ತುಮಕೂರು: ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ನಗರದ ಬಡ್ಡಿಹಳ್ಳಿ ಮುಖ್ಯರಸ್ತೆಯಲ್ಲಿ ನಿರ್ಮಿಸಿರುವ ಉಚಿತ ವಿದ್ಯಾರ್ಥಿ ನಿಲಯ ಹಾಗೂ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಡಿಸೆಂಬರ್ 12 ರಂದು ನಡೆಯಲಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ.ಆರ್. ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮಾರು 200 ಗಂಡು ಮಕ್ಕಳು ಉಳಿದುಕೊಳ್ಳಬಹುದಾದ ಹಾಸ್ಟೆಲ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ತರಬೇತಿ ನೀಡಬಹುದಾದ ಕಟ್ಟಡ ಸೇರಿದಂತೆ ಸುಮಾರು 7 ಕೋಟಿ ರೂ. ವ್ಯಯಿಸಿ ಹಾಸ್ಟೆಲ್ ಮತ್ತು ಸಮುದಾಯ ಭವನ ನಿರ್ಮಿಸಲಾಗಿದೆ. ಸರಕಾರದ ಅನುದಾನವಿಲ್ಲದೆ ಕೇಂದ್ರ ಸಂಘದ ಅನುದಾನದಲ್ಲಿಯೇ ಕಟ್ಟಡ ನಿರ್ಮಾಣ ಮಾಡಲಾಗಿದೆ. ಉದ್ಘಾಟನೆಯಾದ ದಿನದಿಂದಲೇ ಪಿಯುಸಿ, ಡಿಗ್ರಿ, ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆದವರು ಅರ್ಜಿ ಸಲ್ಲಿಸಿ ಉಚಿತ ವಿದ್ಯಾರ್ಥಿ ನಿಯಲದ ಪ್ರವೇಶ ಪಡೆಯಬಹುದು ಎಂದರು.
ಕೇಂದ್ರ ವಕ್ಕಲಿಗರ ಸಂಘದ ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಕೇವಲ 9 ತಿಂಗಳಲ್ಲಿಯೇ ಈ ಕಟ್ಟಡ ನಿರ್ಮಿಸಲಾಗಿದೆ. ಇದಲ್ಲದೆ ಮಾಗಡಿ ರಸ್ತೆಯಲ್ಲಿ ಕೆಂಗಲ್ ಹನುಮಂತಯ್ಯ ಅವರ ಹೆಸರಿನಲ್ಲಿ ಒಂದು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣ ಕಾರ್ಯ ಬರದಿಂದ ಸಾಗಿದೆ. ಶೀಘ್ರದಲ್ಲಿಯೇ ಅದನ್ನು ಸಹ ಲೋಕಾರ್ಪಣೆಗೊಳಿಸುತ್ತೇವೆ. ಈಗಾಗಲೇ ನಗರದಲ್ಲಿ ಹೆಣ್ಣು ಮಕ್ಕಳ ಉಚಿತ ವಿದ್ಯಾರ್ಥಿ ನಿಲಯ ನಡೆಯುತ್ತಿದ್ದು, ಗಂಡು ಮಕ್ಕಳಿಗೂ ಅದೇ ರೀತಿಯ ಉಚಿತ ವಿದ್ಯಾರ್ಥಿ ನಿಲಯ ಬೇಕೆಂಬುದು ಸಮುದಾಯದ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬಡ್ಡಿಹಳ್ಳಿ ಮುಖ್ಯರಸ್ತೆಯಲ್ಲಿ ಉಚಿತ ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ ಎಂದರು.
ತುಮಕೂರು ನಗರ ಒಕ್ಕಲಿಗರ ಸಂಘದಲ್ಲಿರುವ ಭಿನ್ನಾಭಿಪ್ರಾಯ ಶಮನ ಮಾಡಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗಿದೆ. ಸರಕಾರ ಈಗಾಗಲೇ ಆಡಳಿತಾಧಿಕಾರಿ ನೇಮಕ ಮಾಡಿ ಚುನಾವಣೆಗೆ ಅಧಿಸೂಚನೆ ಹೊರಡಿಸಿದೆ. ಚುನಾವಣೆ ಮುಗಿದ ನಂತರ ಎಂ.ಜಿ.ರಸ್ತೆಯ ಕಟ್ಟಡ ಸೇರಿದಂತೆ ಎಲ್ಲವನ್ನು ಲೋಕಾರ್ಪಣೆಗೊಳಿಸಲು ಅಗತ್ಯ ಕ್ರಮ ಸಂಬಂಧಪಟ್ಟವರೊಂದಿಗೆ ಮಾತನಾಡಿ ಕೈಗೊಳ್ಳುವುದಾಗಿ ತಿಳಿಸಿದರು.
ವಿದ್ಯಾರ್ಥಿ ನಿಲಯ ಹಾಗೂ ಸಮುದಾಯ ಭವನ ಉದ್ಘಾಟನೆಯ ಜೊತೆಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 2022ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.95 ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.90 ರಷ್ಟು ಅಂಕ ಪಡೆದ ಸಮುದಾಯದ ಮಕ್ಕಳನ್ನು ಗೌರವಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಿಜಯಕುಮಾರ್, ಹನುಮಂತು, ಶ್ರೀನಿವಾಸ್, ಗಿರೀಶ್, ಕೃಷ್ಣಮೂರ್ತಿ, ರಮೇಶ್ಬಾಬು, ಶಂಕರ್, ಶ್ರೀಧರ್ ಮತ್ತಿತರರು ಇದ್ದರು.
Comments are closed.