ನಾಡಗೀತೆಯ ಸಂದೇಶ ಅನುಸರಿಸಿ: ಬರಗೂರು

258

Get real time updates directly on you device, subscribe now.


ಬರಗೂರು: ಕನ್ನಡ ನಾಡಗೀತೆ ಹಾಡುವುದರ ಜೊತೆಗೆ ಹಾಡಿನ ಸಾರ ಹಾಗೂ ಸಂದೇಶವನ್ನು ಕನ್ನಡಿಗರಾದ ನಾವು ಅನುಸರಿಸಬೇಕು. ಧರ್ಮ ಹಾಗೂ ಜಾತಿಗಳ ನಡುವೆ ಭೇದ ಹಾಗೂ ಕಚ್ಚಾಟ ಮುಂದುವರೆಸಿಕೊಂಡು ನಾಡಗೀತೆಗೆ ಅವಮಾನ ಮಾಡುತ್ತಿದ್ದೇವೆ ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ಬರಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಹುಲಿಕುಂಟೆ ಹೋಬಳಿಯ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, 9ನೇ ಶತಮಾನದಲ್ಲಿ ಕನ್ನಡದ ಮೊದಲ ಕೃತಿ ಕವಿರಾಜ ಮಾರ್ಗದಲ್ಲಿ ಕವಿ ಬೇರೆ ಧರ್ಮವನ್ನು ಸಹಿಸುವುದು ಚಿನ್ನ, ಸಹಿಸದೆ ಇರುವುದು ಕಸ ಎಂದು ತಿಳಿಸಿರುತ್ತಾನೆ. ಒಂಬತ್ತನೇ ಶತಮಾನದ ಆ ಕನ್ನಡದ ಕವಿ ಕೊಟ್ಟ ಮಾತು 22ನೇ ಶತಮಾನವಾದರೂ ಇಂದಿಗೂ ಕೂಡ ಪ್ರಸ್ತುತವಾಗಿದೆ ಎಂದರೆ ನಾವು ಹೇಗೆ ನಮ್ಮ ಕನ್ನಡ ನಾಡಿನ ಪರಂಪರೆ ಅನುಸರಿಸಿದ್ದೇವೆ ಎಂಬುದು ತಿಳಿಯುತ್ತದೆ ಎಂದು ತಿಳಿಸಿದರು.

ಹೋಬಳಿ, ತಾಲೂಕ್, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಯಾವುದೇ ಸಾಹಿತ್ಯ ಸಮ್ಮೇಳನ ನಡೆದರೂ ಮೊದಲು ನಾವು ಮನುಷ್ಯರಾಗುವುದನ್ನು ಕಲಿಯಬೇಕು ಎಂದು ತಿಳಿಸಿದರು.

ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಮಾತನಾಡಿ ಸಾಹಿತ್ಯ ಸಮ್ಮೇಳನಗಳು ಕೇವಲ ವೇದಿಕೆಗಳಲ್ಲಿ ಭಾಷಣಗಳಿಗೆ, ಮನರಂಜನೆಗೆ, ಸುಳ್ಳು ಆಶ್ವಾಸನೆಗಳಿಗೆ, ಪ್ರಚಾರಕ್ಕೆ ಸೀಮಿತವಾಗಬಾರದು. ಆಯಾ ಪ್ರದೇಶದ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯನ್ನು ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ನೆಲ, ಜಲ ಸಂರಕ್ಷ ಣೆಗೆ ಬಡೆದೆಬ್ಬಿಸಲು ಪ್ರೇರಣೆಯಾಗಬೇಕು. ಜೊತೆಗೆ ನಮ್ಮ ತನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಕೆಳಮಟ್ಟದ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಗೂ ಸಮ್ಮೇಳನಗಳು ಪ್ರೇರೇಪಣೆ ನೀಡುವಂತಿರಬೇಕು ಎಂದು ತಿಳಿಸಿದರು.

ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಕರ್ನಾಟಕ ಏಕೀಕರಣವಾಗಿ 67 ವರ್ಷ ಕಳೆದರೂ ಕೂಡ ಕನ್ನಡ ಭಾಷೆ ನಮ್ಮೆಲ್ಲರ ಭಾಷೆ ಆಗಲಿಲ್ಲ. ನದಿ ನೀರಿನ ಸಮಸ್ಯೆ ಹಾಗೂ ಗಡಿ ಸಮಸ್ಯೆ ಬಗೆಹರಿಯದೆ ಇರುವುದು ದುಃಖಕರ ಸಂಗತಿ, ಕನ್ನಡ ನಾಡು, ನುಡಿ, ಪರಂಪರೆ ಹಾಗೂ ಕನ್ನಡ ನಾಡಿನ ಸಂರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕಾಗಿದೆ ಎಂದರು.

ವಿಧಾನ ಪರಿಷತ್ ಶಾಸಕ ಚಿದಾನಂದ ಎಂ ಗೌಡ ಮಾತನಾಡಿ, ಬದುಕಲು ಬೇಕಾಗುವ ವೃತ್ತಿಯ ಜೊತೆಗೆ ಸಾಹಿತ್ಯ ಅಭಿಮಾನ ಬೆಳೆಸಿಕೊಳ್ಳಬೇಕು. ನಾಟಕ, ಜಾನಪದ, ಕಲೆ, ಸಾಹಿತ್ಯ ಗಳಿಂದ ಮಾನಸಿಕ ನೆಮ್ಮದಿ ಹಾಗೂ ಜನರ ನಡುವೆ ಪರಸ್ಪರ ಬಾಂಧವ್ಯ ವೃದ್ಧಿಸಲಿದೆ, ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯಬೇಕು ಎಂದರು.

ಬರಗೂರಿನ ಪ್ರಮುಖ ಬೀದಿಗಳಲ್ಲಿ ಸಮ್ಮೇಳದ ಸರ್ವಾಧ್ಯಕ್ಷ ದೊಡ್ಡ ಬಾಣಗೆರೆ ಮಾರಣ್ಣ ಅವರನ್ನು ಮೆರವಣಿಗೆ ಮೂಲಕ ಸಭಾ ಮಂಟಪಕ್ಕೆ ಕರೆ ತರಲಾಯಿತು.

ಪತ್ರಕರ್ತರಾದ ಬರಗೂರು ವಿರುಪಾಕ್ಷ, ವಲಿಸಾಬ್ ಹಾಗೂ ಬಾಲಕೃಷ್ಣ ಗೌಡ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ, ನಿಂಗಮ್ಮ, ಬಿ.ಆರ್.ಜಯರಾಮಯ್ಯ, ಪುಟ್ಟಬಸಪ್ಪ, ಶೇಖ್ ಮಹಮದ್ ಅಲಿ, ಡಾ.ದ್ವಾರನಕುಂಟೆ ಲಕ್ಷ್ಮಣ್, ಡಾ.ಬಿ.ಆರ್.ಸಂದೀಪ್, ಕೆ.ನರಸಪ್ಪ ಮತ್ತು ಕೃಷ್ಣೇಗೌಡ ಇವರನ್ನು ಸನ್ಮಾನಿಸಲಾಯಿತು. ವಿಚಾರ ಸಂಕಿರಣ ಹಾಗೂ ಕವಿ ಗೋಷ್ಠಿ ನಡೆಸಲಾಯಿತು. ಸಾಹಿತಿ ಹೊನ್ನಗಾನಹಳ್ಳಿ ಕರಿಯಣ್ಣ ಜಾನಪದ ಗಾಯನ ನಡೆಸಿಕೊಟ್ಟರು.

ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಅಧ್ಯಕ್ಷ ವೀರಭದ್ರ ಸ್ವಾಮಿ, ತಾಲ್ಲೂಕು ಸಾಹಿತ್ಯ ಕನ್ನಡ ಪರಿಷತ್ ಅಧ್ಯಕ್ಷ ಪಾಂಡುರಂಗಯ್ಯ, ಪತ್ರಕರ್ತಎಸ್.ನಾಗಣ್ಣ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮಣ, ದೇವರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!