ತುಮಕೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ನಗರ ಹಾಗೂ ಪಟ್ಟಣ ಪ್ರದೇಶದ ಬಡ ದುರ್ಬಲ ವರ್ಗದ ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ನಮ್ಮ ಕ್ಲಿನಿಕ್ ಗಳನ್ನು ರಾಜ್ಯಾದ್ಯಂತ ಆರಂಭಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಅಮೂಲಾಗ್ರ ಸುಧಾರಣೆಗೆ ಕಾರಣವಾಗಿದ್ದಾರೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಗರದ ಮೇಳೆಕೋಟೆ ಮುಖ್ಯರಸ್ತೆ ಹಾಗೂ ಮರಳೂರು ದಿಣ್ಣೆ ಮುಖ್ಯ ರಸ್ತೆಯಲ್ಲಿ ಆಯೋಜಿಸಿದ್ದ ನಮ್ಮ ಕ್ಲಿನಿಕ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿನ ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಆರೋಗ್ಯ ಕ್ಷೇತ್ರವನ್ನು ತಳಮಟ್ಟದಿಂದ ಬಲಪಡಿಸುವ ಮತ್ತು ಸುಧಾರಣೆ ತರುವ ದೃಷ್ಟಿಯಿಂದ ಆರೋಗ್ಯ ಕ್ಷೇತ್ರಕ್ಕಾಗಿ ನೀಡುವ ಅನುದಾನವನ್ನು ಆರ್ಥಿಕ ವರ್ಷ 2021- 22 ರಿಂದ 2025- 26ನೇ ಸಾಲಿನವರೆಗೆ ಐದು ವರ್ಷಗಳ ಅವಧಿಗೆ ಹಂಚಿಕೆ ಮಾಡಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022- 23ನೇ ಸಾಲಿನ ಆಯವ್ಯಯದಲ್ಲಿ ನಗರ ಪ್ರದೇಶದ ಬಡ, ದುರ್ಬಲ ವರ್ಗದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ನಗರ ಪ್ರದೇಶದ ವ್ಯಾಪ್ತಿಯಲ್ಲಿ 438 ನಮ್ಮ ಕ್ಲಿನಿಕ್ ಆರಂಭಿಸಲು ಯೋಜನೆ ರೂಪಿಸಿ, ಮೊದಲ ಹಂತದಲ್ಲಿ 114 ಕ್ಲಿನಿಕ್ ಗಳು ಏಕ ಕಾಲಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮುಖ್ಯಮಂತ್ರಿ ವರ್ಚುವಲ್ ಮೂಲಕ ಚಾಲನೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಕಾಳಜಿ ವಹಿಸಿ ಆರೋಗ್ಯ ವ್ಯವಸ್ಥೆಯ ಸುಧಾರಣೆಗಾಗಿ ಸಾಕಷ್ಟು ಅನುದಾನ ನೀಡಿದ್ದಾರೆ ಎಂದರು.
ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ, ಇಂದ್ರಧನುಷ್ ಲಸಿಕಾಕರಣ, ಕೋವಿಡ್ ಲಸಿಕಾಕರಣ, ಜೆಇ ಲಸಿಕಾಕರಣ ಸೇರಿದಂತೆ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರದ ಸಹಕಾರದಲ್ಲಿ ಜಾರಿ ಮಾಡಲಾಗಿದೆ. ನಮ್ಮ ಕ್ಲಿನಿಕ್ ಆರಂಭವಾಗುವುದರಿಂದ ಜನರಿಗೆ ಆರೋಗ್ಯ ಹಾಗೂ ಸರ್ಕಾರಿ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಅರಿವು ಹೆಚ್ಚಲಿದ್ದು, ಬಸವರಾಜ ಬೊಮ್ಮಾಯಿ ಅವರು ಸಾಮಾನ್ಯ ವ್ಯಕ್ತಿಯಾಗಿ ಚಿಂತನೆ ನಡೆಸಿದ್ದರಿಂದಲೇ ಇಂತಹ ಜನೊಪಯೋಗಿ ಯೋಜನೆ ರೂಪುಗೊಳ್ಳಲು ಸಾಧ್ಯವಾಗಿದೆ ಎಂದರು.
