ಕುಣಿಗಲ್: ತಾಲೂಕಿನ ರೈತರು ಅನ್ನದ ಬೆಳೆಗಳಾದ ರಾಗಿ, ಭತ್ತ ತರಕಾರಿ ಬೆಳೆಯುವ ಬದಲು ದುಡ್ಡಿನ ಬೆಳೆಗಳಾದ ತೆಂಗು, ಅಡಿಕೆ ಬೆಳೆಗಳ ಬಗ್ಗೆ ಒಲವು ತೋರುತ್ತಿರುವುದು ಆತಂಕದ ವಿಷಯ ಎಂದು ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸೊಂದಲಗೆರೆ ಲಕ್ಷ್ಮೀಪತಿ ಹೇಳಿದರು.
ಶನಿವಾರ ಪಟ್ಟಣದ ಬಯಲು ರಂಗಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾದ ತಾಲೂಕು ಮೂರನೆ ಕನ್ನಡ ಸಾಹಿತ್ಯ ಸಮ್ಮೇಳನದ ಶ್ರೀಸಿದ್ದಲಿಂಗೇಶ್ವರ ಸ್ವಾಮಿ ವೇದಿಕೆಯಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿ, ತಾಲೂಕಿನ ಮುಖ್ಯಬೆಳೆ ರಾಗಿ, ಭತ್ತ, ಕಬ್ಬು, ಆದರೆ ರೈತರು ಇತ್ತೀಚಿನ ದಿನಗಳಲ್ಲಿ ಅಡಿಕೆ, ತೆಂಗು ಬೆಳೆಗಳತ್ತ ವಾಲುತ್ತಿರುವುದು ನೋಡಿದರೆ ರಾಗಿ ಕೆಜಿಗೆ ಮುನ್ನೂರು ರೂ. ಆದರೂ ಆಶ್ಚರ್ಯ ಪಡುವಂತಿಲ್ಲ ಎಂದರು.
ತಾಲೂಕಿನಲ್ಲಿ ರೈತರು ದುಡ್ಡಿನ ಬೆಳೆಗಳ ಬಗ್ಗೆ ಹೆಚ್ಚು ಆದ್ಯತೆ ನೀಡದೆ ತಮ್ಮ ಜೀವ, ಜೀವನ ಕಾಪಾಡುವಂತೆ ಅನ್ನದ ಬೆಳೆಗಳ ಜೊತೆ ತರಕಾರಿ ಬೆಳೆಗಳನ್ನು ಬೆಳೆಯುವ ಮೂಲಕ ರಾಜ್ಯದ ರಾಜಧಾನಿಗೆ ಸರಬರಾಜು ಮಾಡಿ ಉತ್ತಮ ಸಂಪಾದನೆ ಮಾಡಿ ಬದುಕು ಕಟ್ಟಿಕೊಳ್ಳಬಹುದು ಎಂದರು.
ತಾಲೂಕಿನ ಹಲವು ಗಣ್ಯರು, ಮಹನೀಯರು ರಾಜಕೀಯ, ಸಾಹಿತ್ಯ, ಸಾಂಸ್ಕೃತಿಕ, ಕ್ರೀಡಾ, ಕೃಷಿ, ವಿದ್ಯಾ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ತಾಲೂಕಿನ ಜನರು ಕನ್ನಡ ಭಾಷೆಯ ಬಗ್ಗೆ ಹೆಚ್ಚು ಒಲವು ಹೊಂದಿದ್ದರೂ ಆಂಗ್ಲ ಭಾಷೆಯ ಬಗ್ಗೆ ವ್ಯಾಮೋಹ ನಿಜಕ್ಕೂ ಸರಿಯಲ್ಲ. ಆಂಗ್ಲ ಭಾಷೆಯನ್ನು ಕುರುಕಲು ತಿಂಡಿಯ ರೂಪದಲ್ಲಿಟ್ಟುಕೊಂಡು, ಕನ್ನಡ ಭಾಷೆಯನ್ನು ಅನ್ನದ ಸ್ಥಾನದಲ್ಲಿಟ್ಟು ಕೊಳ್ಳಬೇಕಾಗಿದೆ ಎಂದರು.
ಪ್ರಸಕ್ತ ಸ್ಥಿತಿಯಲ್ಲಿ ಕನ್ನಡ ಭಾಷೆಗೆ ಹೆಚ್ಚು ಆತಂಕ ಇರುವುದು ಆಂಗ್ಲ ಭಾಷೆಯಿಂದ ಎನ್ನುವುದಕ್ಕೆ ಬದಲಾಗಿ ಹಿಂದಿ ಭಾಷೆಯಿಂದ ಎಂಬುದನ್ನು ಮನಗಾಣಬೇಕಿದೆ. ಪ್ರಾಂತೀಯ ಭಾಷೆಯಾದ ಹಿಂದಿ ಭಾಷೆಯಿಂದ ಯಾವುದೆ ಉಪಯೋಗವಿಲ್ಲ. ನಮಗೆ ತಂತ್ರಜ್ಞಾನ, ಆಧುನಿಕ ವಿಜ್ಞಾನದ ಮಾಹಿತಿ ತಿಳಿಯುವುದು ಆಂಗ್ಲ ಭಾಷೆಯಿಂದ, ಆದರೂ ಕನ್ನಡ ಭಾಷೆಯ ಏಳಿಗೆಗೆ ತಡೆಯುಂಟು ಮಾಡುವ ಇತರೆ ಭಾಷೆಗಳನ್ನು ಎಲ್ಲರೂ ಒಗ್ಗಟ್ಟಾಗಿ ತಡೆಯಬೇಕು. ಮುಂದಿನ ದಿನಗಳಲ್ಲಿ ಡಿಜಿಟಲ್ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿರುವ ಕಾರಣ ಈ ತಂತ್ರಜ್ಞಾನದಲ್ಲಿ ಕನ್ನಡದ ಬಳಕೆ ಕರಾರುವಕ್ಕಾಗಿ ಶೇ.99 ರಷ್ಟು ಸ್ಪುಟವಾಗಿ ಡಿಜಿಟಲಿಕರಣಗೊಳ್ಳುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯಸರ್ಕಾರ ಕ್ರಮಕೈಗೊಂಡು ವಹಿವಾಟು ಕನ್ನಡದಲ್ಲಿ ನಡೆಯುವಂತಾಗಬೇಕಿದೆ. ಕನ್ನಡಿಗರು ಮೌಢ್ಯಗಳಿಂದ ದೂರವಾಗಿ ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡುವ ವಿಶ್ವ ಮಾನವರಾಗಲು ಪಣತೊಡಬೇಕೆಂದರು.
