ನಕಲಿ ಕೀಟ ನಾಶಕ ಮಾರಾಟ ಜಾಲ- ಅಧಿಕಾರಿಗಳ ದಾಳಿ

171

Get real time updates directly on you device, subscribe now.


ಪಾವಗಡ: ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿಯ ರೇಖಾ ಆಗ್ರೋ ಸರ್ವೀಸಸ್ ಮಳಿಗೆಯಲ್ಲಿ ನಕಲಿ ಹಾಗೂ ನೋಂದಾಯಿತವಲ್ಲದ ಕೀಟ ನಾಶಕ ಮತ್ತುರಸಗೊಬ್ಬರ ಮಾರಾಟ ಮಾಡುತ್ತಿರುವ ದೂರಿನ ಅನ್ವಯ ಕೃಷಿ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ತುಮಕೂರು ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಜಾರಿ ದಳದ ಎಡಿ ಪುಟ್ಟರಂಗಪ್ಪ ದಾಳಿ ನಡೆಸಿ ನಕಲಿ ಕೀಟ ನಾಶಕಗಳನ್ನು ವಶಪಡಿಸಿಕೊಂಡಿದ್ದಾರೆ.

ಪಾವಗಡ ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಆಗ್ರೋ ಸೆಂಟರ್ಗಳ ಹೆಸರಲ್ಲಿ ಬಡ ರೈತರನ್ನೇ ಗುರಿ ಮಾಡಿಕೊಂಡು ನಕಲಿ ಮತ್ತು ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿನನ್ವಯ ಆಗ್ರೋ ಸೆಂಟರ್ ಗಳಿಗೆ ಭೇಟಿ ನೀಡಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಲು ಮುಂದಾದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿಯಿರುವ ರೇಖಾ ಆಗ್ರೋಸ ರ್ವೀಸಸ್ ಮೇಲೆ ಇಲಾಖೆಯ ಅಧಿಕಾರಿಗಳ ತಂಡ ದಾಳಿ ಮಾಡಿ ಪರಿಶೀಲಿಸಿದಾಗ ನೋಂದಾಯಿತವಲ್ಲದ ಹಾಗೂ ಕಳಪೆ ಗುಣಮಟ್ಟದ ನೈಟ್ರೋಜನ್ ಮತ್ತು ಸಲ್ಫರ್ ಕೀಟ ನಾಶಕಗಳ ಅಪಾರ ಮಟ್ಟದ ದಾಸ್ತಾನು ಕಂಡು ಬಂದಿದೆ ಹಾಗೂ ರೈತರಿಗೆ ಕೀಟನಾಶಕ ಮತ್ತು ರಸಗೊಬ್ಬರ ವಿತರಣೆ ವೇಳೆ ಅಂಗಡಿ ಮಾಲೀಕರು ಅನುಸರಿಸಬೇಕಾದ ನಿಯಮಗಳನ್ನು ಗಾಳಿಗೆ ತೂರಿರುವುದು ಸಾಬೀತಾಗಿದೆ. ನಕಲಿ ಉತ್ಪನ್ನಗಳನ್ನು ಅಧಿಕಾರಿಗಳು ಜಪ್ತಿ ಮಾಡಿ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮಕ್ಕಾಗಿ ನ್ಯಾಯಾಲಯಕ್ಕೆ ವರದಿ ನೀಡಿರುವುದಾಗಿ ತಿಳಿದು ಬಂದಿದೆ.

ದಾಳಿ ವೇಳೆ ದೊರೆತಿರುವ ಕೀಟ ನಾಶಕಗಳ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಮಾಲೀಕರಿಗೆ ಮಾರಾಟ ತಡೆ ಆದೇಶ ನೀಡಲಾಗಿದೆ. ಕೀಟ ನಾಶಕ ಕಾಯ್ದೆ 1968ರ ಕಾಯ್ದೆಯಂತೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತುಮಕೂರಿನ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಜಾರಿ ದಳದ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!