ನಮ್ಮ ಕ್ಲಿನಿಕ್ಗಳು ನಗರ ಪ್ರದೇಶಗಳಲ್ಲಿ ವಾಸಿಸುವ ಬಡ, ದುರ್ಬಲ ವರ್ಗ, ಕೊಳಗೇರಿ ಮತ್ತು ವಲಸೆ ಬರುವ ಜನರಿಗೆ ಉತ್ತಮ ಗುಣಮಟ್ಟದ ಮತ್ತು ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸಲಿವೆ. ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ನಿರಂತರ ಆರೋಗ್ಯ ಪಾಲನೆಯನ್ನು ಖಾತ್ರಿಪಡಿಸುವ ಮತ್ತು ಆರೋಗ್ಯ ಸೇವೆ ಪಡೆಯಲು ತಗುಲುವ ವೆಚ್ಚ ಕಡಿಮೆಗೊಳಿಸಲು ಸಹಕಾರಿಯಾಗಲಿದ್ದು, ತುಮಕೂರು ನಗರದಲ್ಲಿ ಬಡ ಜನರು, ಬೀದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಬಡ ಜನರು ವಾಸಿಸುವ ಪ್ರದೇಶಕ್ಕೆ ಸಮೀಪದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು. ಜನರ ಆರೋಗ್ಯ ಸಂಜೀವಿನಿಯಾಗಿ ಕಾರ್ಯ ನಿರ್ವಹಿಸಲು, ಕಡು ಬಡವರಿಗಾಗಿ ದುರ್ಬಲ ಪ್ರದೇಶಗಳಿಗೆ ಆದ್ಯತೆ ನೀಡಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೊತೆಯಲ್ಲಿ, ನಮ್ಮ ಕ್ಲಿನಿಕ್ಗಳನ್ನು 30,000 ಜನಸಂಖ್ಯೆಗೆ ಒಂದರಂತೆ ಸ್ಥಾಪಿಸಲಾಗುತ್ತಿದೆ ಅದರಂತೆ ಜಿಲ್ಲೆಯಲ್ಲಿ 10 ನಮ್ಮ ಕ್ಲಿನಿಕ್ಗಳನ್ನು ಮರಳೂರು ದಿಣ್ಣೆ, ಮೇಳೆಕೋಟೆ, ಜಯಪುರ ಅಂಗನವಾಡಿ, ದೇವರಾಯನ ಪಟ್ಟಣದ ಸಮುದಾಯ ಭವನ, ದಿಬ್ಬೂರು ಅಂಗನವಾಡಿ, ಸತ್ಯಮಂಗಲ ಸಮುದಾಯ ಭವನ ಹಾಗೂ ಮಧುಗಿರಿ, ಪಾವಗಡ, ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನಲ್ಲಿ ತಲಾ ಒಂದು ನಮ್ಮ ಕ್ಲಿನಿಕ್ ತೆರೆಯಲಾಗುತ್ತಿದೆ. ಆರಂಭಿಕ ಹಂತದಲ್ಲಿ ಜಿಲ್ಲೆಯಲ್ಲಿ 02 ಕ್ಲಿನಿಕ್ ಗಳನ್ನು ನಗರದಲ್ಲಿ ಲೋಕಾರ್ಪಣೆ ಮಾಡಲಾಗಿದ್ದು, ಕೆಲವೇ ವಾರಗಳಲ್ಲಿ ಉಳಿದ ನಮ್ಮ ಕ್ಲಿನಿಕ್ಗಳು ಜನರ ಸೇವೆಗೆ ಲಭ್ಯವಿರಲಿವೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಂಜುನಾಥ್ ಡಿ.ಎನ್. ಮಾತನಾಡಿ, ನಗರ ಪ್ರದೇಶಗಳ ಬಡ ಜನತೆಗೆ ನಮ್ಮ ಕ್ಲಿನಿಕ್ಗಳು 12 ಆರೋಗ್ಯ ಸೇವೆಗಳ ಮೂಲಕ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸಲು, ನಿರಂತರ ಆರೈಕೆ ನೀಡುವ ನಿಟ್ಟಿನಲ್ಲಿ ದ್ವಿತೀಯ ಮತ್ತು ತೃತೀಯ ಹಂತದ ಆರೋಗ್ಯ ಕೇಂದ್ರಗಳಿಗೆ ರೆಫರಲ್ ಸೇವೆ ಒದಗಿಸುವ ಮೂಲಕ, ಸಾರ್ವಜನಿಕ ಆರೋಗ್ಯ ಕ್ರಮ ಸುಧಾರಿಸಲು, ಸೂಕ್ತ ಕಾರ್ಯವಿಧಾನಗಳನ್ನು ಬಲಪಡಿಸಲು ಹಾಗೂ ಸಮುದಾಯದ ಸಹಭಾಗಿತ್ವ ಉತ್ತೇಜಿಸುವಲ್ಲಿ ಸಹಕಾರಿಯಾಗಲಿವೆ. ನಮ್ಮ ಕ್ಲಿನಿಕ್ 1000 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಇಲ್ಲಿ ನಿರೀಕ್ಷಣಾ ಸ್ಥಳ, ಹೊರ ರೋಗಿಗಳ ಕೊಠಡಿ, ಚುಚ್ಚು ಮದ್ದು ನೀಡುವ ಕೊಠಡಿ, ಪ್ರಯೋಗ ಶಾಲೆ, ಯೋಗ ಕೂಠಡಿ, ಔಷಧಿ ದಾಸ್ತಾನು ಮತ್ತು ವಿತರಣಾ ಕೊಠಡಿ, ಆಡಳಿತ ಕಚೇರಿ, ಹೀಗೆ ಪ್ರತ್ಯೇಕ ಕೊಠಡಿಗಳಿದ್ದು ಆಸ್ಪತ್ರೆ ಸಿಬ್ಬಂದಿ, ಮಹಿಳಾ ಮತ್ತು ಪುರುಷ ರೋಗಿಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಿ ನಮ್ಮ ಕ್ಲಿನಿಕ್ಗೆ ಒಳಂಗಾಣ ಹಾಗೂ ಹೊರಾಂಗಣ ವಿನ್ಯಾಸ ಮಾಡಿಸಲಾಗಿದೆ.