ಸಾನಿಧ್ಯ ವಹಿಸಿದ್ದ ಚಿಕ್ಕಬಳ್ಳಾಪುರ ಅದಿಚುಂಚನಗಿರಿ ಶಾಖಾಮಠದ ಮಂಗಳಾನಂದನಾಥ ಸ್ವಾಮೀಜಿ ಮಾತನಾಡಿ, ಕನ್ನಡ ಭಾಷೆಗೆ ಸಾವಿರಾರು ವರ್ಷದ ಇತಿಹಾಸ ಇದ್ದು ಎಂಟು ಜ್ಞಾನಪೀಠ ಗಳಿಸಿದ ಹೆಗ್ಗಳಿಕೆ ಇದೆ. ಇಂದು ಮಾಹಿತಿ ತಂತ್ರಜ್ಞಾನ, ವೈದ್ಯಕೀಯ ತಂತ್ರಜ್ಞಾನ ಸೇರಿದಂತೆ ಮೊಬೈಲ್ ತಂತ್ರಜ್ಞಾನ ಎಲ್ಲದರಲ್ಲು ಆಂಗ್ಲ ಭಾಷೆಯಲ್ಲಿದೆ. ಅವೆಲ್ಲವೂ ಕನ್ನಡ ಭಾಷೆಯಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ರಾಜಪ್ಪದಳವಾಯಿ ಮಾತನಾಡಿ, ಕನ್ನಡ ಎಂಬುದು ಯಾವುದೇ ಜಾತಿ, ಧರ್ಮಕ್ಕೆ ಕಟ್ಟು ಪಾಡಿಗೆ ಬಿದ್ದುದಲ್ಲ. ಕನ್ನಡಿಗರು ಎಂದರೆ ಎಲ್ಲರೂ ಒಂದೆ ಸೂರಿನಡಿ ಇರಬೇಕು. ಕನ್ನಡ ಭಾಷೆಗೆ ಸಮಸ್ಯೆ ಬಂದಾಗ ಎಲ್ಲರೂ ಒಗ್ಗೂಡಿ ಧ್ವನಿ ಎತ್ತುವ ಮೂಲಕ ಕನ್ನಡಿಗರ ಶಕ್ತಿ ಪ್ರದರ್ಶನವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ರಂಗನಾಥ್ ಮಾತನಾಡಿ, ಕನ್ನಡ ಭಾಷೆಯ ಉಳಿವಿನ ನಿಟ್ಟಿನಲ್ಲಿ ಸಾಕಷ್ಟು ಮಹನೀಯರು ಕೊಡುಗೆ ನೀಡಿದ್ದಾರೆ. ಕನ್ನಡ ಭಾಷೆಗೆ ಸಮಸ್ಯೆ, ಸವಾಲು ಎದುರಾದಾಗ ಎಲ್ಲರೂ ಒಂದಾಗಿ ನಿಂತು ಹೋರಾಟ ಮಾಡಬೇಕು. ಕೇಂದ್ರದ ಹಿಂದಿ ಭಾಷಾ ಪ್ರೇಮದ ಬಗ್ಗೆ ಎಲ್ಲಾ ಕನ್ನಡಿಗರೂ ಜಾಗೃತರಾಗಬೇಕಿದೆ ಎಂದರು.
ಮಾಜಿ ಸಚಿವ ಡಿ.ನಾಗರಾಜಯ್ಯ, ಕಸಾಪ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ, ತಾಲೂಕು ಕಸಾಪ ಅಧ್ಯಕ್ಷ ಕಪಿನಿಪಾಳ್ಯ ರಮೇಶ, ಕಿತ್ತನಾಗಮಂಗಲ ಅರೆಶಂಕರ ಮಠದ ಸಿದ್ದರಾವ ಚೈತನ್ಯ ಸ್ವಾಮೀಜಿ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇ ಗೌಡ, ಬಿಜೆಪಿ ಮುಖಂಡ ಹೆಚ್.ಡಿ.ರಾಜೇಶಗೌಡ, ಪುರಸಭಾದ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷೆ ತಬಸ್ಸಮ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಪುರಸಭೆ ಸದಸ್ಯರು, ತಹಶೀಲ್ದಾರ್ ಮಹಾಬಲೇಶ್ವರ, ಇಒ ಜೋಸೆಫ್ ಇನ್ನಿತರರು ಹಾಜರಿದ್ದರು.
Comments are closed.