ಗ್ರಾಪಂ ಮುಂದೆ ಶವವಿಟ್ಟು ಸ್ಮಶಾನಕ್ಕಾಗಿ ಪ್ರತಿಭಟನೆ

310

Get real time updates directly on you device, subscribe now.


ಕೊರಟಗೆರೆ: ಇರಕಸಂದ್ರ ಕಾಲೋನಿಯಲ್ಲಿ ಯಾರೇ ಸತ್ತರೂ ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲ. 300ಕ್ಕೂ ಅಧಿಕ ಕುಟುಂಬಗಳೂ ವಾಸವಿರುವ ಈ ಗ್ರಾಮದ ಅರ್ಧ ಜನರಿಗೆ ಸ್ವಂತ ಜಮೀನು ಸಹ ಇಲ್ಲ. ಕೆರೆಯ ಅಂಗಳ, ಬೆಟ್ಟಗುಡ್ಡ, ರಾಜ್ಯ ಹೆದ್ದಾರಿ ಚರಂಡಿ ಮತ್ತು ಅರಣ್ಯ ಪ್ರದೇಶದ ಜಾಗವೇ ಗ್ರಾಮಕ್ಕೆ ಸ್ಮಶಾನ. ಕೊರಟಗೆರೆ ಆಡಳಿತ ಮತ್ತು ರಾಜಕೀಯ ಧುರೀಣರು ಚುನಾವಣೆಗೆ ಮಾತ್ರ ಸಿಮೀತವಾದ ಪರಿಣಾಮ 75 ವರ್ಷದಿಂದ ಸ್ಮಶಾನವೇ ಮರೀಚಿಕೆಯಾಗಿದೆ.

ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಇರಕಸಂದ್ರ ಕಾಲೋನಿ ಮತ್ತು ನೀಲಗೊಂಡನ ಹಳ್ಳಿ ಗ್ರಾಮದಲ್ಲಿ 300ಕ್ಕೂ ಅಧಿಕ ಮನೆಗಳಿವೆ. ಗ್ರಾಮದಲ್ಲಿ ಯಾರೇ ಸತ್ತರೂ ಕೆರೆಯ ಅಂಗಳದಲ್ಲೇ ಅಂತ್ಯ ಸಂಸ್ಕಾರ ನಡೆಸುತ್ತಾರೆ. ಜಮೀನು ಮತ್ತು ಮನೆಯೇ ಇಲ್ಲದಿರುವ ಬಡಜನತೆ ಸತ್ತಾಗ ಸ್ಮಶಾನದ ಜಾಗಕ್ಕಾಗಿಯು ಪ್ರತಿಭಟನೆ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ.

ಸ್ಮಶಾನದ ಜಾಗ ಗುರುತಿಸಲು ಕಂದಾಯ ಅಧಿಕಾರಿ ಮತ್ತು ಗ್ರಾಪಂ ಪಿಡಿಓ ನಿರ್ಲಕ್ಷ ಮುಂದುವರೆದಿದೆ. ಗ್ರಾಪಂ ಸದಸ್ಯ, ತಾಪಂ ಮತ್ತು ಜಿಪಂ ಸದಸ್ಯರ ಪಾತ್ರವೇನು ಎಂಬುದು ತಿಳಿಯುತ್ತಿಲ್ಲ. ಸ್ಥಳೀಯ ಶಾಸಕರು ಮತ್ತು ಸಂಸದರಿಗೆ ಈ ವಿಚಾರ ತಿಳಿದಿಲ್ಲವೇ? ಮೃತಪಟ್ಟ ಮಹಿಳೆಯ ಶವ ಹೂಳಲು ಆರಡಿ, ಮೂರಡಿ ಜಾಗವೇ ನೀಡದಂತಹ ಕೊರಟಗೆರೆ ಆಡಳಿತಕ್ಕೆ ಇರಕಸಂದ್ರ ಗ್ರಾಮಸ್ಥರು ಹಿಡಿಶಾಪ ಹಾಕಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಪಂ ಮುಂದೆ ಗ್ರಾಮಸ್ಥರ ಪ್ರತಿಭಟನೆ
ಇರಕಸಂದ್ರ ಕಾಲೋನಿಯ ಲೇ.ಗಂಗಯ್ಯನ ಮಡದಿ ವೆಂಕಟಮ್ಮ (81) ಡಿ.18ರ ಭಾನುವಾರ ಸಂಜೆ ಮೃತ ಪಟ್ಟಿದ್ದಾರೆ. ಲೇ.ಗಂಗಯ್ಯ ಮೃತಪಟ್ಟಾಗಲು ಸ್ಮಶಾನ ಇಲ್ಲದೆ ಕೆರೆಯ ಅಂಗಳದಲ್ಲೇ ಶವ ಸಂಸ್ಕಾರ ನಡೆಸಲಾಗಿದೆ. ಪ್ರಸ್ತುತ ಸ್ಮಶಾನದ ಜಾಗಕ್ಕಾಗಿ ಮೃತ ಮಹಿಳೆಯ ಶವದೊಂದಿಗೆ ಗ್ರಾಮಸ್ಥರು ಸೇರಿ ನೀಲಗೊಂಡನಹಳ್ಳಿ ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಐ.ಕೆ.ಕಾಲೋನಿ ಗ್ರಾಮದಲ್ಲಿ 300 ಮನೆಳಿದ್ದು 1200ಕ್ಕೂ ಅಧಿಕ ಮತದಾರರು ಇದ್ದಾರೆ. ಕಳೆದ 50 ವರ್ಷದಿಂದ ಯಾರೇ ಸತ್ತರೂ ಇರಕಸಂದ್ರ ಕಾಲೋನಿಯ ಕೆರೆಯ ಅಂಗಳದಲ್ಲೇ ಶವ ಸಂಸ್ಕಾರ ನಡೆಸುತ್ತಾರೆ. ಪ್ರಸ್ತುತ ಕೆರೆಯಲ್ಲಿ ನೀರು ತುಂಬಿರುವ ಪರಿಣಾಮ ಕೆರೆಯ ಜಾಗವು ನೀರಿನಿಂದ ಭರ್ತಿಯಾಗಿದೆ. ಸ್ಮಶಾನಕ್ಕೆ ಜಾಗವಿಲ್ಲದೆ ಎರಡು ದಿನದಿಂದ ಬಡ ಕುಟುಂಬ ಬೀದಿಯಲ್ಲಿ ಹೋರಾಟ ನಡೆಸುತ್ತಿದೆ.

Get real time updates directly on you device, subscribe now.

Comments are closed.

error: Content is protected !!