ಭೀಕರ ಅಪಘಾತ- ನಾಲ್ವರ ದುರ್ಮರಣ

ಗುಬ್ಬಿ ತಾಲ್ಲೂಕು ಕೊಂಡ್ಲಿ ಕ್ರಾಸ್ ಬಳಿ ನಡೆದ ದುರಂತ

22,720

Get real time updates directly on you device, subscribe now.


ಗುಬ್ಬಿ: ತಾಲ್ಲೂಕಿನ ಕೊಂಡ್ಲಿ ಕ್ರಾಸ್ ಸಮೀಪ ಕಾರು ಹಾಗೂ ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲಿ ಮೂರು ಜನ ಮೃತರಾದರೆ. ಇನ್ನೊಬ್ಬರು ಗುಬ್ಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಮೃತರೆಲ್ಲರೂ ಒಂದೇ ಕುಟುಂಬದವರಾಗಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲೂಕಿನ ನಡುವನಹಳ್ಳಿ ಗ್ರಾಮದ ರಾಮಣ್ಣ(58), ನಾರಾಯಣಪ್ಪ (54) ಅವರ ಪತ್ನಿ ನಾಗರತ್ನಮ್ಮ (40) ನಾರಾಯಣಪ್ಪನ ಮಗ ಸಾಗರ್ (23) ಎಂದು ಗುರುತಿಸಲಾಗಿದೆ. ಚಿಕ್ಕನಾಯಕನಹಳ್ಳಿ ತಾಲೂಕು ನಡುವನ ಹಳ್ಳಿ ಗ್ರಾಮದಿಂದ ಬೆಂಗಳೂರಿನ ಕಡೆಗೆ ಕುಟುಂಬದವರು ಪ್ರಯಾಣಿಸುತ್ತಿದ್ದರು. ಇವರೆಲ್ಲರೂ ಬೆಂಗಳೂರಿನಲ್ಲಿ ತರಕಾರಿ ಅಂಗಡಿ ಇಟ್ಟುಕೊಂಡು ಕೆಲಸ ನಿರ್ವಹಣೆ ಮಾಡುತ್ತಿದ್ದು ಕೆಲಸದ ಮೇರೆಗೆ ಸ್ವಗ್ರಾಮಕ್ಕೆ ಆಗಮಿಸಿ ಬುಧವಾರ ಕಾರಿನಲ್ಲಿ ನಾರಾಯಣಪ್ಪನ ಸಹೋದರ ರಾಮಣ್ಣ, ನಾರಾಯಣಪ್ಪನ ಪತ್ನಿ ನಾಗರತ್ನಮ್ಮ ಹಾಗೂ ಮಗ, ಸಾಕಿದ ನಾಯಿಯ ಜೊತೆಯಲ್ಲಿ ಬೆಂಗಳೂರಿಗೆ ಹೋಗುತ್ತಿರುವಾಗ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಕೊಂಡ್ಲಿ ಕ್ರಾಸ್ ಬಳಿ ತುಮಕೂರಿನಿಂದ ಶಿವಮೊಗ್ಗ ಕಡೆ ತೆರಳುತ್ತಿರುವ ಕ್ಯಾಂಟರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದು ಇನ್ನೊಬ್ಬರು ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ.

ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಸಾರ್ವಜನಿಕ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಎಸ್ಪಿ ರಾಹುಲ್ ಕುಮಾರ್, ಸಿಪಿಐ ನದಾಫ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಇದೇ ರಸ್ತೆಯ ಅರ್ಧ ಕಿಲೋ ಮೀಟರ್ ಹಿಂಬದಿಯಲ್ಲಿ ಮಂಗಳವಾರ ರಾತ್ರಿ ವಾಹನ ಹಾಗೂ ಕಾರು ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ವರದಿಯಾಗಿತ್ತು.

ಎನ್.ಎಚ್.206 ರಸ್ತೆಯು ಅಗಲೀಕರಣ ಕಾರ್ಯ ನಡೆಯುತ್ತಿರುವುದರಿಂದ ಪ್ರತಿ ದಿನ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಿವೆ. ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಯಾವುದೇ ಮುಂಜಾಗ್ರತೆಯನ್ನು ಎನ್ ಎಚ್206 ಅಧಿಕಾರಿಗಳು ವಹಿಸುತ್ತಿಲ್ಲ. ಹಾಗಾಗಿ ಅಪಘಾತಗಳ ಸಂಖ್ಯೆ ಅಧಿಕವಾಗುತ್ತಿದೆ ಎಂದು ಸಾರ್ವಜನಿಕರು ಪೊಲೀಸರಿಗೆ ದೂರಿದರು.

ಸುಮಾರು 1 ಗಂಟೆಗಳ ಕಾಲ ಎನ್ ಎಚ್206 ರಸ್ತೆಯು ಟ್ರಾಫಿಕ್ ಜಾಮ್ ಆಗಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Get real time updates directly on you device, subscribe now.

Comments are closed.

error: Content is protected !!