ತುಮಕೂರು: ವಿಶ್ವ ನಾಯಕ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವರ್ ಜರ್ದಾರಿ ಭುಟ್ಟೋ ಬೇಜವಾಬ್ದಾರಿ ಮತ್ತು ಅಸಂಬಂದ್ಧ ಹೇಳಿಕೆ ನೀಡಿ ಅವಮಾನಕಾರಿಯಾಗಿ ವರ್ತಿಸಿರುವುದರ ವಿರುದ್ಧ ಬಿಜೆಪಿ ತುಮಕೂರು ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು.
ಬಿಜೆಪಿ ಜಿಲ್ಲಾ ಘಟಕದಿಂದ ನಗರದ ಬಿಜಿಎಸ್ ವೃತ್ತದಲ್ಲಿ ಕುತಂತ್ರಿ ಪಾಕಿಸ್ತಾನದ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಮಾತನಾಡಿ, ಇಡೀ ಪ್ರಪಂಚವೇ ಪ್ರಧಾನಿ ನರೇಂದ್ರ ಮೋದಿರವರ ಬಗ್ಗೆ ಅತ್ಯಂತ ಗೌರವ ವ್ಯಕ್ತಪಡಿಸುತ್ತಿದ್ದರೂ ಭಯೋತ್ಪಾದಕರ ಕಾರ್ಖಾನೆಯಾಗಿರುವ ಪಾಪಿ ಪಾಕಿಸ್ತಾನದ ವಿದೇಶಾಂಗ ಸಚಿವ ಮೋದಿ ಭಾರತದ ಪ್ರಧಾನಿಯಲ್ಲ. ಆರ್ಎಸ್ಎಸ್ ಪ್ರಧಾನಿ ಎಂದು ಕಟು ಶಬ್ದಗಳಲ್ಲಿ ಅವಹೇಳನ ಮಾಡಿರುವುದು ಸರ್ವತಾ ಖಂಡನೀಯ. ಭಾರತದಲ್ಲಿ ಭಯೋತ್ಪಾದನೆ ಮಾಡುತ್ತಾ ಒಂದು ಸಮುದಾಯದ ಬಗ್ಗೆ ಮಾತ್ರ ಓಲೈಸುತ್ತಾ ಭಾರತದಲ್ಲಿ ಅಶಾಂತಿ ಸೃಷ್ಟಿಗೆ ಪ್ರೇರಣೆ ಮಾಡುತ್ತಿರುವುದರ ಬಗ್ಗೆ ಎಂ.ಬಿ.ನಂದೀಶ್ ಖಂಡಿಸಿದರು.
ಭಾರತದ ಪ್ರಧಾನಿ ವಿರುದ್ಧ ಪಾಕಿಸ್ತಾನ ಟೀಕಿಸಿದರೂ, ಪಾಕಿಸ್ತಾನದ ಇನ್ನೋರ್ವ ಸಚಿವರಾದ ತಾಜಿಯಾ ಮಾರ್ರಿ ಅಣ್ವಸ್ತ್ರ ಇರುವ ರಾಷ್ಟ್ರ ನಮ್ಮದು ಎಂದು ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆಯ ಮಾತನಾಡಿರುವುದು ಅಸಂಬದ್ದವಾಗಿದೆ. ಪಾಕಿಸ್ತಾನದಲ್ಲಿ ಅರಾಜಕತೆ ತಾಂಡವವಾಡುತ್ತಿದ್ದು, ಬಡತನ, ಹಸಿವು, ಅಂತರ್ಯುದ್ಧಲ್ಲಿ ಬಳಲಿದ್ದರೂ ದುರಂಕಾರದ ವರ್ತನೆ ಆಕ್ಷೇಪಣೀಯವಾದುದು. ಕೂಡಲೇ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿರವರ ಕ್ಷಮೆಯಾಚನೆ ಮಾಡುವಂತೆ ಒತ್ತಾಯಿಸಿದರು.
ವಿದೇಶಿಯರ ಭಾರ ಹೊತ್ತು ಕಾಂಗ್ರೆಸ್ ಇಂದು ಅಂತಃಪತನವಾಗಿದ್ದು, ದೇಶದಲ್ಲಿ ಕಾಂಗ್ರೆಸ್ ಜನಮನ್ನಣೆಯಿಂದ ದೂರವಾಗಿದ್ದು ಎಲ್ಲಡೆ ಅಧಿಕಾರ ಕಳೆದುಕೊಳ್ಳುವ ಸ್ಥಿತಿ ತಲುಪಿದೆ. ರಾಷ್ಟ್ರಭಕ್ತಿಯಿಂದ ವಿಮುಖವಾದ ಕಾಂಗ್ರೆಸ್ ಚೀನಾ ಇತ್ತೀಚಿಗೆ ಭಾರತದ ಗಡಿಯಲ್ಲಿ ಚೀನಾ ಸೈನಿಕರು ಸಂಘರ್ಷ ಮಾಡಿದ್ದರ ಬಗ್ಗೆ ಸಂಸದ ರಾಹುಲ್ ಗಾಂಧಿ, ಭಾರತದ ವೀರ ಯೋಧರು ಮತ್ತು ಭಾರತದ ಸಾರ್ವಭೌಮತ್ವತೆ ಬಗ್ಗೆ ಸಂಶಯದ ಹೇಳಿಕೆ ನೀಡಿದ್ದು, ಭಾರತೀಯರಿಗೆ ಮಾಡಿದ ಅಪಮಾನ ಎಂದರು.
