ತುಮಕೂರು: ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 8- 10 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಪಡೆಯುವಂತೆ ಮಾಡಲು ಪ್ರತಿ ಬೂತ್ ನಲ್ಲಿಯೂ ಕನಿಷ್ಠ 5 ಜನ ನಿಷ್ಠಾವಂತ ಯುವ ಕಾರ್ಯಕರ್ತರನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ನಮ್ಮ ಬೂತ್, ನಮ್ಮ ಹೆಮ್ಮೆ ಎಂಬ ವಿನೂತನ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ ಮಠ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎರಡು ತಿಂಗಳ ಹಿಂದೆ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಅವರು ಯೂತ್ ಜೋಡೋ, ಬೂತ್ ಜೋಡೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮುಂದಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ಬೂತ್ನಲ್ಲಿ ಐವರು ಯುವ ಕಾರ್ಯಕರ್ತರನ್ನು ನೇಮಿಸಿ ಅವರ ಮೂಲಕ ಪ್ರತಿ ಮನೆ ಮನೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಹಾಗು ಬಿಜೆಪಿಯ ಜನವಿರೋಧಿ ನೀತಿಗಳನ್ನು ತಿಳಿಸಿ. ಜನ ಸಾಮಾನ್ಯರ ವಿರೋಧಿ ಸರಕಾರ ಕಿತ್ತೊಗೆಯಲು ಸಹಕರಿಸುವಂತೆ ಮತದಾರರ ಮನವೊಲಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಪಕ್ಷದ ವತಿಯಿಂದ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಿದ್ದ ಎಲ್ಲಾ ಜವಾಬ್ದಾರಿಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿಬಾಹಿಸಿಕೊಂಡು ಬಂದಿದ್ದೇವೆ. ಬೆಲೆ ಹೆಚ್ಚಳ, ಪಠ್ಯಪುಸ್ತಕಗಳ ಹಗರಣ, ಗ್ಯಾಸ್ ಹೆಚ್ಚಳ ಸೇರಿದಂತೆ ಹಲವಾರು ವಿಚಾರಗಳ ಕುರಿತು ಪ್ರತಿಭಟನೆ, ಧರಣಿ, ಅಹೋರಾತ್ರಿ ಧರಣಿ, ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆಯಂತಹ ಕಾರ್ಯಕ್ರಮ ಮಾಡಿ, ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿಯೂ ಪಕ್ಷ ನೀಡುವ ಎಲ್ಲಾ ಕಾರ್ಯ ಯೋಜನೆ ಯಶಸ್ವಿಗೊಳಿಸಲು ಯುವ ಕಾಂಗ್ರೆಸ್ ಕಾರ್ಯಕರ್ತರು ಸಿದ್ಧರಿರುವುದಾಗಿ ನುಡಿದರು.
ಪ್ರಸ್ತುತ ತುಮಕೂರು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಯುವ ಕಾಂಗ್ರೆಸ್ ಕಾರ್ಯಕರ್ತರು ಅರ್ಜಿ ಸಲ್ಲಿಸಿದ್ದಾರೆ. ನಾನು ಕೂಡ ತುಮಕೂರು ನಗರ ಕ್ಷೇತ್ರದಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದೇನೆ. ಟಿಕೆಟ್ ನೀಡುವುದು ಬಿಡುವುದು ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರ, ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಿದ್ದೇವೆ ಎಂದರು.
ತುಮಕೂರು ನಗರದಲ್ಲಿ ನಡೆದಿರುವ ಸ್ಮಾರ್ಟ್ ಸಿಟಿ ಯೋಜನೆಗಳ ಕುರಿತು ಆರ್ ಟಿಐ ನಲ್ಲಿ ಅರ್ಜಿ ಸಲ್ಲಿಸಿ ಒಂದುವರೆ ತಿಂಗಳು ಕಳೆದರು ಇದುವರೆಗೂ ಮಾಹಿತಿ ನೀಡಿಲ್ಲ. ಹಲವಾರು ಕಾಮಗಾರಿ ಉದ್ಘಾಟನೆ ಮಾಡುವ ಮುನ್ನವೇ ಕಳಚಿಕೊಳ್ಳುತ್ತಿವೆ. ಮುಖ್ಯ ಗುತ್ತಿಗೆ ಹೊರ ರಾಜ್ಯದವರಿಗೆ ನೀಡಿ, ಸಬ್ ಕಾಂಟ್ಯಾಕ್ಟ್ನ್ನು ಶಾಸಕರು ತಮ್ಮ ಸಂಬಂಧಿಕರಿಗೆ ನೀಡಿ ಶೇ.40 ರಷ್ಟು ಕಮಿಷನ್ ವ್ಯವಹಾರ ನಡೆದಿದೆ. ಹಾಗಾಗಿಯೇ ಎಷ್ಟೇ ಕಳಪೆ ಕಾಮಗಾರಿ ನಡೆದರು ಬಾಯಿ ಬಿಡುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಯುವ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ತಿಳಿಸಿದರು.
ಈ ವೇಳೆ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ರಾಜ್ಯ ಕಾರ್ಯದರ್ಶಿ ಹಿಲಾಯಿ ಸಿಖಂದರ್, ಕುಣಿಗಲ್ ಉಸ್ತುವಾರಿ ದೀಪ, ಜಿಲ್ಲಾ ಉಪಾಧ್ಯಕ್ಷ ಮೋಹನ್ ಕುಮಾರ್, ಮುಖಂಡರಾದ ರಾಜಾಹುಲಿ ಮತ್ತಿತರರು ಇದ್ದರು.
Comments are closed.