ಕೊಬ್ಬರಿ ನಾಡಿಗೆ ಕೆ.ಟಿ.ಶಾಂತಕುಮಾರ್ ದಳಪತಿ!

ತಿಪಟೂರು ಕ್ಷೇತ್ರದಲ್ಲಿ ಕೆಟಿಎಸ್ಗೆ ಟಿಕೆಟ್ ಸಾಧ್ಯತೆ- ಕುತೂಹಲ ಮೂಡಿಸಿದ ಸಮಾಜ ಸೇವಕನ ನಡೆ

11,300

Get real time updates directly on you device, subscribe now.


ತಿಪಟೂರು: ಕಲ್ಪತರು ನಾಡು ಎಂದು ಪ್ರಸಿದ್ದಿ ಪಡೆದಿರುವ ತಿಪಟೂರಿನ ಕೊಬ್ಬರಿಗೆ ವಿಶ್ವದಲ್ಲಿ ವಿಶಿಷ್ಟ ಸ್ವಾದವಿದೆ. ಏಷ್ಯಾದಲ್ಲೇ ದೊಡ್ಡದಾದ ಕೊಬ್ಬರಿ ಮಾರುಕಟ್ಟೆಯನ್ನು ತಿಪಟೂರು ಹೊಂದಿದೆ. ಕೇಂದ್ರ ಮತ್ತು ರಾಜ್ಯಕ್ಕೆ ಹೆಚ್ಚಿನ ತೆರಿಗೆ ಸಲ್ಲಿಸುತ್ತಿರುವ ತಿಪಟೂರು ರಾಜಕೀಯವಾಗಿ ತನ್ನದೆ ಹಿನ್ನೆಲೆ ಹೊಂದಿದೆ.

ಇದೀಗ 2023 ರಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದ್ದು, ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಇದೀಗ ಚುನಾವಣೆ ತಾಲೀಮು ಆರಂಭಿಸಿದ್ದಾರೆ. ಅದರಲ್ಲೂ ತಿಪಟೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆದ್ದು ಸರ್ಕಾರದಲ್ಲಿ ಮಂತ್ರಿಿ ಆಗಿರುವ ಸಚಿವ ನಾಗೇಶ್ ಮತ್ತೊಮ್ಮೆ ಗೆಲ್ಲುವ ತವಕದಲ್ಲಿದ್ದಾರೆ. ಇನ್ನು ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಗೆಲ್ಲಲೇಬೇಕು ಎಂಬ ಛಲದೊಂದಿಗೆ ಕೆ.ಷಡಕ್ಷರಿ ರಣತಂತ್ರ ರೂಪಿಸುತ್ತಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಎದುರಾಗಿದೆ.

ಈ ಹಿಂದೆ ಜೆಡಿಎಸ್ನಿಂದ ಬಿ.ನಂಜಾಮರಿ ಆಯ್ಕೆಯಾಗಿ ಶಾಸಕರಾಗಿದ್ದರು, ಅದು ಬಿಟ್ಟರೆ ಇಲ್ಲಿ ಜೆಡಿಎಸ್ನಲ್ಲಿ ಪ್ರಬಲ ನಾಯಕರೇ ಇಲ್ಲವಾಗಿದ್ದಾರೆ. ಇದೀಗ ಹೊಸ ಅಭ್ಯರ್ಥಿ ಹೆಸರು ಕೇಳಿ ಬರುತ್ತಿದೆ. ಅದು ಬೇರಾರು ಅಲ್ಲ, ಸಮಾಜ ಸೇವಕ ಕೆ.ಟಿ.ಶಾಂಕಕುಮಾರ್ ಹೆಸರು.

ಕಲ್ಪತರು ನಾಡು ತಿಪಟೂರಿನಲ್ಲಿ ಒಂದಷ್ಟು ಸಮಾಜ ಸೇವೆ ಮಾಡುತ್ತಾ ತನ್ನದೇ ಆದ ಚಾಪು ಮೂಡಿಸಿರುವ ಶಾಂತಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡರು. ಆದರೆ ಇಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗುವುದು ಅನುಮಾನ. ಕೆ.ಷಡಕ್ಷರಿಗೆ ಟಿಕೆಟ್ ಪಕ್ಕ ಎಂಬ ಎಂಬ ಮಾತಿದೆಯಾದರೂ ಇಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ಗೆ ನಾಲ್ವರು ಆಕಾಂಕ್ಷಿಗಳಿದ್ದಾರೆ.

