ವಲಯ ಅರಣ್ಯಾಧಿಕಾರಿ ವಿರುದ್ಧ ರೈತರ ಆಕ್ರೋಶ

205

Get real time updates directly on you device, subscribe now.


ಗುಬ್ಬಿ: ರೈತರು ಅನುಭವದಲ್ಲಿರುವ ಸರ್ವೆ ನಂಬರ್ ಜಮೀನುಗಳಲ್ಲಿ ತೋಟಗಳಿಗೆ ಮಣ್ಣು ಒಡೆಯುತ್ತಿದ್ದರೂ ತಾಲ್ಲೂಕು ವಲಯ ಅರಣ್ಯಾಧಿಕಾರಿ ದುಗ್ಗಪ್ಪ ರೈತರ ಮೇಲೆ ದೌರ್ಜನ್ಯ ಎಸುಗುತ್ತಾ, ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ ನಿಟ್ಟೂರು ಹೋಬಳಿ ಹರೇನಹಳ್ಳಿ, ಕಾರೇಕುರ್ಚಿ ಭಾಗದ ನೂರಾರು ರೈತರು ಬುಧವಾರ ಪಟ್ಟಣದ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಈ ವೇಳೆ ಮುಖಂಡ ಸತೀಶ್ ಮಾತನಾಡಿ, ಅರಣ್ಯಾಧಿಕಾರಿಗಳ ವರ್ತನೆಯಿಂದ ರೈತರು ಭಯ ಭೀತರಾಗಿದ್ದಾರೆ. ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವ ಇವರ ನಡೆ ಖಂಡನೀಯವಾಗಿದೆ. ನಮ್ಮ ಜಮೀನಿನಲ್ಲಿ ಕೃಷಿ ಭೂಮಿಗಾಗಿ ಮಣ್ಣು ಹೊಡೆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಮಸ್ಯೆ ನೀಡುತ್ತಿದ್ದಾರೆ ಎಂದು ಹೇಳಿದರು.

ಮುಖಂಡ ಶಶಿಧರ್ ಮಾತನಾಡಿ, ರೈತರ ಹಾಗೂ ಸಾರ್ವಜನಿಕರೊಡನೆ ಸೌಹಾರ್ದಯುತವಾಗಿ ಕೆಲಸ ನಿರ್ವಹಿಸಬೇಕಾಗಿದ್ದ ಅಧಿಕಾರಿಯು ಕಾನೂನು ವ್ಯಾಪ್ತಿ ಮೀರಿ ವರ್ತಿಸುತ್ತಿದ್ದಾರೆ. ಇಂತಹವರನ್ನು ತಕ್ಷಣ ಅಮಾನತು, ಇಲ್ಲವೇ ವರ್ಗಾವಣೆ ಮಾಡಲೇಬೇಕು ಎಂದು ಒತ್ತಾಯಿಸಿದರು.

ಮುಖಂಡ ಚಂದ್ರಶೇಖರ ಬಾಬು ಮಾತನಾಡಿ ರೈತರೊಟ್ಟಿಗೆ ಉತ್ತಮ ಭಾಂದವ್ಯ ಹೊಂದಿ ಜನಸ್ನೇಹಿಯಾಗಿ ಇರಬೇಕಾಗಿದ್ದ ಅಧಿಕಾರಿ ಎಲ್ಲರನ್ನೂ ಏಕವಚನದಲ್ಲಿಯೇ ಮಾತನಾಡಿಸುತ್ತಾರೆ. ಇವರ ಗುಂಡಾವರ್ತನೆ ಹೆಚ್ಚಾಗಿದ್ದು ಇಂತಹವರಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ವಲಯ ಅರಣ್ಯಾಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಸ್ಥಳದಲ್ಲಿದ್ದ ಸಹಾಯಕ ಅರಣ್ಯಾಧಿಕಾರಿ ಮಹೇಶ್ ಮಾಲಗತ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ವಲಯ ಅರಣ್ಯಾಧಿಕಾರಿ ದುರ್ಗಪ್ಪ ಅವರು ತಪ್ಪು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ರೈತರು ಹಾಗೂ ಮುಖಂಡರು ಸಲ್ಲಿಸಿರುವ ಮನವಿ ಪತ್ರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಎಸಿಎಫ್ ಮಹೇಶ್ ಮಾಲಗತ್ತಿ ಹೇಳಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಗುರುಶಾಂತಪ್ಪ, ಮುಖಂಡರಾದ ಬೆಟ್ಟಸ್ವಾಮಿ, ಪಂಚಾಕ್ಷರಿ, ರೈತ ಹೋರಾಟಗಾರ ಯೋಗೀಶ್, ವಿಜಯ್ ಕುಮಾರ್, ರಮೇಶ್, ಬಸವರಾಜು, ನಾಗರಾಜು, ವಿವೇಕ್ ,ಆನಂದ್, ಪ್ರಕಾಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!