ತುಮಕೂರು: ಸಾಹಿತಿಗಳು ಹಾಗೂ ಸಾಹಿತ್ಯ ನಿನ್ನೆಯ ಗತವೈಭವ, ಇಂದಿನ ವಾಸ್ತವತೆ ಹಾಗೂ ಭವಿಷ್ಯದ ಅವಕಾಶಗಳನ್ನು ಯುವ ಜನತೆಯ ಮುಂದೆ ತರೆದಿಡುವ ಕೆಲಸ ಮಾಡಬೇಕೆಂದು ಪತ್ರಕರ್ತ ಹುಣಸವಾಡಿ ರಾಜನ್ ತಿಳಿಸಿದ್ದಾರೆ.
ನಗರದ ಗಾಜಿನ ಮನೆಯಲ್ಲಿ ಕಸಾಪ ವತಿಯಿಂದ ಹಮ್ಮಿಕೊಂಡಿದ್ದ 14 ನೇ ಜಿಲ್ಲಾ ಕಸಾಪ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು, ಇಂದಿನ ಯುವ ಜನೆತೆಗೆ ನಿನ್ನೆಯ ಬಗ್ಗೆ ತಾತ್ಸಾರ, ನಾಳೆಯ ಬಗ್ಗೆ ಭ್ರಮೆ ಇದೆ. ಹಾಗಾಗಿ ಇಂದಿನ ವಾಸ್ತವದ ಬಗ್ಗೆ ಯಾರು ಯೋಚಿಸುತ್ತಿಲ್ಲ. ಹೇಗೆ ಪಂಪ, ಕುಮಾರವ್ಯಾಸ, ಕುವೆಂಪು ಬಗ್ಗೆ ಅರಿಯದೆ ಸೃಜನಶೀಲ ಸಾಹಿತ ಸೃಷ್ಟಿ ಸಾಧ್ಯವಿಲ್ಲವೋ, ಹಾಗೆಯೇ ನಿನ್ನೆ ನಾಳೆಗಳ ಅರಿವಿಲ್ಲದಿದ್ದರೆ ಸಾಹಿತ್ಯದ ಜೊತೆಗೆ, ಬದುಕು ದುರ್ಬಲಗೊಳ್ಳಲಿದೆ ಎಂಬ ಎಚ್ಚರಿಕೆ ನೀಡಿದರು.
ಇಂದಿನ ಯುವಕರು ಅಗತ್ಯಕ್ಕಿಂತ ಹೆಚ್ಚಾಗಿ ವರ್ತಮಾನಕ್ಕೆ ಶರಣಾಗುತ್ತಿದ್ದಾರೆ. ಹೊಸ ತಲೆಮಾರಿನವರ ಒಳಗಣ್ಣು ತೆರೆಸುವ ಕೆಲಸ ಸಾಹಿತಿಗಳಿಂದ ಆಗಬೇಕಿದೆ. ಯುವಕರಲ್ಲಿ ಬದುಕಿನ ಆತ್ಮವಿಶ್ವಾಸ ಮತ್ತು ದೃಢ ನಿರ್ಧಾರ ತೆಗೆದುಕೊಳ್ಳುವ ಆತ್ಮಸ್ಥೆರ್ಯ ತುಂಬುವ ಕೆಲಸ ಆಗಬೇಕಿದೆ ಎಂದ ಅವರು ರಾಜಕೀಯವಾಗಿ ಅಲ್ಲದೆ ಎಲ್ಲಾ ವಿಧದಲ್ಲಿಯೂ ಯುವಜನರನ್ನು ಎಚ್ಚರಗೊಳಿಸುವ ಕೆಲಸ ಆಗಬೇಕು ಎಂದು ಹುಣಸವಾಡಿ ರಾಜನ್ ನುಡಿದರು.
ಸಾಹಿತ್ಯ ಓದುಗನ ಮುಂದು ಕಲ್ಪನೆಯ ಜಗತ್ತು ಮತ್ತು ವರ್ತಮಾನದ ಸವಾಲು ಮುಂದಿಡಬೇಕು. ವೈಚಾರಿಕತೆಯ ಮೂಲಕ ಸತ್ಯ, ಮಿತ್ಯಗಳ ಅರಿವು ಮೂಡಿಸುವ ಕೆಲಸ ಆಗಬೇಕು. ಸಾಹಿತ್ಯ ಜನರ ಬದುಕಿನ ಪ್ರತಿಬಿಂಬವಾಗದೆ. ಗತಿಬಿಂಬವೂ ಆದಾಗ ಮಾತ್ರ ಸಾಹಿತ್ಯಕ್ಕೆ ಹೆಚ್ಚಿನ ಬೆಲೆ ಬರಲಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಿದ್ದಗಂಗೆಯ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ತುಮಕೂರು ಪ್ರಸಿದ್ದಿ ಪಡೆದಿದೆ. ಕನ್ನಡ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಕನ್ನಡತನ ಉಳಿಯ ಬೇಕು. ಕನ್ನಡತನವನ್ನು ಪ್ರಸರಿಸುವ ಕೆಲಸ ಮಾಡಬೇಕಿದೆ. ಹಿರಿಯರ ಸನ್ಮಾನ, ಕಿರಿಯರಿಗೆ ದಾರಿ ದೀಪವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಕಳೆದ ಒಂದೆರಡು ತಿಂಗಳಿನಿಂದ ನಿರಂತರವಾಗಿ ಕೆಲಸ ಮಾಡಿ ಸಮ್ಮೇಳನದ ಯಶಸ್ಸಿಗೆ ಕಾರಣೀಭೂತರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೆನೆ. ಕೇವಲ ಸಾಹಿತ್ಯ ಕಾರ್ಯಕ್ರಮಗಳಿಗೆ ಸಿಮೀತಗೊಳಿಸದೆ ಕಲೆ, ಸಂಗೀತ, ಜನಪದ, ನೃತ್ಯ ಕಾರ್ಯಕ್ರಮಗಳಿಗೂ ಸಮಾನ ಅವಕಾಶ ನೀಡಿ ಸಂಗೀತ, ಸಾಹಿತ್ತ, ಕಲೆಯ ಸಂಗಮವಾಗಿದೆ ಎಂದರು.
ವೇದಿಕೆಯಲ್ಲಿ ಶಾಸಕ ಜಿ.ಬಿ.ಜೋತಿಗಣೇಶ್, ಡಾ.ಲಕ್ಷ್ಮಣ್ದಾಸ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಪ್ರದೀಪ, ಮುದ್ದುಕುಮಾರ್, ಡಾ.ಹೆಚ್.ಎಸ್. ನಿರಂಜನಾರಾಧ್ಯ, ಕಸಾಪ ಗೌರವ ಕಾರ್ಯದರ್ಶಿ ಡಾ.ಸಣ್ಣಹೊನ್ನಯ್ಯ ಕಂಟಲಗೆರೆ, ಡಾ.ಡಿ.ಎನ್.ಯೋಗೀಶ್ವರಪ್ಪ, ರಾಣಿ ಚಂದ್ರಶೇಖರ್, ಎಸ್.ನಾಗಣ್ಣ, ಹಾಲೆನೂರು ಲೇಪಾಕ್ಷ, ಸಮ್ಮೇಳನ ಅಧ್ಯಕ್ಷ ಪ್ರೊ.ಎಂ.ವಿ.ನಾಗರಾಜರಾವ್ ದಂಪತಿ ಇದ್ದರು.
Comments are closed.