ತುಮಕೂರು: ಜನ ಸಾಮಾನ್ಯರು ತಮ್ಮ ಜಮೀನು ಮತ್ತಿತರ ದಾಖಲೆಗಳಿಗಾಗಿ ಸರಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ಸರಕಾರವೆ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ ಎಂಬ ಕಾರ್ಯಕ್ರಮದ ಮೂಲಕ ಸರಕಾರಿ ಆಡಳಿತವನ್ನೇ ಜನರ ಮನೆ ಬಾಗಿಲಿಗೆ ತಂದಿದ್ದು, ಇದರ ಲಾಭವನ್ನು ಎಲ್ಲರೂ ಪಡೆದುಕೊಳ್ಳುವಂತೆ ಸಂಸದ ಜಿ.ಎಸ್.ಬಸವರಾಜು ಕರೆ ನೀಡಿದ್ದಾರೆ.
ತಮ್ಮ ಹುಟ್ಟೂರಾದ ಗಂಗಸಂದ್ರದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಕಾರ್ಯಕ್ರಮದಲ್ಲಿ ತಹಶೀಲ್ದಾರರೊಂದಿಗೆ ಸರ್ವೆ, ತೋಟಗಾರಿಕೆ, ಕೃಷಿ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನಗರ ಪಾಲಿಕೆ ಅಧಿಕಾರಿಗಳು ಸ್ಥಳದಲ್ಲಿದ್ದು, ಸಾರ್ವಜನಿಕರು ನೀಡುವ ಅರ್ಜಿಗಳಿಗೆ ಸಾಧ್ಯವಾದ ಮಟ್ಟಿಗೆ ಇಂದೇ ಪರಿಹಾರ ಸೂಚಿಸಲಿದ್ದಾರೆ. ಹಾಗಾಗಿ ಜನರು ತಮ್ಮ ಅಹವಾಲು ಸಲ್ಲಿಸಿ, ಪರಿಹಾರ ಕಂಡುಕೊಳ್ಳಬೇಕೆಂದರು.
ಈ ಗ್ರಾಮದಲ್ಲಿ 1934ರಲ್ಲಿ ಹುಟ್ಟಿದ್ದು, ನಮ್ಮ ಕಾಲದವರು ಈಗ ಕಡಿಮೆ, ಯುವಕರೇ ಹೆಚ್ಚಾಗಿದ್ದಾರೆ.
ಅವರು ಗ್ರಾಮದ ಅಭಿವೃದ್ಧಿಗೆ ಏನು ಬೇಕು ಎಂಬುದನ್ನು ತಮ್ಮಲ್ಲಿಯೇ ಚರ್ಚೆ ನಡೆಸಿ ಒಮ್ಮತದಿಂದ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದರೆ ಅದನ್ನು ಮಾಡಿಕೊಡಲು ಸರಕಾರ ಸಿದ್ಧವಿದೆ. ನಮ್ಮ ಅಧಿಕಾರ ಮುಂದಿನ ಒಂದುವರೆ ವರ್ಷವಿದೆ. ಆ ಅವಧಿಯೊಳಗೆ ಈ ಗ್ರಾಮಕ್ಕೆ ಉತ್ತಮ ರಸ್ತೆ ನಿರ್ಮಿಸಿ, ಗ್ರಾಮದ ಹರಿಜನ ಕಾಲೋನಿಯೂ ಸೇರಿದಂತೆ ನಗರಕ್ಕೂ, ಹಳೆಯ ಊರಿಗೆ ಯಾವುದೇ ವ್ಯತ್ಯಾಸ ಇರದಂತೆ ಮೂಲಭೂತ ಸೌಕರ್ಯ ಒದಗಿಸಬೇಕೆಂಬುದು ನಮ್ಮ ಗುರಿಯಾಗಿದೆ. ಹಾಗಾಗಿ ಯುವ ಜನರು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಸಂಸದ ಜಿ.ಎಸ.ಬಸವರಾಜು ಸಲಹೆ ನೀಡಿದರು.
