ಗುಬ್ಬಿ: ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಇಂಡಿಪೆಂಡೆಂಟ್ ಆಗಿ ಬಂದು ಚುನಾವಣೆ ಗೆಲ್ಲಲಿ ಎಂದು ಕಾಂಗ್ರೆಸ್ ಮುಖಂಡ ಜಿ.ಎಸ್.ಪ್ರಸನ್ನ ಕುಮಾರ್ ಓಪನ್ ಚಾಲೆಂಜ್ ಹಾಕಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿ, ಇಡೀ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಮಾಡದೆ ಸೋಲಿನ ಭಯಕ್ಕೆ ನಾವು ಕಟ್ಟಿ ಬೆಳೆಸಿರುವಂತಹ ಪಕ್ಷಕ್ಕೆ ಆಗಮಿಸಲು ಹೊರಟಿದ್ದಾರೆ. ಕೇವಲ 12 ಸಾವಿರ ಗೂಡು ಎಂದು ಕಾಂಗ್ರೆಸ್ ಪಕ್ಷವನ್ನು ಜರಿದಿರುವ ಶಾಸಕರು ನಮ್ಮ ಪಕ್ಷಕ್ಕೆ ಬರುವುದಕ್ಕೆ ಯಾವ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದರು.
20 ವರ್ಷದಲ್ಲಿ ತಾಲೂಕಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ರಾವಣನಿಗೆ 10 ತಲೆ ಇರುವಂತೆ ಈ ಮನುಷ್ಯನಿಗೂ ಸಹ 10 ತರಹದ ಕೆಟ್ಟ ಆಲೋಚನೆಗಳಿವೆ. ಮಾನವು ಇಲ್ಲದ ಮೌಲ್ಯವು ಇಲ್ಲದ ಮುಖಗಳ ರಾಜಕಾರಣಿ, ಇಂತಹ ವ್ಯಕ್ತಿ ನಮ್ಮ ಪಕ್ಷಕ್ಕೆ ಬಂದು ಹಾಳು ಮಾಡುವುದು ಬೇಡ. ತಾಲೂಕಿನಲ್ಲಿ ಸಾವಿರಾರು ಎಕರೆ ಭೂಮಿಯನ್ನು ಇವರು ಹಾಗೂ ಇವರ ಹಿಂಬಾಲಕರು ಕೊಳ್ಳೆ ಹೊಡೆದಿದ್ದಾರೆ. ಜನರ ಮುಂದೆ ಕಾನೂನು ಶಿಕ್ಷೆ ಆಗಲಿ ಎಂದು ಹೇಳುವವರು ಇವರೆ, ಹಿಂದೆ ಅವರನ್ನು ರಕ್ಷಿಸುತ್ತಿರುವವರು ಇವರೆ. 20 ವಷರ್ದಲ್ಲಿ ಇವರು ಮಾಡಿರುವ ಅಭಿವೃದ್ಧಿಯ ಶ್ವೇತ ಪತ್ರ ಹೊರಡಿಸಲಿ. ಅದನ್ನು ಬಿಟ್ಟು ರಾಜ್ಯದ ಹಾಗೂ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಇದರ ಬಗ್ಗೆ ಚಿಂತಿಸಬೇಕಾಗಿದೆ.
ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬರಬೇಕಾದರೂ ಸಹ ನಿಮ್ಮ ಶಕ್ತಿಯಿಂದ ಗೆದ್ದು ಬಂದಿಲ್ಲ. ಜೆಡಿಎಸ್ ಪಕ್ಷದಲ್ಲಿ ಗೆಲ್ಲುವಾಗ ದೇವೇಗೌಡರ ಹಾಗೂ ಕುಮಾರಸ್ವಾಮಿ ಅವರ ಹೆಸರಿನ ಮೇಲೆ ಗೆದ್ದಿರುವುದು. ಪಕ್ಷದಿಂದ ಎಲ್ಲಾ ರೀತಿಯ ಸ್ಥಾನಮಾನ ನೀಡಿದರು ದೇವೇಗೌಡರನ್ನ ಕುಮಾರಸ್ವಾಮಿ ಅವರನ್ನ ಹಿರಿಯರಾದ ಸಂಸದ ಬಸವರಾಜು ಅವರನ್ನು ಬಾಯಿಗೆ ಬಂದಂತೆ ಮಾತನಾಡುವ ನಿಮ್ಮಂತ ಶಾಸಕರಿಂದ ತಾಲೂಕಿನ ಅಭಿವೃದ್ಧಿ ಹೇಗೆ ಸಾಧ್ಯವಾಗುತ್ತದೆ. ನನ್ನನ್ನು ಇಂಡಿಪೆಂಡೆಂಟ್ ಆಗಿ ನಿಂತು ಗೆಲ್ಲಲಿ ಎಂದು ಹೇಳುವ ನೀವು ತಾಕತ್ತಿದ್ದರೆ ಈ ಬಾರಿ ಇಂಡಿಪೆಂಡೆಂಟ್ ಆಗಿ ಬನ್ನಿ, ಆಗ ನಿಮ್ಮನ್ನು ಗಂಡುಗಲಿ ಎನ್ನುವೆ ಎಂದು ಶಾಸಕ ಶ್ರೀನಿವಾಸ್ ವಿರುದ್ಧ ಕಿಡಿ ಕಾರಿದರು.
ಮುಖಂಡ ಹೊನ್ನಗಿರಿಗೌಡ ಮಾತನಾಡಿ ಇವರು ಕಾಂಗ್ರೆಸ್ಸಿಗೆ ಬರುವುದಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬರಲಿ. ಒಮ್ಮೆ ಕಾಂಗ್ರೆಸ್, ಒಮ್ಮೆ ಬಿಜೆಪಿ, ನಾನು ಇನ್ನು ಜೆಡಿಎಸ್ನಲ್ಲೆ ಇದ್ದೇನೆ ಎನ್ನುವ ಮಾತುಗಳನ್ನು ಆಡುತ್ತಲೇ ಇಡೀ ತಾಲೂಕಿನಲ್ಲಿ ಗೊಂದಲ ಸೃಷ್ಟಿಸಿ ರಾಜಕೀಯ ಆಟ ಆಡುವುದನ್ನು ಬಿಟ್ಟು ಎಲ್ಲಿಗೆ ಹೋಗುತ್ತೇನೆ ಎಂಬುದನ್ನು ನಿರ್ಧರಿಸಿ ಕಾಂಗ್ರೆಸಿಗೆ ಬಂದೆ ಬರುತ್ತೇನೆ ಎಂದರೆ ಬರಲಿ, ನಾವ್ಯಾರು ಬೇಡ ಎನ್ನುವುದಿಲ್ಲ.
ಆಮೇಲೆ ನಾವು ನಮ್ಮ ಪಕ್ಷ ಏನು ಎಂದು ತಿಳಿಯುತ್ತದೆ. ಇಷ್ಟು ವಷರ್ಗಳ ಕಾಲ ಪಕ್ಷ ಕಟ್ಟಿ ಬೆಳೆಸಿದವರಿಗೆ ಅನ್ಯಾಯವಾಗುತ್ತಿದ್ದು ಇವರೇನಾದರೂ ಪಕ್ಷಕ್ಕೆ ಬಂದರೆ ನಾನು ಖಂಡಿತವಾಗಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಲ್ಲುವುದು ಖಂಡಿತ. ಹತ್ತು ಹಲವು ವರ್ಷಗಳಿಂದ ಪಕ್ಷ ಕಟ್ಟಿ ಬೆಳೆಸಿರುವಂತಹ ನಮ್ಮಲ್ಲಿ ಯಾರಿಗಾದರೂ ಟಿಕೆಟ್ ನೀಡಿದರೆ ಅವರಿಗೆ ಕೆಲಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಉಳಿಸುತ್ತೇವೆ. ಇಲ್ಲದೆ ಹೋದರೆ ಬಂದವರು ಮುಂದೆ ಅವರೇ ಅನುಭವಿಸುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹಯ್ಯ, ಮುಖಂಡರಾದ ಚಿಕ್ಕರಂಗೇಗೌಡ, ಎಂ.ವಿ.ಶ್ರೀನಿವಾಸ್, ಭಾಗ್ಯಮ್ಮ, ಹೇಮಂತ್, ಶಿವನಂದ ಇನ್ನಿತರರು ಹಾಜರಿದ್ದರು.
Comments are closed.