ತುಮಕೂರು: ನಗರದ ಸಿದ್ದಗಂಗಾ ಮಠಕ್ಕೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ತಮ್ಮ ಪತ್ನಿ ಲಕ್ಷ್ಮಿ ಅರುಣ ಅವರೊಂದಿಗೆ ಭೇಟಿ ನೀಡಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಹಿರಿಯ ಶ್ರೀಗಳ ಗದ್ದುಗೆ ದರ್ಶನದ ಬಳಿಕ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯನ್ನು ಭೇಟಿ ಮಾಡಿದ ಗಾಲಿ ಜನಾರ್ಧನರೆಡ್ಡಿ ದಂಪತಿ ಶ್ರೀಗಳಿಗೆ ಫಲ ತಾಂಬೂಲ ನೀಡಿ ಆಶೀರ್ವಾದ ಪಡೆದರು. ಹಾಗೆಯೇ ಶ್ರೀಗಳು ಸಹ ಜನಾರ್ಧನ ರೆಡ್ಡಿ ದಂಪತಿಯನ್ನು ಶ್ರೀಮಠದ ವತಿಯಿಂದ ಆಶೀರ್ವದಿಸಿ ಸನ್ಮಾನಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ಧನ ರೆಡ್ಡಿ, ಸಾರ್ವಜನಿಕ ಬದುಕಿನಲ್ಲಿ ಬರಬೇಕೆಂದು ತೀರ್ಮಾನ ಮಾಡಿದ್ದೇನೆ. ಹಾಗಾಗಿ ಶ್ರೀಮಠಕ್ಕೆ ಬಂದು ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದಿದ್ದೇನೆ ಎಂದರು.
ಸಾರ್ವಜನಿಕ ಬದುಕಿನಲ್ಲಿ ಬರಲು ತೀರ್ಮಾನಿಸಿರುವುದರಿಂದ ನನಗೆ ಜನರ ಆಶೀರ್ವಾದ, ಪ್ರೀತಿ ಬಹು ಮುಖ್ಯವಾಗಿದೆ. ಹಾಗೆಯೇ ಶ್ರೀಗಳ ಮಾರ್ಗದರ್ಶನವೂ ಮುಖ್ಯ. ನಾನು ಕಳೆದ 34 ವರ್ಷಗಳಿಂದ ಶ್ರೀಮಠಕ್ಕೆ ಬಂದು ಶ್ರೀಗಳ ದರ್ಶನಾಶೀರ್ವಾದ ಪಡೆಯುತ್ತಿದ್ದೇನೆ ಎಂದರು.
ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಮಾತನ್ನು ಶ್ರೀಗಳು ಅಕ್ಷರಶಃ ಪಾಲಿಸಿದ್ದು, ಇಡೀ ಜೀವನಪೂರ್ತಿ ಶತಾಯುಷಿಗಳಾಗಿ ಕಾಯಕ ಮಾಡಿ ಯಾವುದೇ ಪ್ರಚಾರ ಬಯಸದೆ ತುಂಬಾ ನಿಶ್ಯಬ್ದವಾಗಿ ಇಡೀ ಜಗತ್ತೇ ತಿರುಗಿ ನೋಡುವಂತಹ ಸೇವೆಗೈದಿದ್ದಾರೆ ಎಂದರು.
ಶ್ರೀಮಠದಲ್ಲಿ ಶ್ರೀಗಳು ಯಾವುದೇ ಜಾತಿ, ಮತ, ಭೇದ ಇಲ್ಲದೆ ಸೇವೆ ಮಾಡಿ ತೋರಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾನು ಸಹ ಸಾರ್ವಜನಿಕ ಬದುಕಿನಲ್ಲಿ ಕೆಲಸ ಮಾಡುತ್ತೇನೆ. ನಾನು ಮಠಗಳಿಗೆ ಭೇಟಿ ನೀಡುತ್ತಿರುವುದು ಮೊದಲ ಬಾರಿಯೇನಲ್ಲ. ನನಗೆ ಮಾನಸಿಕವಾಗಿ, ದೈಹಿಕವಾಗಿ ಶಕ್ತಿ ತುಂಬುವ ಕೆಲಸ ಮಠಗಳಿಂದ ಆಗುತ್ತಿದೆ. ಹಾಗಾಗಿ ಮಠಗಳಿಗೆ ಭೇಟಿ ನೀಡುತ್ತಿದ್ದೇನೆ. ಇದರಲ್ಲಿ ಹೊಸತೇನಿಲ್ಲ ಎಂದರು.
ಶ್ರೀಮಠದಲ್ಲಿ ನಾನು ರಾಜಕೀಯ ಮಾತನಾಡುವುದಿಲ್ಲ. ಡಿ.25 ರಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುತ್ತೇನೆ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
ನಾನು ಚಿಕ್ಕ ಮಗು ಇದ್ದಾಗಿನಿಂದಲೂ ಒಬ್ಬ ನಟನಾಗಿ ಬೆಳೆಯಬೇಕು ಎಂಬ ಆಸೆ ಹೊಂದಿದ್ದೆ. ಹಾಗಾಗಿ ಚಿತ್ರರಂಗದ ನಂಟು ಸಹ ಹೊಂದಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಕ್ಷಿತ್, ಜಗದೀಶ್, ನೇರಳಾಪುರ ಕುಮಾರ್, ಪಂಚಾಕ್ಷರಯ್ಯ ಮತ್ತಿತರರು ಇದ್ದರು.
Comments are closed.