ಕುಣಿಗಲ್: ನಕಲಿ ವೈದ್ಯನ ಮೇಲೆ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಗ್ರಾಮಸ್ಥರು ಆಗ್ರಹಿಸಿರುವ ಘಟನೆ ನಡೆದಿದೆ.
ತಾಲೂಕಿನ ಎಡೆಯೂರು ಹೋಬಳಿಯ ಕಗ್ಗೆರೆ ಸಮೀಪ ಭಾನುವಾರ ಸಂಜೆ ಕೆಲವರಿಗೆ ಜೇನು ಹುಳು ಕಡಿತವಾದ್ದರಿಂದ ಚಿಕಿತ್ಸೆಗೆ ಅಲ್ಲಪನಗುಡ್ಡೆ ಗ್ರಾಮದಲ್ಲಿನ ಖಾಸಗಿ ವೈದ್ಯನ ಕ್ಲಿನಿಕ್ಗೆ ಆಗಮಿಸಿದರು. ಆದರೆ ಕ್ಲಿನಿಕ್ನಲ್ಲಿದ್ದ ವೈದ್ಯ ಚಿಕಿತ್ಸೆ ನೀಡಲು ತಡಬಡಾಯಿಸುತ್ತಿದ್ದನಲ್ಲದೆ ಗ್ರಾಮದ ಕೆಲ ವಿದ್ಯಾವಂತ ಯುವಕರು ಕೇಳಿದ ಪ್ರಶ್ನೆಗೆ ಉತ್ತರಿಸಲು ತಡವರಿಸಿದರು. ಖಾಸಗಿ ವೈದ್ಯನ ಬಗ್ಗೆ ಅನುಮಾನಗೊಂಡ ಗ್ರಾಪಂ ಅಧ್ಯಕ್ಷ ನಾಗಾರಾಜ್ ಹಾಗೂ ಗ್ರಾಮದ ಕೆಲ ಮುಖಂಡರು ವೈದ್ಯನಿಗೆ ತಾನು ಓದಿರುವ ದಾಖಲೆ ಹಾಗೂ ನೋಂದಣಿ ಪತ್ರ ನೀಡುವಂತೆ ಆಗ್ರಹಿಸಿದರು.
ಈ ವೇಳೆ ಆತ ಯಾವುದೇ ದಾಖಲೆ ನೀಡದ ಕಾರಣ ತರಾಟೆಗೆ ತೆಗೆದುಕೊಂಡ ಅಧ್ಯಕ್ಷರು, ಗ್ರಾಮಸ್ಥರು ಯಾವುದೇ ಆಧಿಕೃತ ಮಾನ್ಯತೆ ಇಲ್ಲದೆ ವೈದ್ಯಕೀಯ ವೃತ್ತಿ ನಡೆಸಲು ನಕಲಿ ವೈದ್ಯ ಮುಂದಾಗಿರುವ ಬಗ್ಗೆ ಸ್ಥಳೀಯವಾಗಿ ತಾಲೂಕು ಆರೋಗ್ಯಾಧಿಕಾರಿ ಪರಿಶೀಲನೆ ಮಾಡಿಲ್ಲ. ತಾಲೂಕಿನಲ್ಲಿ ಇಂತಹ ಹಲವಾರು ಮಂದಿ ನಕಲಿ ವೈದ್ಯರು ಗ್ರಾಮಾಂತರ ಪ್ರದೇಶದಲ್ಲಿ ಅನಧಿಕೃತ ಕ್ಲಿನಿಕ್ ತೆಗೆದು ಬಡ ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಅಲ್ಲದೆ ಖಾಸಗಿ ಲ್ಯಾಬ್ಗಳು ಕಾರ್ಯ ನಿರ್ವಹಿಸುತ್ತಿದ್ದು ಇಲ್ಲಿಯೂ ಬಡ ರೋಗಿಗಳ ಶೋಷಣೆಯಾಗುತ್ತಿದೆ. ತಾಲೂಕು ಆರೋಗ್ಯಾಧಿಕಾರಿ ಕೂಡಲೆ ಕ್ರಮ ಜರುಗಿಸದೆ ಇದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿ ತಾಲೂಕು ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದರು.
ಗ್ರಾಪಂ ಅಧ್ಯಕ್ಷರ ದೂರಿನ ಹಿನ್ನೆಲೆಯಲ್ಲಿ ಎಚ್ಚೆತ್ತ ತಾಲೂಕು ಆರೋಗ್ಯಾಧಿಕಾರಿ ಸೋಮವಾರ ಅಲಪ್ಪನಗುಡ್ಡೆಯ ಖಾಸಗಿ ಕ್ಲಿನಿಕ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸದರಿ ಕ್ಲಿನಿಕ್ನಲ್ಲಿ ಅನುಮತಿ ಪಡೆದು, ನೋಂದಣಿ ಮಾಡಿಕೊಂಡಿರುವ ವೈದ್ಯರ ಹೆಸರಿನಲ್ಲಿದ್ದು ಭಾನುವಾರ ಬೇರೊಬ್ಬರು ಕೆಲಸ ಮಾಡಿರುವುದು ಗ್ರಾಮಸ್ಥರು ಮಾಡಿರುವ ವೀಡಿಯೋದಿಂದ ಕಂಡುಬಂದ ಹಿನ್ನೆಲೆಯಲ್ಲಿ ಮುಂದಿನ ಆದೇಶದ ವರೆಗೂ ಕ್ಲಿನಿಕ್ ಮುಚ್ಚುವಂತೆ ಸೂಚಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಾಲೂಕು ಆರೋಗ್ಯಾಧಿಕಾರಿ ಮರಿಯಪ್ಪ, ತಾಲೂಕಿನಲ್ಲಿರುವ ಅನಧಿಕೃತ ಕ್ಲಿನಿಕ್, ಲ್ಯಾಬ್, ನಕಲಿ ವೈದ್ಯರ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು. ದಾಖಲೆಗಳನ್ನು ಕಾಲಕಾಲಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಲಾಗುವುದು. ಅಕ್ರಮ ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
Comments are closed.