ಬೆಂಬಲ ಬೆಲೆಯಲ್ಲಿ ರೈತರಿಂದ ರಾಗಿ ಖರೀದಿ

ಡಿ.15ರಿಂದ ನೋಂದಣಿ ಪ್ರಾರಂಭಿಸಲು ಜಿಲ್ಲಾಧಿಕಾರಿ ನಿರ್ದೇಶನ

177

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿ 2022-23ನೇ ಮುಂಗಾರು ಋತುವಿನ ಅವಧಿಗೆ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಡಿಸೆಂಬರ್ 15 ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಯಲ್ಲಿ ರೈತರಿಂದ ರಾಗಿ ಖರೀದಿಸಲು ಡಿಸೆಂಬರ್ 15 ರಿಂದ ರೈತರ ನೋಂದಣಿಗೆ ಸೂಕ್ತ ಕ್ರಮ ಕೈಗೊಳ್ಳುವುದಲ್ಲದೆ, ವ್ಯವಸ್ಥಿತವಾಗಿ ನೋಂದಣಿ ಪ್ರಕ್ರಿಯೆ ನಡೆಸಬೇಕೆಂದು ಸೂಚಿಸಿದರು.

ರೈತರು ನೋಂದಣಿಯನ್ನು ಆಯಾ ಖರೀದಿ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಮಾಡಿಕೊಳ್ಳಬೇಕಾಗುತ್ತದೆ. ಕೃಷಿ ಇಲಾಖೆ ನೀಡಿರುವ ಪ್ರೂಟ್ ಐಡಿಯನ್ನು ಕಡ್ಡಾಯವಾಗಿ ಹಾಜರುಪಡಿಸಿ ನೋಂದಾಯಿಸಿಕೊಳ್ಳಬೇಕು ಎಂದರಲ್ಲದೆ, ಸರ್ಕಾರ ನಿಗದಿಪಡಿಸಿರುವ ಮಾನದಂಡವನ್ನು ಅನುಸರಿಸಿ ಎಫ್ಎಕ್ಯೂ ಗುಣಮಟ್ಟದ ರಾಗಿಯನ್ನು ಮಾತ್ರ ಖರೀದಿ ಮಾಡಬೇಕು. ಕಳಪೆ ಗುಣಮಟ್ಟದ ರಾಗಿ ಖರೀದಿಯಾದರೆ ಸಂಬಂಧಿಸಿದ ಖರೀದಿ ಅಧಿಕಾರಿ ಮತ್ತು ಕೃಷಿ ಇಲಾಖೆಯ ಗ್ರೇಡರ್ಗಳನ್ನೇ ಜವಾಬ್ದಾರಿ ಮಾಡಲಾಗುವುದು ಎಂದು ತಿಳಿಸಿದರು.

ರೈತರಿಂದ ರಾಗಿ ಖರೀದಿ ಪ್ರಕ್ರಿಯೆಯನ್ನು ಜನವರಿ 1 ರಿಂದ ಪ್ರಾರಂಭಿಸಬೇಕು. ಸರ್ಕಾರದಿಂದ ಪ್ರತಿ ಕ್ವಿಂಟಾಲ್ ರಾಗಿಗೆ 3578 ರೂ. ಗಳ ಖರೀದಿ ದರವನ್ನು ನಿಗದಿಪಡಿಸಲಾಗಿದೆ. ಪ್ರತಿ ರೈತರಿಂದ ಪ್ರತಿ ಎಕರೆಗೆ ಕನಿಷ್ಠ 10 ಕ್ವಿಂಟಾಲ್ನಂತೆ ಗರಿಷ್ಟ 20 ಕ್ವಿಂಟಾಲ್ವರೆಗೆ ಮಾತ್ರ ರಾಗಿ ಖರೀದಿಸಲಾಗುವುದು. ಸರ್ಕಾರ ನಿಗದಿಪಡಿಸಿದ ಪ್ರಮಾಣ ಮೀರಿ ಹೆಚ್ಚುವರಿಯಾಗಿ ರಾಗಿ ಖರೀದಿಸುವಂತಿಲ್ಲ ಎಂದರು.

ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಹಾಗೂ ನೋಂದಣಿ ಪ್ರಕ್ರಿಯೆಯಲ್ಲಿ ಬೋಗಸ್ ಗ್ರೇಡಿಂಗ್, ಮತ್ತಿತರ ಲೋಪವೆಸಗುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಎಚ್ಚರಿಕೆಯಿಂದ ರಾಗಿ ಖರೀದಿ ಮತ್ತು ನೋಂದಣಿ ಪ್ರಕ್ರಿಯೆ ನಡೆಸಬೇಕೆಂದು ಸೂಚಿಸಿದರು.

ಜಿಲ್ಲೆಯ ಪಾವಗಡ ಹಾಗೂ ಕೊರಟಗೆರೆ ತಾಲೂಕುಗಳನ್ನು ಹೊರತುಪಡಿಸಿ ಕುಣಿಗಲ್ ತಾಲ್ಲೂಕಿನಲ್ಲಿ 2, ತಿಪಟೂರು- 2 ಹಾಗೂ ತುರುವೇಕೆರೆ, ಹುಳಿಯಾರು, ಚಿಕ್ಕನಾಯಕನಹಳ್ಳಿ, ಗುಬ್ಬಿ, ಮಧುಗಿರಿ, ತುಮಕೂರು, ಶಿರಾ ತಾಲ್ಲೂಕುಗಳಲ್ಲಿ ತಲಾ 1 ಖರೀದಿ ಕೇಂದ್ರ ಸೇರಿದಂತೆ ಒಟ್ಟು 11 ಖರೀದಿ ಕೇಂದ್ರ ತೆರೆಯಲಾಗುವುದು. ರೈತರಿಗೆ ಸಮಸ್ಯೆಯಾಗದಂತೆ ಯಾವುದೇ ದೂರು ಬಾರದಂತೆ ಖರೀದಿ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸಬೇಕು ಎಂದರು.

