ಸುಸೂತ್ರ ಆಡಳಿತಕ್ಕೆ ಕಂದಾಯ ಇಲಾಖೆ ಸಹಕಾರ: ಅಶೋಕ್

98

Get real time updates directly on you device, subscribe now.


ಶಿರಾ: ಆಡಳಿತ ಯಂತ್ರ ಸುಸೂತ್ರವಾಗಿ ನಡೆದುಕೊಂಡು ಹೋಗಲು ಕಂದಾಯ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತಿದೆ. ಶಿರಾ ನಗರದ ತಾಲೂಕು ಆಡಳಿತ ಕಚೇರಿ ಮಿನಿ ವಿಧಾನಸೌಧದ ಪಕ್ಕದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪ ನೋಂದಣಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಶನಿವಾರ ನಗರದ ಮಿನಿ ವಿಧಾನಸೌಧದ ಬಳಿ ಶಿರಾ ಉಪ ನೋಂದಣಿ ಕಚೇರಿಯ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಶಿರಾ ನಗರವು ದಿನೇ ದಿನೆ ಬೆಳವಣಿಗೆಯಾಗುತ್ತಿದ್ದು, ಇಲಾಖೆಗಳಿಗೆ ಸ್ವಂತ ಕಟ್ಟಡವಿದ್ದರೆ ಸಾರ್ವಜನಿಕರಿಗೆ ಉತ್ತಮ ಕೆಲಸ ಕಾರ್ಯ ಆಗುತ್ತವೆ. ಈ ನಿಟ್ಟಿನಲ್ಲಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರ ಮನವಿ ಮೇರೆಗೆ ಸುಮಾರು 1.60 ಕೋಟಿ. ರೂ. ವೆಚ್ಚದಲ್ಲಿ ಉಪ ನೋಂದಣಿ ಕಚೇರಿಯ ನೂತನ ಕಟ್ಟಡ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಕಟ್ಟಡವನ್ನು ಗುಣಮಟ್ಟದಲ್ಲಿ ಶೀಘ್ರವಾಗಿ ನಿರ್ಮಿಸಿ ಎಂದ ಅವರು ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಬರಗಾಲವೇ ಇರುವುದಿಲ್ಲ. ಯಾವಾಗಲೂ ಮಳೆಯಾಗುತ್ತ, ರಾಜ್ಯ ಸುಭೀಕ್ಷೆಯಾಗಿರುತ್ತದೆ ಎಂದರು.

ಶಿರಾ ಶಾಸಕ ಡಾ.ಎಂ.ಸಿ.ರಾಜೇಶಗೌಡ ಓರ್ವ ಸಜ್ಜನ ರಾಜಕಾರಣಿ, ಸೌಮ್ಯ ಸ್ವಭಾವದ ಜೊತೆಗೆ, ಸರಳ ಸಜ್ಜನಿಕೆಗೆ ಹೆಸರಾದವರು. ಸರಕಾರದಿಂದ ಕ್ಷೇತ್ರದಲ್ಲಿ ಯಾವುದೆ ಕೆಲಸ ಕಾರ್ಯವಾಗಬೇಕಾದರೂ ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಗಮನಕ್ಕೆ ತಂದು ತ್ವರಿತವಾಗಿ ಕಾರ್ಯಕ್ರಮಗಳಿಗೆ ಅನುಮೋದನೆ ಪಡೆಯುವ ಕೆಲಸ ಮಾಡುತ್ತಾರೆ. ಸರಕಾರದ ಮುಂದೆ ಶಾಸಕರು ಇನ್ನೂ ಹಲವು ಬೇಡಿಕೆಗಳಿವೆ. ಹಂತ ಹಂತವಾಗಿ ಅವುಗಳನ್ನು ಸರಕಾರ ಕಾರ್ಯರೂಪಕ್ಕೆ ತರಲಿದೆ ಎಂದು ಸಚಿವ ಆರ್.ಅಶೋಕ್ ನುಡಿದರು.

ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಮಾತನಾಡಿ, ಶಿರಾ ನಗರದಲ್ಲಿ ಬಹಳ ದಿನದ ಬೇಡಿಕೆಯಾದ ಉಪ ನೋಂದಣಿ ಕಚೇರಿ ಆಗಬೇಕೆಂಬ ಬೇಡಿಕೆ ಇತ್ತು. ಈಗ ಇರುವ ಉಪ ನೋಂದಣಾಧಿಕಾರಿಗಳ ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇಂದು ಸುಮಾರು 1.60 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಬೆಂಗಳೂರು, ತುಮಕೂರುಗಳಲ್ಲಿರುವಂತೆ ಪಾಸ್ಪೋರ್ಟ್ ಸೇವಾ ಕೇಂದ್ರದ ರೀತಿಯಲ್ಲಿ ಉಪ ನೋಂದಣಾಧಿಕಾರಿ ಕಚೇರಿ ನಿರ್ಮಾಣವಾಗಲಿದೆ. ಇಲ್ಲಿ ಎಲ್ಲಾ ರೀತಿಯ ಅತ್ಯಾಧುನಿಕ ಸೌಲಭ್ಯ ಒದಗಿಸಲಾಗುವುದು ಎಂದ ಅವರು ಕಂದಾಯ ಸಚಿವ ಆರ್.ಅಶೋಕ್ ಅವರು ಕಂದಾಯ ಇಲಾಖೆಯಲ್ಲಿ ಹಲವಾರು ಕಾರ್ಯಕ್ರಮ ರೂಪಿಸಿದ್ದರ ಫಲವಾಗಿ ಮನೆ ಮನೆಗೆ ಕಂದಾಯ ದಾಖಲೆ ತಲುಪಲು ಸಾಧ್ಯವಾಗಿದೆ ಎಂದರು.
ಗುಜರಾತ್ನಲ್ಲಿ ಬಿಜೆಪಿ ಪಕ್ಷಕ್ಕೆ ಅಭೂತಪೂರ್ವ ಬಹುಮತ ಬಂದಿದ್ದು, ಬಿಜೆಪಿ ಸರಕಾರದ ಅನೇಕ ಜನಪರ ಕಾರ್ಯಗಳಿಂದ ಜನರು ಮತ ನೀಡಿದ್ದಾರೆ. ಅದೇ ರೀತಿಯಲ್ಲಿ ಕರ್ನಾಟಕ ರಾಜ್ಯದಲ್ಲೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನತೆ ಬಿಜೆಪಿ ಪಕ್ಷಕ್ಕೆ ಮತ ನೀಡಿ ಮತ್ತೊಮ್ಮೆ ಬಿಜೆಪಿ ಸರಕಾರ ಅಧಿಕಾರಕ್ಕೆ ತರಲಿದ್ದಾರೆ ಎಂದು ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ತೆಂಗು ನಿಗಮದ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಾದ ಡಾ.ಮಮತ.ಬಿ.ಆರ್, ಜಿಲ್ಲಾ ನೋಂದಣಾಧಿಕಾರಿ ಶಶಿಕಲ.ಬಿ.ಎನ್, ತಹಶೀಲ್ದಾರ್ ತಿಪ್ಪೇಸ್ವಾಮಿ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಡಿ.ರಾಜಶೇಖರ್, ಯೋಜನಾ ಇಂಜಿನಿಯರ್ ಪುಟ್ಟಲಿಂಗಪ್ಪ, ಹಿರಿ ಉಪ ನೋಂದಣಾಧಿಕಾರಿ ಕೆ.ಶಂಕರ್, ಪಿಎಲ್ಡಿ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣಪ್ಪ, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹೆಚ್.ಮಾರುತೀಶ್, ನಗರ ಮಂಡಲ ಅಧ್ಯಕ್ಷ ವಿಜಯರಾಜ್, ನೋಂದಣಾಧಿಕಾರಿ ಶಂಕರಪ್ಪ, ಮುಖಂಡರಾದ ಲಕ್ಕೇಗೌಡ, ರಮೇಶ್, ದೊಡ್ಡಮನೆ ತಿಪ್ಪೇಸ್ವಾಮಿ, ಸೂರ್ಯಗೌಡ, ಯುವರಾಜ್ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!