ಜನರಿಗೆ ಅಗತ್ಯ ಮಾಹಿತಿ, ಸೌಲಭ್ಯ ನೀಡಿ

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸೂಚನೆ

107

Get real time updates directly on you device, subscribe now.


ತುಮಕೂರು: ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರೊಂದಿಗೆ ನಮ್ಮ ವರ್ತನೆ ಗೌರವಯುತವಾಗಿದ್ದು, ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಸೂಕ್ತ ಸಲಹೆ, ಸೌಲಭ್ಯ ನೀಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಆಯ್ದ ಗ್ರಾಮಗಳಲ್ಲಿ ನಡೆಯುತ್ತಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಗಳಲ್ಲಿ ತಿಪಟೂರು ತಾಲೂಕಿನ ದಸರಿಘಟ್ಟ ಗ್ರಾಮಕ್ಕೆ ಅನಿರೀಕ್ಷಿತ ಭೇಟಿ ನೀಡುವ ಮೂಲಕ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಗ್ರಾಮೀಣ ಜನರ ಸಮಸ್ಯೆ ಸ್ಥಳದಲ್ಲೇ ಆಲಿಸಿ, ಅರ್ಹತೆ ಅನುಸಾರ ಸರ್ಕಾರದ ಸೌಲಭ್ಯಗಳನ್ನು ತ್ವರಿತವಾಗಿ ಸಾರ್ವಜನಿಕರಿಗೆ ಒದಗಿಸಿ ಕೊಡುವುದೇ ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದ್ದು, ಯಾವುದೇ ಸಮಸ್ಯೆ ಇದ್ದರೂ ಮುಕ್ತವಾಗಿ ನಮ್ಮ ಜೊತೆಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಿ. ನಿಮ್ಮ ಸಮಸ್ಯೆ ಆಲಿಸಲು ನಿಮ್ಮ ಊರಿಗೆ ಬಂದಿದ್ದೇವೆ ಎಂದು ತಿಳಿಸಿದರು.

ಎಲ್ಲಾ ಇಲಾಖೆಗಳ ಜಿಲ್ಲಾ ಮತ್ತು ತಾಲೂಕ್ ಮಟ್ಟದ ಅಧಿಕಾರಿಗಳು ಗ್ರಾಮದಲ್ಲೇ ವಾಸ್ತವ್ಯ ಹೂಡಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಸಮಸ್ಯೆ ಪರಿಹರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ 2500 ಹೆಚ್ಚು ಹಳ್ಳಿಗಳಿದ್ದು, ಈಗ 562 ಬೇಚರಾಕ್ ಹಳ್ಳಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗಿದೆ. ಒಂದೂವರೆ ವರ್ಷದಲ್ಲಿ ಸುಮಾರು 2 ಲಕ್ಷ ಪಹಣಿ ಪರಿಶೀಲಿಸಿ ಸರಿಪಡಿಸಲಾಗಿದೆ. 3ನೇ ಕಲಂನಲ್ಲಿ ಭೂಮಿ ವಿಸ್ತೀರ್ಣ, 9ನೇ ಕಲಂನಲ್ಲಿ ಅನುಭವದಾರ, ಮಾಲೀಕರ ಹೆಸರು ಹಾಗೂ ವಿಸ್ತೀರ್ಣ ಹೊಂದಾಣಿಕೆ ಇರುತ್ತಿರಲಿಲ್ಲ. ಅಂತಹ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣ ಜಿಲ್ಲೆಯಲ್ಲಿದ್ದವು. ಅಂತಹ ಪ್ರಕರಣಗಳನ್ನು ಬಗೆಹರಿಸಲಾಗಿದೆ. ಜಿಲ್ಲೆಯ ಎಲ್ಲಾ ಹಳ್ಳಿಗಳಲ್ಲಿ ಸ್ಮಶಾನಕ್ಕೆ ಮತ್ತು ಘನ ತ್ಯಾಜ್ಯ ಸಂಗ್ರಹಣ ಘಟಕಕ್ಕೆ ಜಾಗ ಒದಗಿಸಲಾಗಿದೆ ಎಂದು ತಿಳಿಸಿದರು.