ಖರೀದಿ ಕೇಂದ್ರಗಳಿಗೆ ರಾಗಿ ಮಾರಾಟ ಮಾಡಲು ಬರುವ ರೈತರಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡಬೇಕೆಂದರಲ್ಲದೆ, ಪ್ರೂಟ್ ಐಡಿಯಲ್ಲಿ ನೋಂದಣಿಯಾದ ರೈತರು ಮಾತ್ರ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಲು ಅವಕಾಶವಿದೆ ಎಂಬ ಮಾಹಿತಿಯನ್ನು ರೈತರಿಗೆ ನೀಡಬೇಕು. ವಿನಾಕಾರಣ ಅವರನ್ನು ಅಲೆದಾಡಿಸಬಾರದು ಎಂದರು.

ಜಿಲ್ಲೆಯಲ್ಲಿ ಕಳೆದ 2021- 22ನೇ ಸಾಲಿನಲ್ಲಿ 49,634 ರೈತರಿಂದ 7,30,671 ಕ್ವಿಂಟಾಲ್ ರಾಗಿ ಖರೀದಿಯಾಗಿದ್ದು, ಕೃಷಿ ಇಲಾಖೆಯ ಮಾಹಿತಿಯನ್ವಯ ಈ ಸಾಲಿನಲ್ಲಿ 2.73 ಲಕ್ಷ ಮೆ.ಟನ್ ರಾಗಿ ಖರೀದಿಗೆ ಬರಬಹುದೆಂದು ಅಂದಾಜಿಸಲಾಗಿದೆ. ಖರೀದಿ ಕೇಂದ್ರದಲ್ಲಿ ಖರೀದಿಸಿದ ದಾಸ್ತಾನು ಸಂಗ್ರಹ ಮಾಡಲು ಅಗತ್ಯ ಸರ್ಕಾರಿ ಗೋದಾಮುಗಳನ್ನು ಕಾಯ್ದಿರಿಸಬೇಕು. ರೈತರಿಂದ ಯಾವುದೇ ದೂರು ಬಂದರೆ ನಾನು ಸಹಿಸುವುದಿಲ್ಲವೆಂದು ಎಚ್ಚರಿಕೆ ನೀಡಿದರು.

ರಾಗಿ ಖರೀದಿ ಕೇಂದ್ರಗಳನ್ನು ಎಪಿಎಂಸಿ ಆವರಣಗಳಲ್ಲಿ ತೆರೆಯಬೇಕು ಈ ಖರೀದಿ ಕೇಂದ್ರದಲ್ಲಿ ಕನಿಷ್ಟ 1000 ದಿಂದ 2000 ಕ್ವಿಂಟಾಲ್ ದಾಸ್ತಾನು ಮಾಡಿಕೊಳ್ಳುವ ಸಾಮರ್ಥ್ಯವಿರುವ ಸ್ಥಳವನ್ನು ಗುರುತಿಸಿ ಸದರಿ ಸ್ಥಳದಲ್ಲಿಯೇ ಖರೀದಿ ಕೇಂದ್ರ ತೆರೆಯಬೇಕು ಎಂದು ತಿಳಿಸಿದರಲ್ಲದೆ, ಆಯಾ ತಾಲ್ಲೂಕು ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಎಪಿಎಂಸಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಂದಾಯ, ಕೃಷಿ ಇಲಾಖೆ ಸಿಬ್ಬಂದಿ ಒಳಗೊಂಡ ತಾಲ್ಲೂಕು ಮಟ್ಟದ ಸಮಿತಿ ರಚಿಸಲಾಗಿದ್ದು, ಸಮಿತಿಯು ರೈತರ ನೋಂದಣಿ ಕೇಂದ್ರ ಮತ್ತು ರಾಗಿ ಕೇಂದ್ರಗಳಿಗೆ ಆಗಿಂದಾಗ್ಗೆ ಭೇಟಿ ನೀಡಿ ಖರೀದಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯುವಂತೆ ಮೇಲ್ವಿಚಾರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡದೆ ರೈತರಿಂದ ನೇರವಾಗಿ ರಾಗಿ ಖರೀದಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ಸರ್ಕಾರವು ಪ್ರಸಕ್ತ ಸಾಲಿನಲ್ಲಿ ರಾಗಿ ಖರೀದಿಗೆ ಪ್ರತಿ ಕ್ವಿಂಟಾಲ್ಗೆ 3578 ರೂ. ದರ ನಿಗದಿಪಡಿಸಲಾಗಿದೆ. ಇದರಿಂದ ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷದ ರಾಗಿ ಖರೀದಿ ದರ 201 ರೂ. ಗಳಷ್ಟು ಹೆಚ್ಚಳವಾದಂತಾಗಿದೆ. ರಾಗಿ ಖರೀದಿಗಾಗಿ ರೈತರ ನೋಂದಣಿಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ವಿ.ಅಜಯ್, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ರವೀಶ್.ಎನ್, ರಾಜ್ಯ ಉಗ್ರಾಣ ನಿಗಮ, ಎಪಿಎಂಸಿ, ಕೆಎಫ್ಸಿಎಸ್ಸಿ ಅಧಿಕಾರಿ, ಸಿಬ್ಬಂದಿ, ತಹಶೀಲ್ದಾರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!