ಒಕ್ಕಲಿಗ ಸಮುದಾಯ ಸ್ವಾಭಿಮಾನ ಬಿಟ್ಟು ನಡೆಯಲ್ಲ: ಸ್ವಾಮೀಜಿ

210

Get real time updates directly on you device, subscribe now.


ತುಮಕೂರು: ಒಕ್ಕಲಿಗರ ಸಂಘಟನೆ ಮತ್ತು ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ 1906ರಲ್ಲಿ ಕೆ.ಹೆಚ್.ರಾಮಯ್ಯ ಅವರಿಂದ ಆರಂಭವಾದ ಒಕ್ಕಲಿಗರ ಸಂಘ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದ್ದು, ಸಮುದಾಯವನ್ನು ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮುನ್ನೆಸುವಲ್ಲಿ ಯಶಸ್ವಿಯಾಗಿದೆ ಎಂದು ಆದಿಚುಂಚನಗಿರಿ ಸಂಸ್ಥಾನ ಪೀಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ.

ನಗರದ ಬಡ್ಡಿಹಳ್ಳಿ ಮುಖ್ಯರಸ್ತೆಯಲ್ಲಿರುವ ಕೃಷ್ಣಾ ನಗರದಲ್ಲಿ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ನಿರ್ಮಾಣಗೊಂಡಿರುವ ಉಚಿತ ವಸತಿ ನಿಲಯ ಹಾಗೂ ಸಮುದಾಯಭವನ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ವಿವೇಕಾನಂದರ ಮಾತಿನಂತೆ ಸಂಘಟನೆಗಾಗಿ ರಾಜ್ಯ ಒಕ್ಕಲಿಗರ ಸಂಘ ಮತ್ತು ಧಾರ್ಮಿಕ, ಆದ್ಯಾತ್ಮಿಕ ಸಂಸ್ಕಾರಕ್ಕಾಗಿ ಆದಿಚುಂಚನಗಿರಿಯನ್ನು ಕೆ.ಹೆಚ್.ರಾಮಯ್ಯ ಆರಂಭಿಸಿದ್ದರ ಫಲ ಇಂದು ನಾವು, ನೀವು ಎಲ್ಲರೂ ಒಂದೆಡೆ ಸೇರುವಂತಾಗಿದೆ ಎಂದರು.

