ತುರುವೇಕೆರೆ: ಕ್ಷೇತ್ರ ವ್ಯಾಪ್ತಿಯಲ್ಲಿರುವ ಯಾದವ ಸಮುದಾಯವರ ಸಂಪೂರ್ಣ ಬೆಂಬಲ ನನಗಿದೆ ಎಂದು ಶಾಸಕ ಮಸಾಲೆಜಯರಾಮ್ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಬುಗುಡನಹಳ್ಳಿ ಗ್ರಾಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ನರಸಿಂಹರಾಜು ಅವರೊಂದಿಗೆ ನೂರಾರು ಕಾರ್ಯಕರ್ತರನ್ನು ಬಿಜೆಪಿಗೆ ಬರ ಮಾಡಿಕೊಂಡು ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿರುವ 72 ಗೊಲ್ಲರ ಹಟ್ಟಿಗಳಿಗೂ ಮೂಲಸೌಕರ್ಯ ಹಾಗೂ 1600 ಮನೆ ನೀಡಿದ ತೃಪ್ತಿ ನನಗಿದ್ದು ಮತ್ತೆ ಸಾವಿರ ಮನೆ ನೀಡುತ್ತೇನೆ. ಬುಗುಡನಹಳ್ಳಿ ನರಸಿಂಹರಾಜು ನಮ್ಮ ಪಕ್ಷಕ್ಕೆ ಆಗಮನವಾಗಿರುವುದು ರಾಜಕೀಯವಾಗಿ ನನಗೆ ಆನೆ ಬಲ ತಂದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು ಕ್ಷೇತ್ರ ವ್ಯಾಪ್ತಿಯ ಶ್ರೇಯೋಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಎಪಿಎಂಸಿ ಮಾಜಿ ಅಧ್ಯಕ್ಷ ನರಸಿಂಹರಾಜು ಮಾತನಾಡಿ, ಮಸಾಲ ಜಯರಾಮ್ ಅವರ ಸರಳತೆ, ಸಜ್ಜನಿಕೆ ಹಾಗೂ ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ, ಯಾವುದೇ ಫಲಾಪೇಕ್ಷೆಯಿಲ್ಲದೇ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದೇನೆ. ನಾನು ಯಾವ ಪಕ್ಷಕ್ಕೂ ದ್ರೋಹ ಬಗೆದು ಬಂದಿಲ್ಲ. ಕ್ಷೇತ್ರ ಅಭಿವೃದ್ಧಿಗಾಗಿ ಮಸಾಲ ಜಯರಾಮ್ ಅವರನ್ನು ಮತ್ತೆ ಶಾಸಕರನ್ನಾಗಿ ಮಾಡಲು ಪ್ರಾಮಾಣಿಕವಾಗಿ ಹೋರಾಟ ಮಾಡುತ್ತೇನೆ ಎಂದರು.
ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ತೊರೆದು ಶ್ರೀರಂಗನಾಥ ಸ್ವಾಮಿ ದೇಗುಲದ ಅಧ್ಯಕ್ಷ ಭೀಮಣ್ಣ, ತಾಪಂ ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ, ಬುಗಡನಹಳ್ಳಿ, ಕುಣಿಕೇನಹಳ್ಳಿ, ಬಲಮಾದಿಹಳ್ಳಿ, ರಂಗನಾಥಪುರ, ಮರಾಠಿಪಾಳ್ಯ, ಮಂಚೇನಹಳ್ಳಿ ಗೊಲ್ಲರಹಟ್ಟಿ, ತೋಪೇಗೌಡನಪಾಳ್ಯ, ಅಪ್ಪಸಂದ್ರ, ಗಿರೇನಹಳ್ಳಿ ಗ್ರಾಮದ ಮುಖಂಡರು ಬಿಜೆಪಿ ಸೇರ್ಪಡೆಗೊಂಡರು.
Comments are closed.