ಕುಣಿಗಲ್: ಪಟ್ಟಣದಿಂದ ತುಮಕೂರು ಕಡೆಗೆ ವಿದ್ಯಾರ್ಥಿಗಳಿಗೆ ಬೆಳಗಿನ ಹೊತ್ತು ಅಸಮರ್ಪಕ ಬಸ್ವ್ಯವಸ್ಥೆ ಇರುವುದನ್ನು ಖಂಡಿಸಿ ಸೋಮವಾರ ಬೆಳ್ಳಂಬೆಳಗ್ಗೆ ನೂರಾರು ವಿದ್ಯಾಥಿಗಳು ಬಸ್ ತಡೆದು ದಿಡೀರ್ ಪ್ರತಿಭಟನೆ ನಡೆಸಿ ಡಿಪೋ ಮ್ಯಾಾಜರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಸೋಮವಾರ ಏಳುವರೆ ಗಂಟೆಯಾದರೂ ತುಮಕೂರು ಕಡೆಗೆ ಸಮರ್ಪಕ ಬಸ್ ಬಾರದೆ ಇರುವುದರಿಂದ ಅಸಮಾಧಾನಗೊಂಡ ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆಯ ಅಮಸರ್ಪಕ ಕಾರ್ಯ ವೈಖರಿ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ದಿಡೀರ್ ಪ್ರತಿಭಟನೆಗೆ ಇಳಿದರಲ್ಲದೆ, ಸಮರ್ಪಕ ಬಸ್ವ್ಯವಸ್ಥೆ ಮಾಡುವಂತೆ ಈ ಹಿಂದೆ ಹಲವಾರು ಬಾರಿ ಮನವಿ ನೀಡಿದ್ದರೂ ಕ್ರಮ ಕೈಗೊಳ್ಳದ ಸಂಚಾರ ನಿಯಂತ್ರಕ, ಡಿಪೋ ಮ್ಯಾನೇಜರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆ ವಿಷಯ ತಿಳಿದು ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ ಆಗಮಿಸಿದಾಗ ಅವರ ಮುಂದೆ ಸಾರಿಗೆ ಇಲಾಖೆಯ ವೈಫಲ್ಯವನ್ನೆ ವಿದ್ಯಾರ್ಥಿಗಳು ತೆರೆದಿಟ್ಟರು. ಕುಣಿಗಲ್ನಿಂದ ತುಮಕೂರಿಗೆ ಸುಮಾರು ಐದುವರೆ ಸಾವಿರ ಪಾಸ್ ನೀಡಿದ್ದಾರೆ. ಬೆಳಗ್ಗೆ ಏಳು ಗಂಟೆಯಿಂದ ಎಂಟುವರೆ ಗಂಟೆವರೆಗೂ ಒಂದು ಅಥವಾ ಎರಡು ಬಸ್ ಮಾತ್ರ ಇರುತ್ತದೆ. ಇಲ್ಲಿ ಕೇಳಿದರೆ ಸ್ಪಂದಿಸುವುದಿಲ್ಲ. ಐದುವರೆ ಸಾವಿರ ಮಂದಿ ಒಟ್ಟಿಗೆ ಹೇಗೆ ಹೋಗಲು ಸಾಧ್ಯ. ಮೈಸೂರು ಕಡೆಯಿಂದ ಬರುವ ಬಸ್ಗಳಲ್ಲಿ ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಹತ್ತಲು ಬಿಡೋದಿಲ್ಲ. ನಾವೇನು ಪಾಸ್ಗೆ ಕಾಸು ಕಟ್ಟಿಲ್ಲವೆ, ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಕ್ರಮ ಕೈಗೊಳ್ಳುವುದಿಲ್ಲ.
