ಕೌಶಲ್ಯ ಜ್ಞಾನ ಬೆಳೆಸಿಕೊಂಡಲ್ಲಿ ಉತ್ತಮ ಉದ್ಯೋಗ ದೊರೆಯುತ್ತೆ

ಪರಿಶ್ರಮವಿದ್ದಲ್ಲಿ ತಕ್ಕ ಪ್ರತಿಫಲ ಸಿಗುತ್ತೆ: ಸಿಇಒ

93

Get real time updates directly on you device, subscribe now.


ತುಮಕೂರು: ಯುವ ಜನತೆಗೆ ಉದ್ಯೋಗಾವಕಾಶ ಕಲ್ಪಿಸುವುದು ಸರ್ಕಾರದ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಉದ್ಯೋಗಾರ್ಥಿಗಳಿಗಾಗಿ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.

ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾ ಕೌಶಲ್ಯ ಮಿಷನ್, ತುಮಕೂರು ವಿಶ್ವವಿದ್ಯಾಲಯದ ಉದ್ಯೋಗ ಕೋಶದ ಸಹಯೋಗದಲ್ಲಿ ಸರ್ವರಿಗೂ ಉದ್ಯೋಗವೆಂಬ ಉದ್ದೇಶದೊಂದಿಗೆ ಉದ್ಯೋಗಾಕಾಂಕ್ಷಿಗಳಿಗಾಗಿ ವಿವಿ ಆವರಣದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾರೇ ಆಗಲಿ ಆರ್ಥಿಕವಾಗಿ ಸ್ವಾವಲಂಬಿಯಾಗುವುದು ಅತ್ಯಾವಶ್ಯ. ಸರ್ಕಾರಿ ಉದ್ಯೋಗವಾಗಲಿ, ಖಾಸಗಿ ಉದ್ಯೋಗವಾಗಲಿ ಜೀವನ ನಿರ್ವಹಣೆಗೆ ಉದ್ಯೋಗ ಬೇಕೇಬೇಕು. ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಶ್ರಮಪಡಬೇಕು. ಪರಿಶ್ರಮವಿದ್ದಲ್ಲಿ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಭವಿಷ್ಯದ ದೃಷ್ಟಿಕೋನ ಇಟ್ಟುಕೊಂಡು ಆ ದಿಕ್ಕಿನಲ್ಲಿ ಪ್ರಯತ್ನದ ಹಾದಿಯಲ್ಲಿ ಸಾಗಬೇಕು. ಯುವ ಜನತೆಗೆ ಪೂರಕವಾಗಿ ಸರ್ಕಾರ ಹಲವಾರು ಯೋಜನೆ ರೂಪಿಸಿದ್ದು, ಯೋಜನೆಗಳ ಸದ್ಬಳಕೆ ಮಾಡಿಕೊಂಡು ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ರಾಜ್ಯದಲ್ಲಿ ಹೆಚ್ಚು ಉದ್ಯೋಗಾವಕಾಶಗಳಿದ್ದು, ಈ ಉದ್ಯೋಗ ಮೇಳದಲ್ಲಿ 30ಕ್ಕಿಂತ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಯುವಕರಿಗೆ ಉದ್ಯೋಗ ನೀಡಲು ಭಾಗವಹಿಸಿವೆ ಎಂದು ತಿಳಿಸಿದರಲ್ಲದೆ, ನಮ್ಮ ಕಾಲದಲ್ಲಿ ಪದವಿ ಮುಗಿಸಿದವರಿಗೆ ಕರೆದು ಕೆಲಸ ನೀಡುತ್ತಿದ್ದರು. ಪ್ರಸ್ತುತ ಪದವಿ ಪೂರ್ಣಗೊಳಿಸಿದರೂ ಉದ್ಯೋಗ ದೊರೆಯುವುದಿಲ್ಲ. ಈ ನಿಟ್ಟಿನಲ್ಲಿ ಉದ್ಯೋಗಾರ್ಥಿಗಳು ಕೌಶಲ್ಯ ತರಬೇತಿ ಹೊಂದುವುದು ಅತ್ಯಗತ್ಯ, ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಕೌಶಲ್ಯಾಧಾರಿತ ಹಾಗೂ ಮೌಲ್ಯಾಧಾರಿತ ಕೋರ್ಸ್ಗಳನ್ನು ಪ್ರಾರಂಭಿಸಲಾಗಿದ್ದು, ವಿದ್ಯಾರ್ಥಿಗಳು ಈ ಕೋರ್ಸ್ಗಳ ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು. ಉದ್ಯೋಗ ದೊರೆಯದ ಯುವಕರು ತಮ್ಮ ತಂದೆ ತಾಯಿ, ವ್ಯಾಸಂಗ ಮಾಡಿದ ಶಿಕ್ಷಣ ಸಂಸ್ಥೆ, ಸರ್ಕಾರ ದೂರದೆ ಕೌಶಲ್ಯ ಜ್ಞಾನ ಬೆಳೆಸಿಕೊಂಡು ಉತ್ತಮ ಉದ್ಯೋಗ ಹೊಂದಿ ಬದುಕು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಕೈಗಾರಿಕೋದ್ಯಮಿ ಹೆಚ್.ಸಿ.ಚಂದ್ರಶೇಖರ್ ನಿರುದ್ಯೋಗ ಸಮಸ್ಯೆ ಕಡಿಮೆಯಾಗಬೇಕಾದರೆ ಉದ್ಯಮಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾಗಬೇಕು. ಸರ್ಕಾರದಿಂದ ಎಲ್ಲರಿಗೂ ನೌಕರಿ ನೀಡುವುದು ಕಷ್ಟ ಸಾಧ್ಯ. ವಿದ್ಯಾಭ್ಯಾಸ ಮುಗಿದ ವಿದ್ಯಾರ್ಥಿಗಳು ಇಂತಹ ಉದ್ಯೋಗ ಮೇಳಗಳಲ್ಲಿ ಭಾಗವಹಿಸಿ ಉದ್ಯೋಗ ಹೊಂದಬಹುದಾಗಿದೆ. ಕಡಿಮೆ ವೇತನವೆಂದು ಉದ್ದಿಮೆಗಳಲ್ಲಿರುವ ಉದ್ಯೋಗಾವಕಾಶ ತಿರಸ್ಕರಿಸಬಾರದು. ಯಾವುದೇ ಕಂಪನಿಗಳು ಹೊಸಬರಿಗೆ ಹೆಚ್ಚಿನ ವೇತನ ನೀಡುವುದಿಲ್ಲ. ಕಂಪನಿಗಳು ಉದ್ಯೋಗಕ್ಕೆ ತಕ್ಕ ಕೌಶಲ್ಯ ನಿರೀಕ್ಷಿಸುವುದರಿಂದ ವಿದ್ಯಾಭ್ಯಾಸ ಪೂರ್ಣಗೊಳಿಸಿರುವ ಉದ್ಯೋಗಾಕಾಂಕ್ಷಿಗಳು ಅಗತ್ಯ ಕೌಶಲ್ಯ ತರಬೇತಿ ಪಡೆಯುವುದು ಸೂಕ್ತ, ಅನುಭವಕ್ಕಾದರೂ ಉದ್ಯೋಗಾರ್ಥಿಗಳು ಕಡಿಮೆ ವೇತನವಿದ್ದರೂ ಕೆಲಸ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಅನುಭವ ಹೊಂದಿದ ನಂತರ ಹೆಚ್ಚಿನ ವೇತನ ದೊರೆಯುವ ಉದ್ಯೋಗಕ್ಕೆ ಸೇರಲು ಅವಕಾಶವಿರುತ್ತದೆ ಎಂದು ತಿಳಿಸಿದರು.