ಅಭಿವೃದ್ಧಿ ಎಂಬುದು ನಿರಂತರ. ಒಂದು ಸಂಘದಲ್ಲಿ ಹಿಂದಿನವರ ಕಾಲದಲ್ಲಿ ಆರಂಭವಾದ ಕೆಲಸಗಳು, ಈಗಿನವರ ಕಾಲದಲ್ಲಿ ಮುಕ್ತಾಯಗೊಂಡು, ಉದ್ಘಾಟನೆಯಾದರೆ, ಇಂದಿನವರು ಆರಂಭಿಸಿದ ಕೆಲಸವನ್ನು ಮುಂದೆ ಬಂದವರು ಉದ್ಘಾಟಿಸುತ್ತಾರೆ. ಹಾಗಾಗಿ ಸಂಘದ ಮೂಲಕ ಸಮುದಾಯಕ್ಕೆ ಶಾಶ್ವತ ಆಸ್ತಿ ಹೊಂದಲು ಸಹಕರಿಸಿದ ಎಲ್ಲರನ್ನು ನಾವು ನೆನೆಯಬೇಕಿದೆ. ನಮ್ಮಲ್ಲಿರುವ ಒಡಕು ಇತರರಿಗೆ ಕಾಣದಂತೆ ಒಗ್ಗಟ್ಟು ಪ್ರದರ್ಶಿಸಬೇಕಿದೆ. ಇದರಿಂದ ಸಂಘಕ್ಕೂ ಗೌರವ, ಸಮುದಾಯಕ್ಕೂ ಗೌರವ ಎಂದು ಕಿವಿಮಾತನ್ನು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಒಕ್ಕಲಿಗರ ಸಮುದಾಯ ಹಲವಾರು ಶ್ರೇಷ್ಠತೆಗಳಿರುವ ಸಮುದಾಯ, ಇಡೀ ದಕ್ಷಿಣ ಭಾರತವನ್ನು ಆಳಿದ ಗಂಗರು ಒಕ್ಕಲಿಗ ಸಮುದಾಯದವರು. ಆನಂತರದಲ್ಲಿ ಪ್ರತಿಷ್ಠೆ ಮತ್ತಿತರ ವಿಚಾರಗಳಿಗಾಗಿ ಪಂಗಡ ಉಪಪಂಗಡಗಳ ನಡುವಿನ ಆಂತರಿಕ ಭಿನ್ನಾಭಿಪ್ರಾಯದಿಂದ ಹರಿದು ಹಂಚಿಹೋದ ಸಮುದಾಯವನ್ನು ಒಂದು ವೇದಿಕೆಗೆ ತಂದು ಒಕ್ಕಲಿಗರ ಮಹಾ ಸಂಗಮ ಮಾಡುವ ಉದ್ದೇಶ ನಮ್ಮದಿದ. ವಿಧಾನಸೌಧ ಕಟ್ಟಿಸಿದ ಕೆಂಗಲ್ ಹನುಮಂತಯ್ಯ ಅವರನ್ನೇ ಅದರೊಳಗೆ ಕೂರದಂತೆ ನಮ್ಮವರೇ ಸಂಚು ಮಾಡಿ ಹೊರ ಹಾಕಿದರು. ದಕ್ಷಿಣ ಭಾರತದ ಮೊದಲ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ನಮಗೆ ತಕ್ಕಂತೆ ನಡೆದುಕೊಳ್ಳಲಿಲ್ಲ ಎಂದು ಅಧಿಕಾರದಿಂದ ಕೆಳಗೆ ಇಳಿಸಿದರು. ಇಷ್ಟೆಲ್ಲರದ ನಡುವೆಯೂ ನಾವು ನಮ್ಮ ಸ್ವಾಭಿಮಾನ ಬಿಟ್ಟು ನಡೆದ ಉದಾಹರಣೆಗಳಿಲ್ಲ. ಅಂತಹ ಗಟ್ಟಿತನ ನಮ್ಮ ಸಮುದಾಯದಲ್ಲಿದೆ. ಟೀಕೆಗಳಿಗೆ ಧೈರ್ಯ ಗೆಡದೆ, ಸಹನೆಯ ಜೊತೆಗೆ ಸುಗಮ ಆಡಳಿತ ನೀಡುವ ಗುರುತರ ಜವಾಬ್ದಾರಿ ರಾಜ್ಯ ಒಕ್ಕಲಿಗರ ಸಂಘದ ಮೇಲಿದೆ ಎಂದು ಸ್ವಾಮೀಜಿ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಸಂಘ ಶಿಕ್ಷಣ ಮತ್ತು ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ನಗರಸಭೆ ನೀಡಿದ್ದ 9 ಗುಂಟೆ ಜಾಗದಲ್ಲಿ ಒಂದು ಸಮುದಾಯ ಭವನದ ಜೊತೆಗೆ 200 ಜನ ಗಂಡು ಮಕ್ಕಳಿಗೆ ಉಚಿತ ವಿದ್ಯಾರ್ಥಿ ನಿಲಯ ಕಟ್ಟಲಾಗಿದೆ. ನಮ್ಮ ಹಿರಿಯರ ಆಸೆಯಂತೆ ಹಾಸ್ಟೆಲ್ಗಳು, ಅವುಗಳ ನಿರ್ವಹಣೆಗಾಗಿ ಸಮುದಾಯ ಭವನಗಳ ನಿರ್ಮಾಣ ನಡೆದಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಉಪ ವಿಭಾಗಗಳಲ್ಲಿಯೂ ಈ ರೀತಿಯ ಭವನಗಳು ತಲೆ ಎತ್ತಲಿವೆ. ಇದರ ಜೊತೆಗೆ ಮಾಗಡಿ ರಸ್ತೆಯ ಶ್ರೀಗಂಧದ ಕಾವಲು ಬಳಿ ಇರುವ 40 ಎಕರೆ ಜಾಗದಲ್ಲಿ ಒಂದು ಆಯುರ್ವೇದ, ಒಂದು ಇಂಗ್ಲಿಷ್ ಮೆಡಿಸನ್, ಒಂದು ನರ್ಸಿಂಗ್, ಒಂದು ಔಷಧ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ ತೆರೆಯಲು ತೀರ್ಮಾನಿಸಿ ಬರದಿಂದ ಕೆಲಸ ನಡೆಯುತ್ತಿವೆ. ಜನಾಂಗದ ಶೈಕ್ಷಣಿಕ ಹಿತದ ಜೊತೆಗೆ ಜನಾಂಗದ ನೌಕರರ ಹಿತವನ್ನು ಸಹ ಸಂಘ ಕಾಯುತ್ತಿದೆ. ಶೀಘ್ರದಲ್ಲಿಯೇ ಆದಿಚುಂಚನಗಿರಿ ಸ್ವಾಮೀಜಿಗಳ ಆಶಯದಂತೆ ಒಕ್ಕಲಿಗರ ಮಹಾ ಸಂಗಮ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಪಟ್ಟನಾಯಕನ ಹಳ್ಳಿಯ ನಂಜಾವಧೂತ ಸ್ವಾಮೀಜಿ ಮಾತನಾಡಿ, ಕೇಂದ್ರ ಒಕ್ಕಲಿಗರ ಸಂಘದ ವತಿಯಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೆಂಪೇಗೌಡರ ಹೆಸರಿನಲ್ಲಿ ವಿದ್ಯಾಸಂಸ್ಥೆ0ಗಳ ನಿರ್ಮಾಣಕ್ಕೆ ಮುಂದಾಗಬೇಕು ಎಂಬುದು ನಮ್ಮ ಸಲಹೆಯಾಗಿದೆ. ಪ್ರಚಲಿತ ವಿದ್ಯಾಮಾನಗಳಂತೆ ಮೀಸಲಾತಿ ಅತಿ ಅಗತ್ಯವಿದೆ. 3ಎ ಗೆ ಇರುವ ಶೇ.4 ಮೀಸಲಾತಿಯನ್ನು 28 ಸಮುದಾಯಗಳು ಹಂಚಿಕೊಳ್ಳಬೇಕಾಗಿದೆ. ಇದು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮಾರಕವಾಗಿದ್ದು, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು 3ಎ ಗೆ ಶೇ.12 ರಿಂದ 15 ಹೆಚ್ಚಿಿಸಬೇಕೆಂಬುದು ನಮ್ಮ ಆಗ್ರಹವಾಗಿದೆ. ಅಲ್ಲದೆ ಬಿಟ್ಟಿರುವ ಒಕ್ಕಲಿಗ ಉಪ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು. ಇದಕ್ಕೆ ಎಲ್ಲರೂ ಧ್ವನಿಗೂಡಿಸಬೇಕು ಎಂದರು.

ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಶ್ರೀಗಂಧ ಕಾವಲ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಆರ್.ಹನುಮಂತರಾಯಪ್ಪ ಮಾತನಾಡಿ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಯಿಮದ 7.50 ಕೋಟಿ ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಿಸಿ ಸುಮಾರು 200 ಜನ ಗಂಡು ಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಲಾ, ಕಾಲೇಜು ತೆರೆಯುವ ಉದ್ದೇಶ ಹೊಂದಿದ್ದೇವೆ. ಜನಾಂಗದ ಮಕ್ಕಳು ಸೌಲಭ್ಯಗಳ ಕೊರತೆಯಾಗದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಮಂಗಳನಾಥ ಸ್ವಾಮೀಜಿ, ಅರೆಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ, ನಿರ್ದೇಶಕರಾದ ಲೋಕೇಶ್ ಡಿ. ನಾಗರಾಜಯ್ಯ, ಹನುಮಂತರಾಯಪ್ಪ, ಡಾ.ಅಂಜನಪ್ಪ, ಕೋಶಾಧಿಕಾರಿ ಆರ್.ಪ್ರಕಾಶ್, ಮಾಜಿ ಸಂಸದ ಮುದ್ದಹನುಮೇ ಗೌಡ, ಮಾಜಿ ಟೂಡಾ ಅಧ್ಯಕ್ಷ ಸಿದ್ದಲಿಂಗಗೌಡ, ನಗರಪಾಲಿಕೆ ಸದಸ್ಯರಾದ ಧರಣೇಂದ್ರ ಕುಮಾರ್, ವೀಣಾ ಮನೋಹರಗೌಡ, ಮನು, ಮಾಜಿ ಸದಸ್ಯ ಟಿ.ಆರ್.ನಾಗರಾಜು, ವಿಯಕುಮಾರ್, ಆರ್.ಕಾಮರಾಜು, ಹೆಚ್.ಎಸ್.ಮಂಜುನಾಥ್, ದೇವರಾಜ ಕಲ್ಲಹಳ್ಳಿ, ಲೀಲಾವತಿ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!