ತುಮಕೂರು: ಸರ್ಕಾರದ ಮಹತ್ವಾಕಾಂಕ್ಷೆಯ ಜೆಇ ಲಸಿಕಾ ಅಭಿಯಾನವನ್ನು ಈ ತಿಂಗಳ 24 ರೊಳಗಾಗಿ ಶೇ.100 ರಷ್ಟು ಯಶಸ್ವಿಗೊಳಿಸಬೇಕಿದ್ದು, ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆದು 1 ರಿಂದ 15 ವರ್ಷದೊಳಗಿನ ಯಾವ ಮಕ್ಕಳೂ ಲಸಿಕೆಯಿಂದ ಹೊರಗುಳಿಯದಂತೆ ವ್ಯಾಪಕ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡು ಲಸಿಕಾಕರಣ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಎಲ್ಲಾ ಅಂಗನವಾಡಿ ಮಕ್ಕಳನ್ನು ಲಸಿಕಾ ಕೇಂದ್ರಗಳಿಗೆ ಕರೆತಂದು ಲಸಿಕೆ ಹಾಕಿಸಬೇಕು. ಈ ನಿಟ್ಟಿನಲ್ಲಿ ಯೋಜನೆ ಹಾಗು ರೂಟ್ಮ್ಯಾಪ್ ಹಾಕಿಕೊಳ್ಳುವಂತೆ ಸಿಡಿಪಿಓ ಹಾಗೂ ಡಿಡಿಪಿಐ ಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ತಮ್ಮ ತಮ್ಮ ವ್ಯಾಪ್ತಿಯ ಶಾಲೆ ಹಾಗೂ ಅಂಗನವಾಡಿಯ ಎಲ್ಲಾ ಮಕ್ಕಳಿಗೂ ಜೆಇ ಲಸಿಕೆ ಹಾಕಿರುವ ಕುರಿತು ಸಿಡಿಪಿಓ ಹಾಗೂ ಡಿಡಿಪಿಐಗಳು ದೃಢೀಕರಣ ಪತ್ರ ನೀಡುವಂತೆ ತಿಳಿಸಿದರು.
ಯೋಜನಾ ಬದ್ಧವಾಗಿ ಲಸಿಕಾ ರೂಪುರೇಷೆ ರೂಪಿಸಿ, ಬಿಆರ್ಸಿ, ಸಿಆರ್ಸಿ ಸೇರಿದಂತೆ ಲಭ್ಯವಿರುವ ಸಿಬ್ಬಂದಿಯನ್ನು ಸಮರ್ಪವಾಗಿ ಬಳಸಿಕೊಂಡು ಗುರಿ ತಲುಪುವಂತೆ ತಿಳಿಸಿ ಈ ಅಭಿಯಾನದ ದಿನಾಂಕಗಳಲ್ಲಿ ಪ್ರಾ.ಆ.ಕೇಂದ್ರ, ಸಾರ್ವಜನಿಕ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ನೀಡಲು ಕ್ರಮ ವಹಿಸುವುದು ಎಂದು ತಿಳಿಸಿದರು.
ಅಂತೆಯೇ ಅಭಾ ಕಾರ್ಡ್ ನೋಂದಣಿಯೂ ಪ್ರಗತಿದಾಯಕವಾಗಬೇಕು. ಈ ನಿಟ್ಟಿನಲ್ಲಿ ಆಯಾ ಉಪ ವಿಭಾಗದ ಉಪ ವಿಭಾಗಾಧಿಕಾರಿಗಳೂ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.
ಈ ತಿಂಗಳ 14 ರಂದು ತುಮಕೂರು ಜಿಲ್ಲೆಯಲ್ಲಿ 5 ನಮ್ಮ ಕ್ಲಿನಿಕ್ಗಳು ಕಾರ್ಯಾರಂಭಗೊಳ್ಳಲಿದೆ. ತುಮಕೂರು ನಗರದ ಮೆಳೇಕೋಟೆ ಹಾಗೂ ಮರಳೂರು ದಿಣ್ಣೆ ಸೇರಿದಂತೆ ನಗರದಲ್ಲಿ ಎರಡು, ಪಾವಗಡ, ಸಿ.ಎನ್.ಹಳ್ಳಿ ಹಾಗೂ ಮಧುಗಿರಿಯಲ್ಲಿ ತಲಾ ಒಂದೊಂದು ಕ್ಲಿನಿಕ್ ಚಾಲನೆಗೊಳ್ಳಲಿದ್ದು, ಆಯಾ ಕ್ಷೇತ್ರದ ಶಾಸಕರನ್ನು ಆಹ್ವಾನಿಸಿ ಅವರ ಮೂಲಕ ನಮ್ಮ ಕ್ಲಿನಿಕ್ಗೆ ಚಾಲನೆ ನೀಡುವಂತೆ ತಿಳಿಸಿದರು.
ಆಧಾರ್ ಸೀಡಿಂಗ್ ಕೆಲಸಕ್ಕೆ ಪ್ರಥಮ ಆದ್ಯತೆ ನೀಡುವುದು. ಅಂತೆಯೇ ತಾತ್ಕಾಲಿಕ ಸಸ್ಪೆಂಡೆಡ್ ಆಧಾರ್ ಸೀಡಿಂಗ್ ಪ್ರಕರಣಗಳನ್ನೂ ಪ್ರಥಮಾದ್ಯತೆ ಮೇರೆಗೆ ಇತ್ಯರ್ಥಗೊಳಿಸಬೇಕು ಎಂದರು.
ಜೆಸ್ಲಿಪ್, ಮ್ಯುಟೇಷನ್, ಮತದಾರರ ಮನೆಮನೆ ಸಮೀಕ್ಷೆ, ಇ- ರೋಲ್ ಅಪ್ಡೇಟ್, ಭೂಮಿ ಪೆಂಡೆನ್ಸಿ ಇನ್ನಿತರ ವಿಷುಯಗಳ ಕುರಿತು ಜಿಲ್ಲಾಧಿಕಾರಿಗಳು ಸಮಗ್ರವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಜಿಪಂ ಸಿಇಓ ವಿದ್ಯಾಕುಮಾರಿ, ಉಪ ವಿಭಾಗಾಧಿಕಾರಿ ಅಜಯ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮ, ಡಿಹೆಚ್ಓ ಮಂಜುನಾಥ್, ಡಿ.ಎಸ್.ವೀಣಾ, ತಹಸೀಲ್ದಾರ್ಗಳಾದ ಆರತಿ, ಸಿದ್ದೇಶ್ ಇತರೆ ಅಧಿಕಾರಿಗಳೂ ಭಾಗವಹಿಸಿದ್ದರು.
Comments are closed.