ವಸಂತ ನರಸಾಪುರ ಕೈಗಾರಿಕಾ ಸಂಘದ ಅಧ್ಯಕ್ಷ ರಾಮಮೂರ್ತಿ ಮಾತನಾಡಿ, ವಸಂತ ನರಸಾಪುರದಲ್ಲಿರುವ ಕೈಗಾರಿಕೆಗಳು ವಿಶ್ವ ಮಟ್ಟದಲ್ಲಿ ಹೆಸರು ಮಾಡಿವೆ. ಇಂತಹ ಕೈಗಾರಿಕೆಗಳು ಉದ್ಯೋಗವನ್ನರಸಿ ಬರುವ ಅರ್ಹರಿಗೆ ಉದ್ಯೋಗ ನೀಡಬೇಕು ಎಂದು ತಿಳಿಸಿದರಲ್ಲದೆ, ನಿರುದ್ಯೋಗಿಗಳೂ ಸಹ ಉದ್ಯೋಗದ ಮೇಲೆ ಅವಲಂಬಿಸದೆ ಸ್ವಯಂ ಉದ್ಯೋಗ ಕೈಗೊಂಡು ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಯಶಸ್ವಿ ಕೈಗಾರಿಕೋದ್ಯಮಿಯಾಗಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಉದ್ಯೋಗದಾತರಾಗಬೇಕು. ಅಪಯಶಸ್ಸುಗಳನ್ನು ಯಶಸ್ಸಿನ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಂಡು ಅಭಿವೃದ್ಧಿ ಹೊಂದಬೇಕೆಂದು ಮಾರ್ಗದರ್ಶನ ನೀಡಿದರು.

