ಪಾಕ್ ವಿದೇಶಾಂಗ ಸಚಿವನ ಬುದ್ಧಿ ದಿವಾಳಿಯಾಗಿದೆ: ಗುರ್ಜಾರ್

195

Get real time updates directly on you device, subscribe now.


ಕುಣಿಗಲ್: ಪಾಕಿಸ್ತಾನ ದಿವಾಳಿ ಅಂಚಿನಲ್ಲಿರುವ ದೇಶ, ಹೀಗಾಗಿ ಪಾಕಿಸ್ತಾನದ ವಿದೇಶಾಂಗ ಸಚಿವರ ಬುದ್ಧಿಯೂ ದಿವಾಳಿಯಾಗಿದ್ದು ನಮ್ಮ ದೇಶದ ಪ್ರಧಾನಿ ಮೋದಿಯವರ ಬಗ್ಗೆ ಅಸಂಬದ್ದ ಹೇಳಿಕೆ ನೀಡುತ್ತಿದ್ದಾರೆ. ಇದು ಅವರ ಮನಸ್ಥಿತಿ ತೋರಿಸುತ್ತದೆ ಎಂದು ಕೇಂದ್ರಭಾರಿ ಕೈಗಾರಿಕೆ ಹಾಗೂ ಇಂಧನ ಖಾತೆ ರಾಜ್ಯಸಚಿವ ಕೃಷನ್ ಪಾಲ್ ಗುರ್ಜಾರ್ ಹೇಳಿದರು.

ಶನಿವಾರ ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾಕಿಸ್ತಾನ ಈ ಹಿಂದೆ ಭಾರತದ ಪ್ರಧಾನಿಗಳೆಂದರೆ ಭಯಪಡುತ್ತಿರಲಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದಾಗಿನಿಂದ ಪ್ರತಿಯೊಂದು ವಿಷಯಕ್ಕೂ ಮೋದಿಯವರನ್ನು ಟೀಕಿಸುತ್ತಿದ್ದಾರೆ. ಇದು ಖಂಡನೀಯ ಎಂದರು.

ಸ್ವತಹ ಪಾಕಿಸ್ತಾನವೇ ದಿವಾಳಿ ಅಂಚಿನಲ್ಲಿರುವ ರಾಷ್ಟ್ರವಾಗಿದ್ದು ಅಲ್ಲಿನ ಜನತೆ ಪ್ರಧಾನಿ ಮೋದಿಜಿಯವರನ್ನು ಕೊಂಡಾಡುತ್ತಿದ್ದರೆ, ವಿದೇಶಾಂಗ ಸಚಿವ ಮಾತ್ರ ಮೋದಿಯವರನ್ನು ಕಟು ಶಬ್ದಗಳಿಂದ ಟೀಕೆ ಮಾಡುತ್ತಿದ್ದಾರೆ. ಅವರಿಗೆ ಮೋದಿಜಿ ಅವರನ್ನು ಕಂಡರೆ ಅಷ್ಟು ಅಕ್ರೋಶ, ಸಿಟ್ಟು ಇದೆ. ಆದರೆ ಮೋದಿಜಿಯವರು ಇವುಗಳ ಬಗ್ಗೆ ತಲೆಕೆಡಿಸಿ ಕೊಳ್ಳುವುದಿಲ್ಲ. 2030ಕ್ಕೆ ಭಾರತವು ಜಗತ್ತಿನ ಅಗ್ರ ಸ್ಥಾನದಲ್ಲಿ ಇರುವ ರಾಷ್ಟ್ರವನ್ನಾಗಿಸುವ ಸಂಕಲ್ಪಹೊಂದಿ ಕೆಲಸ ಮಾಡುತ್ತಿದ್ದಾರೆ. ವಿರೋಧಿಗಳು ಯಾರೆ ಆಗಿರಲಿ ಮೋದಿಯವರನ್ನು ಟೀಕಿಸಿ, ನಿಂದಿಸುವ ಬದಲು ಅವರು ಮಾಡುವ, ಕೈಗೊಳ್ಳುವ ಜನಪರ ಕಾರ್ಯಗಳ ಪ್ರಗತಿ ಅವಲೋಕಿಸಿ ಅಳವಡಿಸಿಕೊಂಡರೆ ಅವರು ಸಹ ಉದ್ಧಾರವಾಗಬಹುದು ಎಂದರು.

ದೇಶವೂ ಈ ಹಿಂದೆ ಅಸಮರ್ಥ, ಅಬಲ, ಅವಲಂಬಿ ಪ್ರಧಾನ ಮಂತ್ರಿಯನ್ನು ನೋಡಿತ್ತು. ಈಗ ಕಳೆದ ಎಂಟು ವರ್ಷಗಳಿಂದ ದೇಶವು ಸಬಲ, ಸದೃಢ, ಸ್ವಾವಲಂಬಿ ಪ್ರಧಾನಿಯನ್ನು ನೋಡುತ್ತಿದೆ. ಇದರಿಂದಾಗಿ ದೇಶದ ಆರ್ಥಿಕತೆ, ಜನರು, ಗಡಿಗಳು ಸಹ ತುಂಬಾ ಸುರಕ್ಷಿತವಾಗಿದೆ. ಐರೋಪ್ಯ ರಾಷ್ಟ್ರಗಳು ಸೇರಿದಂತೆ ಅಮೆರಿಕಾ, ಶ್ರೀಲಂಕ ಇತರೆ ರಾಷ್ಟ್ರಗಳ ಆರ್ಥಿಕ ಸ್ಥಿತಿ ಹದಗೆಟ್ಟರೂ ಭಾರತದ ಆರ್ಥಿಕತೆ ದಾಪುಗಾಲು ಹಾಕುತ್ತಾ ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರವಾಗುವತ್ತ ಮುನ್ನಡೆಯುತ್ತಿದೆ ಎಂದರು.

