ಅತ್ತೆ ಕೊಂದ ಅಳಿಯನಿಗೆ ಜೀವಾವಧಿ ಶಿಕ್ಷೆ

245

Get real time updates directly on you device, subscribe now.

ಮಧುಗಿರಿ: ಅತ್ತೆ ಕೊಂದ ಅಳಿಯನಿಗೆ ಇಲ್ಲಿನ 4ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಯಾದವ ಕರಕೇರ ಅವರು ಜೀವಾವಧಿ ಶಿಕ್ಷೆ ಮತ್ತು ಒಂದು ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಯಲಪೇನಹಳ್ಳಿ ಗ್ರಾಮದ ಎಸ್.ಪ್ರದೀಪ್ ಕುಮಾರ್ ಶಿಕ್ಷೆಗೊಳಗಾದ ಆರೋಪಿ.
ಈತನು 2019 ಸೆ.20 ರಂದು ಸಂಜೆ 7 ಗಂಟೆ ಸಮಯದಲ್ಲಿ ಬಡವನಹಳ್ಳಿ ಸರ್ಕಾರಿ ಆಸ್ಪತ್ರೆ ಹಿಂಭಾಗ ಬಾಡಿಗೆ ಮನೆಯಲ್ಲಿ ವಾಸವಿದ್ದ ಅತ್ತೆ ಪ್ರೇಮಲತಾ (55) ಮನೆಯ ಹಾಲ್ನಲ್ಲಿ ಬಟ್ಟೆ ಮಡಚುತ್ತಿದ್ದಾಗ ಅಳಿಯ ಎಸ್.ಪ್ರದೀಪ್ ಕುಮಾರ್ ಮನೆಗೆ ಆಗಮಿಸಿ ತನ್ನ ಹೆಂಡತಿ ಮಾನಸಳನ್ನು ಸಂಸಾರ ಮಾಡಲು ತನ್ನ ಅತ್ತೆ ಬಿಡುವುದಿಲ್ಲ ಎಂದು ಸಿಟ್ಟಾಗಿ ಅತ್ತೆಯನ್ನು ಕೊಲೆ ಮಾಡಬೇಕೆಂಬ ಉದ್ದೇಶದಿಂದ ಕೈಯಲ್ಲಿ ಚೂರಿ ಹಿಡಿದು ಅತ್ತೆ ಪ್ರೇಮಾಲತಾಳಿಗೆ ಮನಸೋ ಇಚ್ಛೆ ತಿವಿದು ಕೊಲೆ ಮಾಡಿದ್ದ, ಬಿಡಿಸಲು ಹೋದ ಪ್ರೇಮಲತಾರ ತಂದೆ ದೊಡ್ಡಣ್ಣ ಹಾಗೂ ಮಗ ವೆಂಕಟೇಶ ಅವರಿಗೂ ಸಹ ನಿಮ್ಮನ್ನೂ ಸಾಯಿಸದೆ ಬಿಡುವುದಿಲ್ಲ ಎಂದು ಅದೇ ಚೂರಿಯಿಂದ ದೊಡ್ಡಣ್ಣ ಮತ್ತು ವೆಂಕಟೇಶನ ಕಿವಿ, ಕೈ ಮತ್ತು ತಲೆಗೆ ತಿವಿದು ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ ಅಂದಿನ ಬಡವನಹಳ್ಳಿ ಠಾಣೆ ಎಎಸ್ಐ ಬಿ.ನಾಗರಾಜು ಮತ್ತು ಮುಂದಿನ ತನಿಖೆ ಕೈಗೊಂಡ ಕೆ.ಪ್ರಭಾಕರ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಆರೋಪಿತನ ಮೇಲಿನ ಆಪಾದನೆಯು ರುಜುವಾತಾಗಿದ್ದರಿಂದ ಜೀವಾವಧಿ ಶಿಕ್ಷೆ ಮತ್ತು ಒಂದು ಲಕ್ಷ ದಂಡ ವಿಧಿಸಿದ್ದು, ಕಲಂ: 307 ರಡಿ ಕೊಲೆ ಯತ್ನಕ್ಕೆ 7 ವರ್ಷ ಶಿಕ್ಷೆ ಮತ್ತು 20,000 ರೂ ದಂಡ ಅಥವಾ ಕೊಲೆ ಮಾಡುವ ಉದ್ದೇಶದಿಂದ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದರಿಂದ ಕಲಂ: 451 ರಡಿ ಎರಡು ವರ್ಷಗಳ ಸಾದಾ ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿ ಶಿಕ್ಷೆ ನೀಡಿ ಆದೇಶಿಸಿರುತ್ತಾರೆ. ದಂಡದ ಹಣದಲ್ಲಿ ಒಂದು ಲಕ್ಷ ರೂ. ಗಳನ್ನು ಮೃತಳ ಮಗ ಹಾಗೂ ಗಾಯಾಳು ವೆಂಕಟೇಶನಿಗೆ ಪರಿಹಾರವಾಗಿ ಮತ್ತು ಮತ್ತೋರ್ವ ಗಾಯಾಳು ಪ್ರೇಮಲತಾ ತಂದೆ ದೊಡ್ಡಣ್ಣನಿಗೆ 20 ರೂ. ಪರಿಹಾರವಾಗಿ ನೀಡಲು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಬಿ.ಎಂ.ನಿರಂಜನಮೂರ್ತಿ ವಾದ ಮಂಡಿಸಿದ್ದರು.

Get real time updates directly on you device, subscribe now.

Comments are closed.

error: Content is protected !!