ತುಮಕೂರು ವಿಶ್ವವಿದ್ಯಾನಿಲಯ ವಾಣಿಜ್ಯ ವಿಭಾಗದ ಡೀನ್ ಮತ್ತು ಪ್ರಾಧ್ಯಾಪಕರು ಹಾಗೂ ತುಮಕೂರು ವಿವಿ ಉದ್ಯೋಗ ಕೋಶದ ಉದ್ಯೋಗಾಧಿಕಾರಿ ಪ್ರೊ.ಬಿ. ಶೇಖರ್ ಮಾತನಾಡಿ, ಕೋವಿಡ್ ಕಾರಣದಿಂದ ಕಳೆದೆರಡು ವರ್ಷಗಳಲ್ಲಿ ವಿಶ್ವವಿದ್ಯಾಲಯದಲ್ಲಿ ಉದ್ಯೋಗ ಮೇಳ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಇಂದು ಆಯೋಜಿಸಿರುವ ಈ ಉದ್ಯೋಗ ಮೇಳದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಉದ್ಯೋಗ ಸಂಪಾದಿಸಬೇಕೆಂದು ಕಿವಿಮಾತು ಹೇಳಿದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳು, ನಿರುದ್ಯೋಗಿಗಳಿಗಾಗಿ ರೂಪಿಸಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ, ಪದವಿ ವಿದ್ಯಾರ್ಥಿಗಳಿಗಾಗಿ ಆನ್ಲೈನ್ ಮೂಲಕ ಕೌಶಲ್ಯ ತರಬೇತಿ ನೀಡಲು ಮೈಕ್ರೋಸಾಫ್ಟ್ ಕಂಪನಿ ಮುಂದೆ ಬಂದಿದ್ದು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಈ ತರಬೇತಿಯ ಸದುಪಯೋಗ ಪಡಿಸಿಕೊಳ್ಳಲು ಅನುವು ಮಾಡಿಕೊಡಬೇಕೆಂದು ಕುಲಪತಿಗಳಿಗೆ ಮನವಿ ಮಾಡಿದರು. ಬರುವ ದಿನಗಳಲ್ಲಿ ತಾಲ್ಲೂಕು ಮಟ್ಟದಲ್ಲಿಯೂ ಉದ್ಯೋಗ ಮೇಳ ಹಮ್ಮಿಕೊಳ್ಳುವ ಉದ್ದೇಶವನ್ನು ಇಲಾಖೆ ಹೊಂದಿದೆ ಎಂದು ಮಾಹಿತಿ ನೀಡಿದರು.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಾಯಕ ನಿರ್ದೇಶಕ ವಿಶ್ವೇಶ್ವರ್, ಡಾ.ದೇವರಾಜು, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಉದ್ಯೋಗಾಧಿಕಾರಿ ತಿಪ್ಪೇಸ್ವಾಮಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗೇಶ್, ಜಿಲ್ಲಾ ಸಮಾಲೋಚಕ ಆರ್.ರಘು, ವಿದ್ಯಾರ್ಥಿಗಳು ಹಾಜರಿದ್ದರು.

ಸುಮಾರು 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ನೋಂದಾಯಿಸಿಕೊಂಡಿದ್ದು, ಮೇಳದಲ್ಲಿ 1370 ಉದ್ಯೋಗಾರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ಪೈಕಿ 471 ಉದ್ಯೋಗಾಕಾಂಕ್ಷಿಗಳನ್ನು ವಿವಿಧ ಕಂಪನಿಗಳು ಆಯ್ಕೆ ಮಾಡಿಕೊಂಡಿದ್ದು, 409 ಉದ್ಯೋಗಾರ್ಥಿಗಳನ್ನು ಕಾಯ್ದಿರಿಸಲಾಗಿದೆ.

Get real time updates directly on you device, subscribe now.

Comments are closed.

error: Content is protected !!