2023ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ, 2024ರಲ್ಲಿ ರಾಷ್ಟ್ರದಲ್ಲಿ ಪುನಹ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಕಾರ್ಯಕರ್ತರಿಗೆ ಶಕ್ತಿ ತುಂಬಲು ಸಭೆ ನಡೆಸುತ್ತಿದ್ದು, ಈಗಾಗಲೆ ಬೆಂಗಳೂರು ಗ್ರಾಮಾಂತರ, ಮಂಡ್ಯ ಹಾಗೂ ಹಾಸನ ಜಿಲ್ಲೆಯ ವಿವಿಧ ವಿಧಾನಸಭೆ ಕ್ಷೇತ್ರದಲ್ಲಿ ಸಭೆ ನಡೆಸಿ ಕೇಂದ್ರ, ರಾಜ್ಯದ ಡಬಲ್ ಇಂಜಿನ್ ಸರ್ಕಾರಗಳು ಜನತೆಗೆ ನೀಡಿರುವ ಜನಪರ ಕಲ್ಯಾಣ ಕಾರ್ಯಗಳನ್ನು ಜನತೆಗೆ ಮನವರಿಕೆ ಮಾಡಿಕೊಡಬೇಕೆಂದು ಕಾರ್ಯಕರ್ತರಿಗೆ, ಪ್ರಮುಖರಿಗೆ ತಿಳಿಸಿರುವುದಾಗಿ ಹೇಳಿದ ಅವರು ನಿರುದ್ಯೋಗ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಬಜೆಟ್ನಲ್ಲಿ ಘೋಷಣೆ ಮಾಡಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಂಡಲ್ಲಿ ಸಹಜವಾಗಿ ಉದ್ಯೋಗ ಸೃಷ್ಟಿಯಾಗುತ್ತವೆ. ಕೌಶಲ್ಯ ಸಚಿವಾಲಯದ ಸ್ಥಾಪನೆ ಮೂಲಕ ದೇಶದ ಯುವ ಜನತೆ ಉದ್ಯೋಗ ಅರಸುವ ಬದಲು ಉದ್ಯೋಗದಾತರನ್ನಾಗಿಸಲು ಕ್ರಮ ವಹಿಸುತ್ತಿದ್ದಾರೆ ಎಂದರು.

ಮುದ್ರಾ ಯೋಜನೆಯಲ್ಲಿ ಬ್ಯಾಂಕುಗಳು ಸರಿಯಾಗಿ ಸ್ಪಂದನೆ ಮಾಡದಿರುವ ಬಗ್ಗೆ ವ್ಯಾಪಕ ದೂರುಗಳಿವೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಯೋಜನೆ ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಮೋದಿಜಿ ಸರ್ಕಾರ ಬಂದಾಗಿನಿಂದ ಪಾವಗಡದಲ್ಲಿ ಏಶಿಯಾ ಖಂಡದಲ್ಲೆ ಮೊದಲ ಬಾರಿಗೆ 13 ಸಾವಿರ ಎಕರೆಯಲ್ಲಿ ಸೋಲಾರ್ ಪಾರ್ಕ್, ಗುಬ್ಬಿ ಸಮೀಪ 650 ಕೊಟಿ ರೂ. ವೆಚ್ಚದಲ್ಲಿ ಹೆಲಿಕಾಪ್ಟರ್ ಘಟಕ ಸೇರಿದಂತೆ ಇತರೆ ಬೃಹತ್ ಕೈಗಾರಿಕೆ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಮೆಕ್ಇನ್ ಇಂಡಿಯಾ ಯೋಜನೆಯಡಿ ದೇಶದ ರಕ್ಷಣಾ ಸಾಮಾಗ್ರಿಗಳನ್ನು ದೇಶದಲ್ಲಿಯೆ ತಯಾರಿಸಲು ಒತ್ತು ನೀಡಿದ್ದರಿಂದ ಶೇ.70 ರಷ್ಟು ರಕ್ಷಣಾ ಸಾಮಾಗ್ರಿಗಳು ಇಲ್ಲಿಯೆ ತಯರಾಗುವ ಮೂಲಕ ಹೇರಳ ಉದ್ಯೋಗವಕಾಶ ಸೃಷ್ಟಿಯಾಗಿವೆ. ರಾಜ್ಯದಲ್ಲಿ 2023ರಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಶಕ್ತಿಯಾಗಿ ಶ್ರಮಿಸುವ ಅಗತ್ಯತೆ ಹೆಚ್ಚಿದೆ ಎಂದರು.

ಮಾಜಿ ಸಂಸದ ಎಸ್.ಪಿ.ಮುದ್ದಹನುಮೇ ಗೌಡ, ಮಾಜಿ ಎಂಎಲ್ಸಿ ಅಶ್ವಥನಾರಾಯಣ, ಜಿಪಂ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್, ತಾಲೂಕು ಅಧ್ಯಕ್ಷ ಬಲರಾಮ, ರಾಜ್ಯ ಕಾರ್ಯದರ್ಶಿ ಭಾರತಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!