ಬಿಜೆಪಿ ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಮಾತನಾಡಿ, ಪಾಕಿಸ್ತಾನದಲ್ಲಿ ನರಕ ಸದೃಶ್ಯ ವಾತಾವಣವಿದ್ದು ಅಲ್ಲಿನ ನಾಗರಿಕರು ಹಲವಾರು ಸಮಸ್ಯೆ ಸುಳಿಗೆ ಸಿಕ್ಕಿ ನರಳುತ್ತಿದ್ದಾರೆ. ತಮ್ಮ ಆಂತರಿಕ ಸಮಸ್ಯೆ ಮುಚ್ಚಿಕೊಳ್ಳಲು ಪಾಕಿಸ್ತಾನ ವಿಶ್ವ ವೇದಿಕೆಯಲ್ಲಿ ವಿನಾ ಕಾರಣ ಭಾರತದ ಬಗ್ಗೆ ಟೀಕಿಸುತ್ತಿದೆ. ಉಗ್ರರ ಕಾರಸ್ಥಾನವಾಗಿರುವ ಪಾಕಿಸ್ತಾನದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲದೆ ಜರ್ಜರಿತವಾಗಿದೆ. ಇದನ್ನು ಖಂಡಿಸದ ಕಾಂಗ್ರೆಸ್ ಭೌದ್ಧಿಕವಾಗಿ ದಿವಾಳಿಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟೆವು ಎಂದು ಬೀಗುತ್ತಿರುವ ಕಾಂಗ್ರೆಸ್ನ ಮುಖಂಡರಾದ ರಾಹುಲ್ಗಾಂಧಿ, ರಾಜ್ಯದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಭಯೋತ್ಪಾದನೆ ಮತ್ತು ದೇಶ ವಿರೋಧಿ ನಿಲುವು ವ್ಯಕ್ತಪಡಿಸುವ ದೇಶ ಮತ್ತು ವ್ಯಕ್ತಿಗಳ ವಿರುದ್ಧ ತುಟಿಕ್ ಪಿಟಿಕ್ ಎನ್ನದೆ ಮೌನ ವಹಿಸಿ ಬೆಂಬಲಿಸುವ ತಂತ್ರ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಪಾಕಿಸ್ತಾನದ ವಿದೇಶಾಂಗ ಸಚಿವರು, ಮಹಿಳಾ ಸಚಿವೆ ತಾಜಿಯಾ ಮಾರ್ರಿ ಭಾರತದ ವಿರುದ್ಧ ಅಪಮಾನಕಾರಿಯಾಗಿ ಹೇಳಿಕೆ ನೀಡಿರುವುದನ್ನು ತೀವ್ರವಾಗಿ ಖಂಡಿಸಿದರು.
ಕಾಂಗ್ರೆಸ್ ತಾನು ದೇಶಭಕ್ತ ಪಕ್ಷ ಎಂದು ಎದೆ ಬೀಗಿಸಿಕೊಂಡು ಬೂಟಾಟಿಕೆಯಾಗಿ ರಾಜಕಾರಣ ಮಾಡಿಕೊಳ್ಳುತ್ತಿದೆ. ಜನಾದೇಶಕ್ಕೆ ಬೆಲೆ ಕೊಡದ ಕಾಂಗ್ರೆಸ್ ಭಾರತ, ವೀರ ಯೋಧರು ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನು ವಹಿಸಿಕೊಂಡು ವೋಟ್ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇದನ್ನು ಮುಂದುವರೆಸಿದರೆ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಪ್ರೇಮಹೆಗ್ಡೆ, ಒಬಿಸಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ವೈ.ರುದ್ರೇಶ್, ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ವಿಜಯಭಾಸ್ಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪಿಗೆ ಶ್ರೀಧರ, ಕಾರ್ಯದರ್ಶಿಗಳಾದ ಸಿದ್ದೇಗೌಡ, ಸಂದೀಪ್ಗೌಡ, ರಾಜ್ಕುಮಾರ್.ಪಿ, ಕಾರ್ಯಾಲಯ ಕಾರ್ಯದರ್ಶಿ ಪ್ರವೀಣ್.ಎಸ್.ಹೊಸಹಳ್ಳಿ, ಜಿಲ್ಲಾ ವಕ್ತಾರ ಕೆ.ಪಿ.ಮಹೇಶ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎನ್.ನರಸಿಂಹಮೂರ್ತಿ, ಉಪಾಧ್ಯಕ್ಷ ಆಂಜನಮೂರ್ತಿ ಇತರರು ಭಾಗವಹಿಸಿದ್ದರು.
Comments are closed.