ಕಾಂಗ್ರೆಸ್ನಲ್ಲಿ ಟಿಕೆಟ್ಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಹಾಗೂ ಜೆಡಿಎಸ್ನಲ್ಲಿ ಪ್ರಬಲ ನಾಯಕ ಮತ್ತು ಆಕಾಂಕ್ಷಿಗಳು ಇಲ್ಲವಾದ ಕಾರಣ ಶಾಂತಕುಮಾರ್ ಜೆಡಿಎಸ್ನತ್ತ ಮುಖ ಮಾಡಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.

ಯಾವುದೇ ಹುದ್ದೆ ಇಲ್ಲದೆ, ಕೇವಲ ಜನಸೇವೆ ಮಾಡಿದ ಕೆ.ಟಿ.ಶಾಂತಕುಮಾರ್ ದಳಪತಿಯಾಗುತ್ತಾರೆ ಎಂಬ ವಿಚಾರ ಈಗ ದೊಡ್ಡ ಸುದ್ದಿಯಾಗುತ್ತಿದೆ. ಕಾಂಗ್ರೆಸ್ನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ ಜಯ ಕುಮಾರ್ ಪಕ್ಷದ ಚಟುವಟಿಕೆ ಮತ್ತು ಬೂತ್ ಕಮಿಟಿ ಪರಿಶೀಲಿಸಲು ತಿಪಟೂರಿಗೆ ಆಗಮಿಸಿದ ಸಂದರ್ಭದಲ್ಲಿ ಶಾಂತಕುಮಾರ್ ಗೈರು ಎದ್ದು ಕಾಣುತ್ತಿತ್ತು. ವಿಚಾರಿಸಿದಾಗ ಸರಿಯಾದ ಮಾಹಿತಿ ದೊರೆತಿರಲಿಲ್ಲ. ಅಲ್ಲದೆ ಪಕ್ಷದ ಪ್ರಚಾರಕ್ಕಾಗಿ ಗ್ರಾಮಗಳಿಗೆ ತೆರಳಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ತಾಲೂಕಿನಲ್ಲಿ ಜಾತ್ಯಾತೀತ ಜನತಾದಳದ ಅಭ್ಯರ್ಥಿ ಘೋಷಣೆಯನ್ನು ದೊಡ್ಡ ಗೌಡರ ಕುಟುಂಬ ಹೇಳಿಲ್ಲ, ಪಂಚರತ್ನ ರಥಯಾತ್ರೆ ತಿಪಟೂರಿನಲ್ಲಿ ನಡೆಯುತ್ತಿಲ್ಲ. ಸ್ಥಳೀಯ ಆಕಾಂಕ್ಷಿತ ಅಭ್ಯರ್ಥಿಗಳು ನೇರವಾಗಿ ದೊಡ್ಡ ಗೌಡರ ಕುಟುಂಬದವರ ಜೊತೆ ಮಾತನಾಡಿಲ್ಲ. ಯಾರು ಸಹ ನಾನೇ ಅಧಿಕೃತ ಅಭ್ಯರ್ಥಿ ಎಂದು ಎಲ್ಲಿಯೂ ಹೇಳಿಲ್ಲ. ಇದೀಗ ಶಾಂತಕುಮಾರ್ ಹೆಸರು ಜೋರಾಗಿ ಕೇಳಿ ಬರುತ್ತಿದೆ. ಇತ್ತ ಶಾಂತಕುಮಾರ್ ಮನಸ್ಸು ಮಾಡಿ ಜೆಡಿಎಸ್ಗೆ ತೆರಳಿದರೆ ಅವರು ಅಭ್ಯರ್ಥಿಯಾಗುವುದು ಖಚಿತ, ಇವರ ನಡೆ ಏನು ಎಂಬುದಕ್ಕೆ ಒಂದಷ್ಟು ದಿನ ಕಾಯಲೇಬೇಕು.

Get real time updates directly on you device, subscribe now.

Comments are closed.

error: Content is protected !!