ಕುಣಿಗಲ್: ಪ್ರಧಾನಿ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ ರೂಪಿಸಿ ಅನುಷ್ಠಾನಗೊಳಿಸುವ ಪ್ರತಿಯೊಂದು ಯೋಜನೆಯೂ ಬಡ ಜನರ, ಮಧ್ಯಮ ವರ್ಗದ ಜನರ ಹಿತಕ್ಕಾಗಿಯೇ ಇರುತ್ತದೆ ಎಂದು ಕೇಂದ್ರ ಸರ್ಕಾರದ ಬಾರಿ ಕೈಗಾರಿಕೆ, ಇಂಧನ ಖಾತೆಯ ರಾಜ್ಯ ಸಚಿವ ಕೃಶನ್ ಸಿಂಗ್ ಗುರ್ಜಾರ್ ಹೇಳಿದರು.
ಶುಕ್ರವಾರ ಮಧ್ಯಾಹ್ನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಹಿಳಾ ಸ್ವಸಹಾಯ ಸಂಘ ಹಾಗೂ ಪಿಎಂ ಕೃಷಿ ಸಮ್ಮಾನ್ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ಸಭೆಯಲ್ಲಿ ಮಾತನಾಡಿ, ಈ ಹಿಂದೆ ಈ ದೇಶದ ಪ್ರಧಾನಿಯೆ ಹೇಳಿದ್ದರು ಒಂದು ರೂ. ಸರ್ಕಾರ ನೀಡಿದರೆ ಅದು ಫಲಾನುಭವಿಗೆ ತಲುಪುವಷ್ಟರಲ್ಲಿ 15 ಪೈಸೆ ಸಿಗುತ್ತದೆ ಅಂತಾ, ಆದರೆ ಇದಕ್ಕೆ ವಿರುದ್ಧವಾಗಿ ಪ್ರಧಾನಿ ಮೋದಿ ಕೈಗೊಂಡ ಕ್ರಮಗಳಿಂದಾಗಿ ಕೇಂದ್ರ ಸರ್ಕಾರ ನೀಡುವ ಎಲ್ಲಾ ಅನುದಾನವೂ ನೇರವಾಗಿ ಫಲಾನುಭವಿಗೆ ತಲುಪುತ್ತಿದೆ ಎಂದರು.
ಕೊವಿಡ್ ಅವಧಿಯಲ್ಲಿ 20 ಕೋಟಿ ಮಹಿಳೆಯರಿಗೆ ತಲಾ ಐದು ನೂರರಂತೆ ಮೂರು ಕಂತು ಹಣ ನೇರವಾಗಿ ಪಾವತಿಸಿದರು. ರಾಷ್ಟ್ರದ ಕೋಟ್ಯಾಂತರ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಲಕ್ಷಾಂತರ ಕೋಟಿ ಅನುದಾನ ನೇರವಾಗಿ ನೀಡಿದ್ದು, ತುಮಕೂರು ಜಿಲ್ಲೆಯ 3.27 ಲಕ್ಷ ರೈತರಿಗೆ 339 ಸಾವಿರ ಕೋಟಿ ರೂಪಾಯಿ ನೇರ ಪಾವತಿ ಮಾಡಿದ್ದು, ತಾಲೂಕಿನಲ್ಲಿ 35 ಸಾವಿರಕ್ಕೂ ಹೆಚ್ಚು ರೈತರಿಗೆ 321 ಕೋಟಿ ರೂ. ನೀಡಿದ್ದಾರೆ. ಪ್ರಧಾನಿ ಮೋದಿಯವರ ಎಂಟು ವರ್ಷದ ಆಡಳಿತಾವಧಿಯಲ್ಲಿ, ಈ ಹಿಂದೆ 70 ವರ್ಷ ಆಡಳಿತ ನಡೆಸಿದ ವಿರೋಧ ಪಕ್ಷಗಳು ಮಾಡಿದ್ದ ವಿಮಾನ ನಿಲ್ದಾಣ, ಅಂತಾರಾಷ್ಟ್ರೀಯ ವೈದ್ಯಕೀಯ ಸಂಸ್ಥೆ, ಪಾಸ್ಪೋರ್ಟ್ ಸೇವಾ ಕೇಂದ್ರಗಳು ಆಗಿವೆ. ಪ್ರಧಾನಿ ಮೋದಿಜಿ ನೇತೃತ್ವದಲ್ಲಿ ಭಾರತವು 2030 ರಲ್ಲಿ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳ ಪೈಕಿ ಮೂರನೇ ರಾಷ್ಟ್ರವಾಗಿರುತ್ತದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯೆ ಹೇಳುತ್ತಿದೆ. ಹೀಗಾಗಿ ಮೋದಿಜಿ ಪ್ರಧಾನಿಯಾಗಿದ್ದರೆ ದೇಶವೂ ಸುರಕ್ಷಿತ. ದೇಶದ ಗಡಿ, ಅರ್ಥ ವ್ಯವಸ್ಥೆೆ, ಜನಜೀವನ ಎಲ್ಲವೂ ಸುರಕ್ಷಿತ ಎಂದರು.