ತುಮಕೂರು ಉಪ ವಿಭಾಗಾಧಿಕಾರಿ ಅಜಯ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಸರಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ ಎಂಬ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ತಿಂಗಳ 3ನೇ ಶನಿವಾರ ಒಂದೊಂದು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಗ್ರಾಮ ವಾಸ್ತವ್ಯ ಮಾಡಿ, ಅಲ್ಲಿನ ಜನರ ಸಮಸ್ಯೆಗಳನ್ನು ಸ್ಥಳೀಯದಲ್ಲಿಯೇ ಪರಿಶೀಲಿಸುವ ಕೆಲಸ ಮಾಡಲಾಗುತ್ತಿದೆ. ಪ್ರಸ್ತುತ ಗಂಗಸಂದ್ರದಲ್ಲಿ ನಮ್ಮ ಸರ್ವೆ ಪ್ರಕಾರ ಸುಮಾರು 15 ಜನ ಅರ್ಹರಿಗೆ ಮಾಸಾಶನ ದೊರೆತಿರಲಿಲ್ಲ. ಇಂದು ಅವರಿಗೆ ಮಾಸಾಶನ ಮಂಜೂರಾತಿ ಪತ್ರ ನೀಡಲಾಗುತ್ತಿದೆ. ಇದರ ಜೊತೆಗೆ ಪಹಣಿ ತಿದ್ದುಪಡಿ, ಪೌತಿ ಖಾತೆ, ಪಹಣಿ 3-9 ಕಲಂ ವ್ಯತ್ಯಾಸ ಸರಿಪಡಿಸುವಿಕೆ ಸೇರಿದಂತೆ ಹಲವಾರು ಇಲಾಖೆಗಳ ಅಧಿಕಾರಿಗಳು ತಮ್ಮಲ್ಲಿರುವ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಲಿದ್ದಾರೆ. ಸಾರ್ವಜನಿಕರು ಸಾವಧಾನದಿಂದ ಅರ್ಜಿ ನೀಡಿ, ಪರಿಹಾರ ಕಂಡುಕೊಳ್ಳುವಂತೆ ಸಲಹೆ ಮಾಡಿದರು.
ತುಮಕೂರು ತಾಲೂಕು ದಂಡಾಧಿಕಾರಿ ಸಿದ್ದೇಶ್ ಮಾತನಾಡಿ, ಸಾರ್ವಜನಿಕರ ಕುಂದು ಕೊರತೆಯನ್ನು ಖುದ್ದು ಬಗೆಹರಿಸುವ ನಿಟ್ಟಿನಲ್ಲಿ ಸರಕಾರವೇ ಜನರ ಮನೆ ಬಾಗಿಲಿಗೆ ಬಂದಿದೆ. ಇದೊಂದು ಸುರ್ವಣ ಅವಕಾಶ. ಇದರ ಸದುಪಯೋಗ ಪಡೆದುಕೊಂಡು ಹಲವಾರು ದಿನದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜಿ.ಬಿ.ಜೋತಿಗಣೇಶ್ ವಹಿಸಿದ್ದರು. ಇದೇ ವೇಳೆ 15ಕ್ಕೂ ಹೆಚ್ಚು ಜನರಿಗೆ ಮಾಸಾಶನ, ಕಾರ್ಮಿಕ ಇಲಾಖೆಯಿಂದ ಗುರುತಿನ ಕಾರ್ಡ್, ರೇಷ್ಮೆ ಇಲಾಖೆಯಿಂದ ಫಲಾನುಭವಿಗಳಿಗೆ ಸವಲತ್ತು ನೀಡಲಾಯಿತು.
ವೇದಿಕೆಯಲ್ಲಿ ಪಾಲಿಕೆ ಸದಸ್ಯ ಮನುಗೌಡ, ಗುರುಸಿದ್ದೇಗೌಡ, ಬಸವರಾಜು, ಡಿಹೆಚ್ಓ ಡಾ.ಮಂಜುನಾಥ್, ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣಪ್ಪ, ಆರ್ಐ ರಾಘವೇಂದ್ರ, ಅಜಯಕುಮಾರ್ ಇತರರು ಇದ್ದರು.
Comments are closed.