ಜನರ ಮನೆಗೆ ಸರ್ಕಾರದ ಯೋಜನೆ ತಲುಪಿಸಿ

ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಸೂಚನೆ

89

Get real time updates directly on you device, subscribe now.


ತುಮಕೂರು: ಸರಕಾರ ಹಂತ ಹಂತವಾಗಿ ಗ್ರಾಮ ಲೆಕ್ಕಾಧಿಕಾರಿಗಳ ಬೇಡಿಕೆ ಈಡೇರಿಸುತ್ತಾ ಬಂದಿದೆ. ಅಲ್ಲದೆ ಇದುವರೆಗೂ ಇದ್ದ ಗ್ರಾಮ ಲೆಕ್ಕಾಧಿಕಾರಿಯ ಬದಲಾಗಿ, ಗ್ರಾಮ ಆಡಳಿತ ಅಧಿಕಾರಿ ಎಂಬ ಪದನಾಮ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜನಸ್ನೇಹಿಯಾಗಿ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕೆಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ನಗರದ ಗಾಜಿನ ಮನೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘ ಹಾಗೂ ತುಮಕೂರು ಜಿಲ್ಲಾ ಘಟಕ ಆಯೋಜಿಸಿದ್ದ ಕನ್ನಡ ರಾಜೋತ್ಸವ, 2023ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ, ವಿಚಾರ ಸಂಕಿರಣ ಹಾಗೂ ರಾಜ್ಯ ಸಂಘದ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿ, ನೀವು ನೀಡುವ ಸೇವೆಯಿಂದ ಜನರ ಬಾಯಲ್ಲಿ ಸರಕಾರ ಒಳ್ಳೆಯ ಕೆಲಸ ಮಾಡಿದೆ ಎಂಬ ಹೆಸರು ಬರುವಂತಾಗಬೇಕು. ಆಗ ನಿಮ್ಮ ಪದನಾಮ ಬದಲಾಗಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.

ನಮ್ಮ ಸರಕಾರ ಅನೇಕ ಜನರ ಪರ ಯೋಜನೆ ರೂಪಿಸುತ್ತಾ ಬಂದಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ, 72 ಗಂಟೆಗಳಲ್ಲಿ ಪಿಂಚಿಣಿ ಸೌಲಭ್ಯ ಸೇರಿದಂತೆ ಹಲವಾರು ಯೋಜನೆ ಜಾರಿಗೆ ತಂದಿದೆ. ಇವುಗಳು ಸಮರ್ಪಕವಾಗಿ ಜನರ ಬಾಗಿಲಿಗೆ ಮುಟ್ಟಿದರೆ ಅದಕ್ಕಿಂತ ಉತ್ತಮ ಕಾರ್ಯ ಮತ್ತೊಂದಿಲ್ಲ. ಕೇವಲ ಯೋಜನೆಗಳಿಂದ ಉಪಯೋಗವಾಗುವುದಿಲ್ಲ. ಯೋಜನೆಗಳು ಜನರ ಮನೆ ಬಾಗಿಲಿಗೆ ಮುಟ್ಟಬೇಕು. ಈ ನಿಟ್ಟಿನಲ್ಲಿ ಜನರು ಮತ್ತು ಸರಕಾರದ ನಡುವೆ ಕೊಂಡಿಯಾಗಿರುವ ಅಧಿಕಾರಿಗಳು ಮತ್ತಷ್ಟು ಪಾರದರ್ಶಕವಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ. ಈಗಾಗಲೇ ವೃಂದ ನೇಮಕಾತಿಗೆ ತಿದ್ದುಪಡಿ ತರಲಾಗಿದೆ. ಇಂದು ಗ್ರಾಮ ಲೆಕ್ಕಾಧಿಕಾರಿಯ ಬದಲಾಗಿ ಗ್ರಾಮ ಆಡಳಿತ ಅಧಿಕಾರಿ ಪದನಾಮ ಬದಲಾವಣೆಗೆ ಅಂಕಿತ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ನೀವು ನೀಡಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇವೆ ಎಂದು ಆರ್.ಅಶೋಕ್ ಗ್ರಾಮ ಆಡಳಿತ ಅಧಿಕಾರಿಗಳ ಸಂಘಕ್ಕೆ ಭರವಸೆ ನೀಡಿದರು.