ನಮ್ಮ ಕ್ಲಿನಿಕ್ಗಳಲ್ಲಿ ಒಬ್ಬರು ವೈದ್ಯಾಧಿಕಾರಿ, ಒಬ್ಬರು ಶುಶ್ರೂಷಕರು, ತಲಾ ಒಬ್ಬೊಬ್ಬ ಪ್ರಯೋಗಶಾಲಾ ತಂತ್ರಜ್ಞರು ಹಾಗೂ ಕಿರಿಯ ದರ್ಜೆ ಸಹಾಯಕರು, ಒಬ್ಬರು ಡಿ ದರ್ಜೇ ನೌಕರರು ಕಾರ್ಯ ನಿರ್ವಹಿಸಲಿದ್ದಾರೆ ಹಾಗೂ ಅಗತ್ಯ ಮಾನವ ಸಂಪನ್ಮೂಲ ನೇಮಕಾತಿ ಮಾಡಿಕೊಳ್ಳಲಾಗಿದೆ. ಜನರು ಎಲ್ಲಾ ರೋಗಗಳ ತಪಾಸಣೆಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲೂಕು, ಜಿಲ್ಲಾಸ್ಪತ್ರೆಗೆ ಹೋಗಬೇಕಾಗಿಲ್ಲ. ಈ ಕ್ಲಿನಿಕ್ ಗಳಿಂದಾಗಿ ಆ ಸಮಸ್ಯೆ ತಪ್ಪಲಿದೆ. ಬೇರೆ ಆಸ್ಪತ್ರೆಗಳಲ್ಲಿ ದೊಡ್ಡ ಆರೋಗ್ಯ ಸಮಸ್ಯೆಗಳ ನಿವಾರಣೆ ಕಡೆಗೆ ಹೆಚ್ಚು ಗಮನ ನೀಡಲು ಸಾಧ್ಯವಾಗಲಿದೆ. ಸೋಮವಾರದಿಂದ ಶನಿವಾರ ತನಕ ಬೆಳಗ್ಗೆ 9 ರಿಂದ ಸಂಜೆ 4.30ರ ತನಕ ನಮ್ಮ ಕ್ಲಿನಿಕ್ ತೆರೆದಿರುತ್ತವೆ. ಭಾನುವಾರ ರಜೆ ಇರಲಿದೆ. ಇವು ನಗರ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸೇವೆ ವಿಕೇಂದ್ರಿಕರಿಸಲಿವೆ. ನಗರ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸೇವೆ ವಿಕೇಂದ್ರೀಕರಿಸುವ ಜೊತೆಗೆ ಸಾಂಕ್ರಾಮಿಕ ರೋಗಗಳ ಕಣ್ಗಾವಲು ವ್ಯವಸ್ಥೆ ಬಲಪಡಿಸುತ್ತಾ, ಸಾಂಕ್ರಾಮಿಕ ರೋಗ ಉಲ್ಬಣ ಪರಿಸ್ಥಿತಿ ತ್ವರಿತಗತಿಯಲ್ಲಿ ದಾಖಲಿಸುವ ವ್ಯವಸ್ಥೆ ಹೊಂದಿದೆ. ಇದರಿಂದ ಆರೋಗ್ಯ ಸಂವರ್ಧನೆ ಹಾಗೂ ಕ್ಷೇಮ ಚಟುವಟಿಕೆಗಳ ಮೂಲಕ ಗಂಡಾಂತರಕಾರಿ ಪರಿಸ್ಥಿತಿ ನಿವಾರಿಸುವುದಾಗಿದೆ ಎಂದರು.
ಮಹಾನಗರ ಪಾಲಿಕೆಯ ಮಹಾಪೌರರಾದ ಪ್ರಭಾವತಿ ಸುಧೀಶ್ವರ್ ಮಾತನಾಡಿ, ಸಾರ್ವಜನಿಕರು ನಮ್ಮ ಕ್ಲಿನಿಕ್ಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಪಾಲಿಕೆ ಉಪ ಮಹಾಪೌರ ನರಸಿಂಹಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ್, ಜಿಲ್ಲಾ ಆರ್ ಸಿಹೆಚ್ ಅಧಿಕಾರಿ ಡಾ. ಕೇಶವ ರಾಜ್.ಜಿ. ಸೇರಿದಂತೆ ಹಿರಿಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಸದಸ್ಯರು ಹಾಜರಿದ್ದರು.
Comments are closed.