ಜಲ ಜೀವನ್ ಮಿಶನ್ ಯೋಜನೆಯಡಿಯಲ್ಲಿ ಕಾಮಗಾರಿಗಳು ಆಮೆ ಗತಿಯಲ್ಲಿ ನಡೆಯುತ್ತಿರುವುದು ತಾವು ಭೇಟಿ ನೀಡಿದ ಹಾಸನ, ಮಂಡ್ಯ ಜಿಲ್ಲೆ ಸೇರಿದಂತೆ ತುಮಕೂರು ಜಿಲ್ಲೆಯಲ್ಲಿ ಕಂಡು ಬಂದಿದ್ದು ಕಾಮಗಾರಿ ವೇಗ ಚುರುಕುಗೊಳಿಸಲು ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಾತೃಪೂರ್ಣ ಯೋಜನೆಯ ಫಲಾನುಭವಿಗಳು ಸಂವಾದ ನಡೆಸಿ ಯೋಜನೆ ನಮಗೆ ಹೆಚ್ಚು ಉಪಯೋಗವಾಗಿದೆ ಎಂದರೆ ನರೇಗ ಯೋಜನೆಯಡಿಯಲ್ಲಿ ಮೆಟಿರಿಯಲ್ ಬಿಲ್ ಪಾವತಿ ವಿಳಂಬವಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಕೃಷಿ ಪಂಪ್ಸೆಟ್ಗೆ ವಿದ್ಯುತ್ ಪೂರೈಸುವ ಪರಿವರ್ತಕ ಸುಟ್ಟರೆ ಅದನ್ನು ಶೀಘ್ರವಾಗಿ ದುರಸ್ತಿ ಮಾಡದೆ ವಿಳಂಬ ಮಾಡಲಾಗುತ್ತಿದೆ ಎಂದು ರೈತನೋರ್ವ ಕನ್ನಡದಲ್ಲಿ ಹೇಳಿದರೂ ಅದನ್ನು ತರ್ಜುಮೆ ಮಾಡದೆ ಅಧಿಕಾರಿಗಳು ಸಮಸ್ಯೆ ಕೇಂದ್ರ ಸಚಿವರ ಗಮನಕ್ಕೆ ಬಾರದಂತೆ ಮಾಡಿದರು. ಮಹಿಳಾ ಸ್ವಸಹಾಯ ಸಂಘದ ಯೋಜನೆಯ ಬಗ್ಗೆ ಮೆಚ್ಚುಗೆ ಮಾತನಾಡುವಂತೆ ಅಧಿಕಾರಿಗಳು ಸಭೆಯಲ್ಲಿ ಫಲಾನುಭವಿಗಳಿಗೆ ಹೇಳುತ್ತಿದ್ದುದು ಕಂಡು ಬಂದಿತು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ದೇವೆಗೌಡ, ಮಾಜಿ ಸದಸ್ಯ ಅಶ್ವಥನಾರಾಯಣ, ಪಿಕಾರ್ಡ್ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್, ಉಪ ವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮಹಾಬಲೇಶ್ವರ, ಇಒ ಜೋಸೆಫ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದು ಕೆಲ ಫಲಾನುಭವಿಗಳಿಗೆ ಸರ್ಕಾರದ ಸವಲತ್ತು ವಿತರಿಸಲಾಯಿತು.
Comments are closed.