ನಮ್ಮ ಸರಕಾರ ಬಂದ ಮೇಲೆ ಕಂದಾಯ ಇಲಾಖೆಯಲ್ಲಿ ಬಹಳಷ್ಟು ಸುಧಾರಣೆ ತರಲಾಗಿದೆ. ಸುಮಾರು 40 ವರ್ಷಗಳಿಂದ ಆಗದ ಹಲವು ಆದೇಶ ಮಾಡಲಾಗಿದೆ. ಎಲ್ಲಾ ಕೃಷಿಕರಿಗೂ ಭೂಮಿ ಸಿಗಬೇಕು ಎಂಬ ಉದ್ದೇಶದಿಂದ ಫಾರಂ 57 ಸಲ್ಲಿಸಲು ಒಂದು ವರ್ಷ ಕಾಲಾವಕಾಶ ನೀಡಲಾಗಿದೆ. ಅಲ್ಲದೆ ಸೇಂದಿವನಗಳಲ್ಲಿ ಉಳುಮೆ ಮಾಡುತ್ತಿದ್ದ ರೈತರಿಗೂ 50-57 ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ ಪರಿಶೀಲಿಸಿ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ಒತ್ತುವರಿಯಾಗಿರುವ ಸುಮಾರು 1 ಲಕ್ಷ ಎಕರೆ ಕಾಫಿ ತೋಟವನ್ನು ಕಾಫಿ ಬೆಳೆಗಾರರಿಗೆ ಲೀಸ್ ನೀಡಲು ನಿರ್ಧರಿಸಲಾಗಿದೆ. ಈ ಎಲ್ಲಾ ಯೋಜನೆಗಳ ಜಾರಿಗೆ ಬರಬೇಕಾದರೆ ನಿಮ್ಮಗಳ ಸಹಕಾರ ಅಗತ್ಯ ಎಂದು ಕಂದಾಯ ಸಚಿವರು ತಿಳಿಸಿದರು.

ಒಂದು ಸರಕಾರದ ವಿರುದ್ಧ ಟೀಕೆಗಳ ಸಹಜ, ಆದರೆ ಅವರು ಅಧಿಕಾರದಲ್ಲಿ ಇದ್ದಾಗ ಜನಪರವಾಗಿ ಕೆಲಸ ಮಾಡದೆ, ಒಂದು ಜನಪರ ಸರಕಾರದ ವಿರುದ್ಧ ಟೀಕೆ ಸರಿಯಲ್ಲ. ಸರಕಾರಿ ನೌಕರರಿಗೆ ಏನು ಮಾಡದ ವಿರೋಧ ಪಕ್ಷಗಳು ಇನ್ನೂ ಜನರಿಗೆ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದ ಆರ್.ಅಶೋಕ್, ಸರಕಾರಿ ನೌಕರರು ಸರಕಾರ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು. ಮಾಧ್ಯಮಗಳಿಗಿಂತ ಬಾಯಿ, ಬಾಯಿಗೆ ಸರಕಾರದ ಕಾರ್ಯಕ್ರಮ ಹರಡಿದಾಗ ಜನರಲ್ಲಿ ಸರಕಾರದ ಬಗ್ಗೆ ಒಳ್ಳೆಯ ಭಾವನೆ ಮೂಡುತ್ತದೆ. ಸರಕಾರಕ್ಕೆ ವರುಣನ ಕೃಪೆಯ ಜೊತೆಗೆ, ಆದಾಯವೂ ನಿರೀಕ್ಷೆಗೆ ಮೀರಿ ಹೆಚ್ಚಾಗಿದೆ. ಮಳೆಯಿಂದ ಬೆಳೆ ಕಳೆದುಕೊಂಡ ಜಿಲ್ಲೆಯ 11,165 ರೈತರಿಗೆ 9.88 ಕೋಟಿ ರೂ., ಕೋವಿಡ್ನಿಂದ ಸಂತಸ್ತ್ರರಾದವರಿಗೆ 22 ಕೋಟಿ ರೂ. ಪರಿಹಾರ ನೀಡಲಾಗಿದೆ. ಮುಂದಿನ 2023ರ ಬಜೆಟ್ ಮತ್ತಷ್ಟು ಜನಪರವಾಗಲಿದೆ ಎಂದರು.
ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ, ಸರಕಾರಿ ನೌಕರರು ಮನವಿ ಸಲ್ಲಿಸಿದ ಒಂದು ತಿಂಗಳ ಒಳಗೆ 7ನೇ ವೇತನ ಪರಿಷ್ಕರಣೆ ಆಯೋಗ ನೇಮಕ ಮಾಡಿದ ಯಾವುದಾದರೂ ಸರಕಾರವಿದ್ದರೆ ಅದು ಬಸವರಾಜ ಬೊಮ್ಮಾಯಿಯವರ ಸರಕಾರ, ಸರಕಾರಿ ನೌಕರರ ಎಲ್ಲಾ ಬೇಡಿಕೆಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತಿದ್ದಾರೆ. ಇದಕ್ಕೆ ನಿಮ್ಮೆಲ್ಲರೂ ನೀಡಿದ ಸಹಕಾರ ಮುಖ್ಯ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೇಡಿಕೆಗಳಿಗೆ ಸರಕಾರದಿಂದ ಅನುಮೋದನೆ ದೊರೆಯಲಿದೆ ಎಂದರು.

ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಸರಕಾರಿ ನೌಕರರು ಇಂದು ನೆಮ್ಮದಿಯಿಂದ ಇರಲು ಸಂಘದ ರಾಜ್ಯಾಧ್ಯಕ್ಷರಾಗಿರುವ ಸಿ.ಎಸ್.ಷಡಕ್ಷರಿ ಅವರ ದಿಟ್ಟ ಮತ್ತು ಪ್ರಾಮಾಣಿಕ ಹೋರಾಟವೇ ಕಾರಣ. ಡಿಎ, ಹೆರಿಗೆ ರಜೆ, ಗಳಿಕೆ ರಜೆ ನಗದೀಕರಣ ಸೇರಿದಂತೆ ನೌಕರರ ಎಲ್ಲಾ ಬೇಡಿಕೆಗಳನ್ನು ಸರಕಾರದ ಮುಂದೆ ಸಮರ್ಥವಾಗಿ ಮಂಡಿಸಿ ಅದಕ್ಕೆ ಅನುಮೋದನೆ ಪಡೆಯುವ ಮೂಲಕ ಯಶಸ್ವಿ ಸಂಘಟಕರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ದೇವರಾಜು ಮಾತನಾಡಿ, ರಾಜ್ಯದ 30 ಜಿಲ್ಲೆಗಳ 226 ತಾಲೂಕುಗಳಲ್ಲಿಯೂ ನಮ್ಮ ಸಂಘಟನೆ ಇದೆ. ಸುಮಾರು 10 ಸಾವಿರ ಸದಸ್ಯರಿದ್ದು, ಸರಕಾರಕ್ಕೆ ನೀಡಿದ್ದ 9 ಪ್ರಮುಖ ಬೇಡಿಕೆಗಳಲ್ಲಿ 7 ನ್ನು ಅನುಮೋದಿಸಿ ಸರಕಾರಕ್ಕೆ ಕಂದಾಯ ಸಚಿವರು ಕಳುಹಿಸಿದ್ದಾರೆ. ಈಗಾಗಲೇ ವೃಂದ ಬದಲಾವಣೆ, ಪದನಾಮ ಬದಲಾವಣೆ ಆಗಿದೆ. ಮುಂದಿನ ದಿನಗಳಲ್ಲಿ ಕೋವಿಡ್ ಪರಿಹಾರ, ಪ್ರತ್ಯೇಕ ಕೊಠಡಿ, ಹುದ್ದೆ ಮೇಲ್ದರ್ಜೆಗೇರಿಸುವುದು ಸೇರಿದಂತೆ ಹಲವಾರು ಬೇಡಿಕೆ ಈಡೇರಲಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘದ ಅಧ್ಯಕ್ಷ ಬಿ.ದೊಡ್ಡಬಸಪ್ಪ ರೆಡ್ಡಿ ವಹಿಸಿದ್ದರು. ಶಾಸಕರಾದ ಜಿ.ಬಿ.ಜೋತಿಗಣೇಶ್, ಡಾ.ಸಿ.ಎಂ.ರಾಜೇಶಗೌಡ, ಸಂಘದ ಗೌರವಾಧ್ಯಕ್ಷ ಎನ್.ರವಿಕುಮಾರ್, ಉಪಾಧ್ಯಕ್ಷ ಯಮನೂರ, ಪ್ರಧಾನ ಕಾರ್ಯದರ್ಶಿ ಭಕ್ತವತ್ಸಲ, ಖಜಾಂಚಿ ಹೆಚ್.ಜೆ.ಮೋಹನ್ಕುಮಾರ್, ಸಂಘಟನಾ ಕಾರ್ಯದರ್ಶಿ ಮಂಜುನಾಥ್.ಎಲ್, ಸಹ ಕಾರ್ಯದರ್ಶಿ ವಿ.ರಾಘವೇಂದ್ರ ಸ್ವಾಮಿ, ಸಂಘಟನಾ ಕಾರ್ಯದರ್ಶಿ ಭಾನುಪ್ರಕಾಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!