ಷಣದ ಜತೆಗೆ ಕಲೆಯ ಬಗ್ಗೆಯೂ ಒಲವು ತೋರುವ ಅಗತ್ಯವಿದೆ ಎಂದರು.
ಯುವ ಜನರು ತಮಗೆ ಆಸಕ್ತಿ ಇರುವಂತಹ ಕ್ಷೇತ್ರಗಳತ್ತ ಗಮನ ಹರಿಸಬೇಕು. ಮಾನಸಿಕವಾಗಿ ವಿಕಸನವಾಗಲು ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿ ಎಂದ ಅವರು, ನಮ್ಮ ಸಂಸ್ಕೃತಿ ರಕ್ಷಿಸಿ, ಪಾಲಿಸಿ, ಪೋಷಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಇಂತಹ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಯುವ ಪ್ರತಿಭೆಗಳು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ.ಸಂಜಯ್ ನಾಯಕ್ ಮಾತನಾಡಿ, ನಗರ ಪ್ರದೇಶಗಳಲ್ಲಿ ಯುವ ಜನೋತ್ಸವ ಕಾರ್ಯಕ್ರಮಗಳಿಗೆ ಭಾಗವಹಿಸಲು ಯುವಕರು ಮುಂದೆ ಬರುತ್ತಿಲ್ಲ. ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯಕ್ರಮದಲ್ಲಿ ನಾನು ಸದಾ ಭಾಗಿಯಾಗುತ್ತಿದ್ದೇನೆ. ವೈದ್ಯನಾಗಿದ್ದರೂ ರಾಷ್ಟ್ರಮಟ್ಟದ ಯುವ ಜನೋತ್ಸವ ಪ್ರಶಸ್ತಿ ಪಡೆದಿದ್ದೇನೆ. ಇಂದಿನ ಯುವ ಜನಾಂಗ ಕಲೆಯ ಬಗ್ಗೆ ಆಸಕ್ತಿ ತೋರುವ ಅಗತ್ಯವಿದೆ ಎಂದರು.

ಮಕ್ಕಳು ಹೆಚ್ಚು ಅಂಕ ಗಳಿಸಬೇಕು ಎಂಬುದು ಪೋಷಕರ ಅಭಿಲಾಷೆಯಾಗಿರುತ್ತದೆ. ಅದೇ ರೀತಿ ನಮ್ಮ ಕಲೆ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವತ್ತಲೂ ಒತ್ತು ನೀಡಲು ಪೋಷಕರು ಪ್ರೋತ್ಸಾಹ ನೀಡಬೇಕು. ಪ್ರಸ್ತುತ ತಂತ್ರಜ್ಞಾನ ಬೆಳೆದಿದೆ. ಆದರೆ ಮೊಬೈಲ್ನ್ನು ಹೆಚ್ಚು ಬಳಸಬೇಡಿ. ನಮ್ಮ ಪೂರ್ವಿಕರು ಹಾಡಿದಂತಹ ಜಾನಪದ ಗೀತೆಗಳನ್ನು ಕೇಳಿ ಆನಂದಿಸಿ ಕಲಿಯಬೇಕು ಎಂದ ಅವರು, ಯುವ ಪ್ರತಿಭೆಗಳು ಪ್ರಶಸ್ತಿಗೆ ಒತ್ತು ಕೊಡಬಾರದು. ಬದಲಿಗೆ ಕಲೆಯ ಉತ್ತಮ ಪ್ರದರ್ಶನ ನೀಡಬೇಕು ಎಂದರು.
ತೀರ್ಪುಗಾರರಾಗಿ ಭಾಗವಹಿಸಿದ್ದ ಕಲಾವಿದ ಗಿರೀಶ್ ರಾಮನ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಓದಿದ ತಕ್ಷಣ ಕೆಲಸ ಸಿಗಬೇಕು ಎಂಬ ಮನಸ್ಥಿತಿ ಎಲ್ಲರಲ್ಲೂ ಇದೆ. ನಾನು ಸಹ ಇಂಜಿನಿಯರಿಂಗ್ ಓದಿದ್ದೇನೆ. ಕೆಲಸವೂ ಸಿಕ್ಕಿದೆ. ಆದರೆ ಕಲೆಯನ್ನು ಆರಾಧಿಸುತ್ತಲೇ ಬಂದಿದ್ದೇನೆ ಎಂದರು.

ಯುವ ಜನತೆ ನಿಮ್ಮಲ್ಲಿ ಏನು ವಿಶೇಷತೆ, ಕಲೆ ಇದೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಇಂತಹ ವೇದಿಕೆಗಳು ಬಹಳ ಉಪಯುಕ್ತ. ಹಾಗಾಗಿ ಶಿಕ್ಷಣ ಮತ್ತು ಸಾಂಸ್ಕೃತಿಕ ಚಟವಟಿಕೆ ಎರಡನ್ನು ಒಂದೇ ಬಾರಿಗೆ ನಾವು ಕಲಿಯುತ್ತಾ ಹೋಗಬೇಕು. ಆಗ ಮಾತ್ರ ಕಲೆ ಉಳಿಸಿ ಬೆಳೆಸಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ನಡೆದ ಭರತನಾಟ್ಯ, ಜಾನಪದ ನೃತ್ಯ, ಜಾನಪದ ಗೀತೆ, ಕುಚ್ಚುಪುಡಿ, ಏಕಾಂತ ನಾಟಕ, ಶಾಸ್ತ್ರೀಯ ಸಂಗೀತ, ಆಶು ಭಾಷಣ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 120 ಮಂದಿ ಯುವ ಜನರಲ್ಲಿ 31 ಮಂದಿ ಯುವ ಜನರು ರಾಜ್ಯಮಟ್ಟಕ್ಕೆ ಆಯ್ಕೆಯಾದರು. ಇದೇ ತಿಂಗಳ 17, 18 ಮತ್ತು 19 ರಂದು ಚಿಕ್ಕಮಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಯುವ ಜನೋತ್ಸವದಲ್ಲಿ ಆಯ್ಕೆಯಾದ 31 ಯುವ ಪ್ರತಿಭೆಗಳು ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ನಾಗರಾಜು, ಸಿಡಿಪಿಓ ಓಂಕಾರಪ್ಪ, ತೀರ್ಪುಗಾರರಾದ ಗಿರೀಶ್ ರಾಮನ್, ನಳಿನಾಕುಮಾರಿ, ಶರ್ಮಿಳಾ, ಗಿರೀಶ್ರಾಮನ್, ಶೈಲಜಾ ಕುಮಾರಿ, ಮಹಮದ್ ಇಸ್ಮಾಾಯಿಲ್, ಶಿವಪ್ರಸಾದ್ ಎಂ.ಆರ್. ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!