ಪಶುಪಾಲನಾ ಇಲಾಖೆಯಿಂದ ವಸ್ತುಪ್ರದರ್ಶನ ಮಳಿಗೆ
ಇಲಾಖಾ ವತಿಯಿಂದ ಸಾರ್ವಜನಿಕರಿಗೆ ದೊರೆಯಬಹುದಾದ ಸಾಲ, ಸೌಲಭ್ಯ ಮಾಹಿತಿ ಒಳಗೊಂಡ ವಸ್ತು ಪ್ರದರ್ಶನದ ಮಳಿಗೆ ಸಾರ್ವಜನಿಕರನ್ನು ಆಕರ್ಷಿಸಿತು. ಪಶುಪಾಲನಾ ಇಲಾಖೆ ಸಹಾಯಕ ನಿದೇರ್ಶಕ ಡಾ.ಕೆ.ಜಿ. ನಂದೀಶ ಹಾಗೂ ಪಶು ಚಿಕಿತ್ಸಾಲಯದ ದಸರಿಘಟ್ಟ ಗ್ರಾಮದ ಪಶು ವ್ಯೆದ್ಯಾಧಿಕಾರಿ ಡಾ.ಮಂಜುನಾಥ್ ಅವರು ಇಲಾಖೆಯ ವಿವಿಧ ಯೋಜನೆಗಳ ಸೌಲಭ್ಯ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.
ಆರೋಗ್ಯ ಇಲಾಖೆಯ ವತಿಯಿಂದ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಿ, ವಿವಿಧ ಪರಿಕರ ವಿತರಿಸಲಾಯಿತು. ವಿವಿಧ ಇಲಾಖೆಗಳು ವಸ್ತು ಪ್ರದರ್ಶನ ಮಳಿಗೆ ತೆರದು ಇಲಾಖೆಯ ವಿವಿಧ ಯೋಜನೆಗಳ ಸೌಲಭ್ಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

49 ಅರ್ಜಿಗಳ ಸಲ್ಲಿಕೆ, ಸ್ಥಳದಲ್ಲೇ 49 ಅರ್ಜಿಗಳ ಇತ್ಯರ್ಥ
ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ದಸರೀಘಟ್ಟ ಗ್ರಾಮಸ್ಥರು ಹಾಗೂ ವಿವಿಧ ಗ್ರಾಮಗಳಿಂದ ಬಂದ ಗ್ರಾಮಸ್ಥರು 49 ಅಹವಾಲು ಅರ್ಜಿ ಸಲ್ಲಿಕೆ ಮಾಡಿದ್ದರು. ಕಂದಾಯ ಇಲಾಖೆಗೆ ಸಂಬಂಧಿಸಿದ 36, ಪಂಚಾಯತ್ ಇಲಾಖೆಗೆ ಸಂಬಂಧಿಸಿದ 8, ಭೂ ಮಾಪನ ಇಲಾಖೆಗೆ ಸಂಬಂಧಿಸಿದ 02 ಸೇರಿದಂತೆ ಹಲವು ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿ ಸಲ್ಲಿಸಿದ್ದರು. ಸಾರ್ವಜನಿಕರ ಹತ್ತು ಹಲವು ಕುಂದು ಕೊರತೆಯನ್ನು ಸಮಾಧಾನದಿಂದ ಆಲಿಸುತ್ತಾ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸ್ಥಳದಲ್ಲಿಯೇ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಮಾತನಾಡಿ, ಸಾರ್ವಜನಿಕರು ಸಲ್ಲಿಸಿರುವ ಎಲ್ಲಾ ಸಮಸ್ಯೆ ಬಗೆಹರಿಸಲಾಗಿದ್ದು, ಸರ್ಕಾರಿ ವ್ಯವಸ್ಥೆಯು ಸಾರ್ವಜನಿಕರ ಸಮಸ್ಯೆ ತ್ವರಿತವಾಗಿ ಬಗೆಹರಿಸಲಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಸ್ಥಳದಲ್ಲೇ ಎಲ್ಲಾ 49 ಅರ್ಜಿ ಇತ್ಯರ್ಥ ಪಡಿಸಲಾಗಿದೆ ಎಂದು ತಹಸೀಲ್ದಾರ್ ಚಂದ್ರಶೇಖರ ಮಾಹಿತಿ ನೀಡಿದರು.

ನಂತರ ಗ್ರಾಮೀಣ ಪ್ರತಿಭೆಗಳ ಹಾಗೂ ಕಲೆಗೆ ಪ್ರೋತ್ಸಾಹಿಸಲು ಪೂರಕವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಉಪ ವಿಭಾಗಾಧಿಕಾರಿ ಕಲ್ಪಶ್ರೀ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚೆನ್ನಕೇಶವಮೂರ್ತಿ, ಗ್ರಾಮ ಪಂಚಾಯತಿ ಅಧ್ಯಕ್ಷರು, ಗ್ರಾಮ ಪಂಚಾಯತಿ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!