ತುಮಕೂರು: ರಾಜ್ಯ ಸರಕಾರ ಡಿಸೆಂಬರ್ 19 ರಿಂದ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತಂತೆ ಚರ್ಚೆ ನಡೆಸಿ, ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಬೇಕೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಒತ್ತಾಯಿಸಿದ್ದಾರೆ.
ನಗರದ ಎಂ.ಜಿ.ರಸ್ತೆಯ ಅಂಬೇಡ್ಕರ್ ಭವನದಲ್ಲಿ ದಲಿತ ಸಮುದಾಯದ ಮುಖಂಡರು ಆಯೋಜಿಸಿದ್ದ ಒಳ ಮೀಸಲಾತಿ ಕುರಿತು ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸರಕಾರ ಒಳ ಮೀಸಲಾತಿ ಕುರಿತಂತೆ ಉಪ ಸಮಿತಿ ರಚಿಸುವ ಮೂಲಕ ದಲಿತರ ಕಣ್ಣೊರೆಸುವ ತಂತ್ರಗಾರಿಕೆ ಅನುಸರಿಸುತ್ತಿದೆ. ಈಗಾಗಲೇ ಇಂತಹ ಹಲವಾರು ತಂತ್ರಗಾರಿಕೆಯಿಂದ ದಲಿತರು ಸಾಕಷ್ಟು ಅವಕಾಶ ಕಳೆದುಕೊಂಡು ಅಸ್ಥಿತ್ವಕ್ಕೆ ಧಕ್ಕೆ ತಂದುಕೊಂಡಿದ್ದಾರೆ. ಹಾಗಾಗಿ ಈ ಸಾಲಿನ ಚಳಿಗಾಲದ ಅಧಿವೇಶದಲ್ಲಿ ಒಳ ಮೀಸಲಾತಿ ಕುರಿತಂತೆ ಒಂದು ಸ್ಪಷ್ಟ ನಿರ್ಧಾರ ತೆಗೆದುಕೊಂಡು, ಕಳೆದ 12 ವರ್ಷಗಳಿಂದ ಕೊಳೆಯುತ್ತಾ ಬಿದ್ದಿರುವ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಚರ್ಚಿಸಿ ಜಾರಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂಬುದು ನಮ್ಮೆಲ್ಲಾ ಹೋರಾಟಗಾರರ ಆಗ್ರಹವಾಗಿದೆ ಎಂದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಅಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ, ಒಳ ಮೀಸಲಾತಿ ಎಂಬುದು ಪರಿಶಿಷ್ಟ ಜಾತಿಯಲ್ಲಿಯೇ ಇರುವ 101 ಜಾತಿಗಳ ನಡುವಿನ ಸಾಮಾಜಿಕ ನ್ಯಾಯದ ಹೋರಾಟವಾಗಿದೆ. ಈ ಹಿಂದೆ ಹೋರಾಟಗಳು ನಡೆದಾಗ, ಹೊಲೆಯರು, ಮಾದಿಗರು ಹಾಗೂ ಇತರೆ ಜಾತಿಗಳು ಒಗ್ಗೂಡದಿರುವುದನ್ನೇ ನೆಪ ಮಾಡಿ ಕೊಂಡು ಜಾರಿಗೆ ಹಿಂದೇಟು ಹಾಕಲಾಗಿತ್ತು. ಈಗ ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯಗಳು ಒಗ್ಗೂಡಿ ಇದರ ಜಾರಿಗೆ ಹೋರಾಟ ನಡೆಸುತ್ತಿರುವಾಗ ಉಪ ಸಮಿತಿ ಎಂಬ ನಾಟಕವಾಡುತ್ತಿದೆ. ಇಡಬ್ಲ್ಯುಎಸ್ ಜಾರಿ, ಲಿಂಗಾಯಿತರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಾಗ ಇಲ್ಲದ ಉಪ ಸಮಿತಿ ದಲಿತರ ವಿಚಾರದಲ್ಲಿ ಮಾತ್ರ ಏಕೆ ಎಂಬುದು ನಮ್ಮ ಪ್ರಶ್ನೆಯಾಗಿದೆ. ಈ ವಿಚಾರವನ್ನು 2023ರ ವಿಧಾನಸಭಾ ಚುನಾವಣೆ ವರೆಗೂ ಎಳೆದುಕೊಂಡು ಹೋಗಿ ದಲಿತರ ಮತ ಪಡೆಯುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ. ಈ ಬಾರಿ ದಲಿತರು ಮೋಸ ಹೋಗುವ ಪ್ರಮಯವೇ ಇಲ್ಲ. ಒಳ ಮೀಸಲಾತಿಯ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸದಿದ್ದರೆ ಬಿಜೆಪಿಯನ್ನು ಈ ಬಾರಿ ದಲಿತರು ಮನೆಗೆ ಕಳುಹಿಸುವದು ಅನಿವಾರ್ಯ ಎಂದು ಎಚ್ಚರಿಸಿದರು.
ಸಭೆಯಲ್ಲಿ ಮುಖಂಡರಾದ ಆಟೋ ಶಿವರಾಜು, ಲಕ್ಷ್ಮಿನಾರಾಯಣ್, ಮಾರುತಿ.ಸಿ, ಗಿರೀಶ್, ಬಾಲರಾಜ್, ಮನೋಜ್.ಟಿ, ನಿತೀನ್, ವಿನಯ್, ನವೀನ್, ಶಿವರಾಜು ಕುಚ್ಚಂಗಿ, ಶಿವಣ್ಣ ಕೊತ್ತಿಹಳ್ಳಿ, ನವೀನ್, ಗಂಗಾಧರ್, ಅಶೀಫ್ ಸೇರಿದಂತೆ ಹಲವರು ಇದ್ದರು.
Comments are closed.