ತುಮಕೂರಿನಿಂದ ಕುಣಿಗಲ್ ಕಡೆಗೆ ಬರುವಾಗ ಮೈಸೂರು ಘಟಕದ ಬಸ್ನವರು ಕುಣಿಗಲ್ನವರನ್ನು ಹತ್ತಿಸುವುದಿಲ್ಲ. ಪಾಸ್ ಇರುವ ವಿದ್ಯಾರ್ಥಿಗಳು ಹತ್ತಲು ಹೋದರೆ ಅಶ್ಲೀಲವಾಗಿ ನಿಂದಿಸಿ ಬಸ್ನಿಂದ ಬಲವಂತವಾಗಿ ಇಳಿಸುತ್ತಾರೆ. ಅಲ್ಲಿನ ಸಂಚಾರ ವ್ಯವಸ್ಥಾಪಕರಿಗೆ ಹೇಳಿದರೂ ಕೇಳುವುದಿಲ್ಲ ಎಂದರೆ ವಿದ್ಯಾರ್ಥಿನಿಯರು ಇದು ಸೋಮವಾರ ಒಂದು ದಿನದ ಸಮಸ್ಯೆ ಅಲ್ಲ ದಿನಾಲೂ ಇದೆ ಸಮಸ್ಯೆ ಕೇವಲ ಒಂದು ಬಸ್ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಹೇಗೆ ಹೋಗಲು ಸಾಧ್ಯ. ಹೆಣ್ಣು ಮಕ್ಕಳು ಬಸ್ ಹತ್ತುವುದಕ್ಕೆ ಆಗಲ್ಲ. ತುಮಕೂರಿನಲ್ಲಿ ನಮಗೆ ಹೆಣ್ಣು ಮಕ್ಕಳು ಎನ್ನುವುದು ನೋಡದೆ ನಿಂದಿಸುತ್ತಾರೆ. ಬಸ್ ಪಾಸ್ಗೆ ದುಡ್ಡು ಕೊಟ್ಟರೂ ಇವರಿಂದ ಮಾತು ಕೇಳಬೇಕಾ ಎಂದು ಘಟಕ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡು ನಿಮ್ಮ ಮನೆ ಮಕ್ಕಳಿಗೂ ಇದೆ ಸಮಸ್ಯೆ ಆದರೆ ಸುಮ್ಮನಿರುತ್ತೀರಾ ಎಂದು ಪ್ರಶ್ನಿಸಿ ಆಕ್ರೋಶ ಹೊರ ಹಾಕಿದರು.
ವಿಷಯ ತಿಳಿದು ಯುವ ಕಾಂಗ್ರೆಸ್ ಅಧ್ಯಕ್ಷ ಲೋಹಿತ್ ಸ್ಥಳಕ್ಕಾಗಮಿಸಿ ಬೆಳಗಾವಿ ಅಧಿವೇಶನಕ್ಕೆ ಹೋಗುತ್ತಿದ್ದ ಶಾಸಕರ ಗಮನಕ್ಕೆ ತಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ, ಡಿಪೋ ಮ್ಯಾನೇಜರ್ ಶ್ರೀನಿವಾಸ್ ಜೊತೆ ಚರ್ಚಿಸಿದಾಗ ಶ್ರೀನಿವಾಸ್ ನಿಗದಿತ ವೇಳೆಯಲ್ಲಿ ಬಸ್ಗಳು ಹೋಗುತ್ತಿವೆ. ಆದರೆ ವಿದ್ಯಾರ್ಥಿಗಳು ಕುಂತೆ ಹೋಗಬೇಕೆನ್ನುತ್ತಾರೆ ಎಂದಾಗ ವಿದ್ಯಾರ್ಥಿಗಳು ಆಕ್ಷೇಪಿಸಿ ಬಸ್ ಬರೋಲ್ಲ ಕುಂತು ಹೋಗುವ ಮಾತೆಲ್ಲಿ ಎಂದು ವಾಗ್ವಾದ ನಡೆಸಿದರು.
ಬಲರಾಮ್ ಸಾರಿಗೆ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿ, ನಿಮ್ಮ ಸಮಸ್ಯೆ ನಮಗೆ ಬೇಡ. ಬೆಳಗಿನ ಹೊತ್ತು ನಾಲ್ಕು ಬಸ್ಗಳ ಜೊತೆಯಲ್ಲಿ ನಿಗದಿಯಂತೆ ಮೂರು ಬಸ್ ಸಂಚರಿಸಬೇಕು, ತುಮಕೂರಿನಿಂದ ಬರುವವರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಕುಣಿಗಲ್ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ನಡೆದುಕೊಂಡಲ್ಲಿ ಮುಲಾಜಿಲ್ಲದೆ ಇಲ್ಲಿಯೆ ಬಸ್ ತಡೆದು ಪ್ರತಿಭಟಿಸಬೇಕಾಗುತ್ತದೆ ಎಂದರು.
ದೂರವಾಣಿ ಮೂಲಕ ಮಾತನಾಡಿದ ಶಾಸಕ ಡಾ.ರಂಗನಾಥ್, ತಾಲೂಕಿನ ವಿದ್ಯಾರ್ಥಿಗಳಿಗೆ ಸಮಸ್ಯೆ ಆದರೆ ಸುಮ್ಮನಿರುವುದಿಲ್ಲ. ನಿಮ್ಮ ಅಸಮರ್ಪಕ ಕಾರ್ಯ ವೈಖರಿಗೆ ವಿದ್ಯಾರ್ಥಿಗಳು ಪರದಾಡುವುದು ಬೇಡ, ಸಾರಿಗೆ ಸಂಸ್ಥೆ ಹಿರಿಯಾಧಿಕಾರಿಗಳು, ಸಚಿವರ ಗಮನಕ್ಕೆ ತರುತ್ತೇನೆ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಲ್ಲಿ ಕ್ರಮಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಶಾಸಕರ ಸೂಚನೆ ಮೇರೆಗೆ ಐದು ಹೆಚ್ಚುವರಿ ಬಸ್ ಬಿಟ್ಟ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದು ಕಾಲೇಜುಗಳಿಗೆ ತೆರಳಿದರು.
Comments are closed.