ಗೌರಿಶಂಕರ್ ಶಾಸಕ ಸ್ಥಾನ ಕಳೆದುಕೊಳ್ತಾರೆ: ಸೂರ್ಯ

177

Get real time updates directly on you device, subscribe now.


ತುಮಕೂರು: ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರು ಮಕ್ಕಳಿಗೆ ನಕಲಿ ವಿಮಾ ಕಾರ್ಡ್ ವಿತರಣೆ ಪ್ರಕರಣದಲ್ಲಿ ಚುನಾವಣಾ ಅಕ್ರಮ ಸಾಬೀತಾಗಿದ್ದು, ಕೆಲವೇ ದಿನಗಳಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸೂರ್ಯ ಮುಕುಂದರಾಜ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2018ರ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 16 ಸಾವಿರ ವಿದ್ಯಾರ್ಥಿಗಳಿಗೆ ನಕಲಿ ವಿಮೆ ಬಾಂಡ್ ಹಂಚಿದ್ದಾರೆ ಎಂಬುದು ಸಾಬೀತಾಗಿದೆ. ಸ್ವತಹಃ ಐಆರ್ಡಿಬಿಯೇ ಕಮ್ಮಗೊಂಡನಹಳ್ಳಿ ಶ್ರೀಮಾರುತಿ ಚಾರಿಟಬಲ್ ಟ್ರಸ್ಟ್ನಿಂದ ಗ್ರಾಮಾಂತರ ಕ್ಷೇತ್ರದ ಸುಮಾರು 16 ಸಾವಿರ ಮಕ್ಕಳಿಗೆ ನೀಡಿರುವ ವಿಮಾ ಬಾಂಡ್ ನಕಲಿ ಎಂಬುದನ್ನು ಒಪ್ಪಿಕೊಂಡಿದೆ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಶೀಘ್ರ ಅಂತಿಮ ತೀರ್ಪು ಹೊರಬೀಳಲಿದೆ ಎಂದರು.

ಗ್ರಾಮಾಂತರ ಶಾಸಕರ ಬೇನಾಮಿಯಾಗಿರುವ ಪಾಲನೇತ್ರಯ್ಯ ಚುನಾವಣಾ ಸಂದರ್ಭದಲ್ಲಿ ವಿಜೆಲೆನ್ಸ್ ನವರ ಕೈಗೆ ಸಿಕ್ಕು ತಾನು ಮಾಡಿರುವ ಅಕ್ರಮ ಒಪ್ಪಿ ತುಮಕೂರು ನ್ಯಾಯಾಲಯದಲ್ಲಿ ಒಂದು ಸಾವಿರ ದಂಡ ಕಟ್ಟಿದ್ದಾರೆ. ಗೌರಿಶಂಕರ್ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿ ಹಿಂಪಡೆದಿದ್ದಾರೆ. ಪಾಲನೇತ್ರಯ್ಯ ಸಲ್ಲಿಸಿರುವ ಅರ್ಜಿ ವಜಾಗೊಂಡಿದೆ. ನ್ಯಾಯಾಲಯದ ರಜೆ ಮುಗಿದ ನಂತರ ತೀರ್ಪು ಹೊರಬೀಳಲಿದ್ದು, ಗೌರಿಶಂಕರ್ ಶಾಸಕ ಸ್ಥಾನದಿಂದ ವಜಾಗೊಳ್ಳುವುದು ಖಚಿತ ಎಂದರು.

ತುಮಕೂರು ಗ್ರಾಮಾಂತರದ ಮಾಜಿ ಶಾಸಕ ಬಿ.ಸುರೇಶಗೌಡ ಸಹ ಹಲವಾರು ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದು, 2008 ರಲ್ಲಿ ಅಂದಿನ ಗುಬ್ಬಿ ಶಾಸಕರಾಗಿದ್ದ ಎಸ್.ಆರ್.ಶ್ರೀನಿವಾಸ್ ಅವರನ್ನು ಅಪರೇಷನ್ ಕಮಲ ಮಾಡಲು ಹೋಗಿ ಸಿಕ್ಕಿಕೊಂಡಿದ್ದು, ಈ ಸಂಬಂಧ ಶಿವಮೊಗ್ಗದ ರಮೇಶಗೌಡ ಎಂಬುವವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಸ್ವತಃ ಶಾಸಕ ಶ್ರೀನಿವಾಸ್ ಅವರು ಅಪರೇಷನ್ ಕಮಲಕ್ಕೆ 25 ಕೋಟಿ ರೂ. ಅಮೀಷ ಒಡ್ಡಿದ್ದರು ಎಂಬುದಾಗಿ ಸಾಕ್ಷ ನುಡಿದಿದ್ದು, ಅವರು ಸಹ ಶೀಘ್ರದಲ್ಲಿಯೇ ಅಪರಾಧಿಯಾಗಲಿದ್ದಾರೆ ಎಂದರು.

ತುಮಕೂರು ಗ್ರಾಮಾಂತರ ಕ್ಷೇತ್ರ ಹಾಲಿ ಮತ್ತು ಮಾಜಿ ಶಾಸಕರ ಜಿದ್ದಾಜಿದ್ದಿನ ಮೇಲಾಟದಿಂದ ನಲುಗಿ ಹೋಗಿದೆ. ಹಣ, ತೋಳ್ಬಲದಿಂದಲೇ ಚುನಾವಣೆ ಎದುರಿಸಲು ಸಜ್ಜಾಗುತ್ತಿರುವ ಇವರ ನಡುವೆ ಸಜ್ಜನ ರಾಜಕಾರಣಿಯೊಬ್ಬರನ್ನು ಕ್ಷೇತ್ರದ ಜನತೆ ಎದುರು ನೋಡುತ್ತಿದ್ದು, ಕಾಂಗ್ರೆಸ್ ಆ ಸ್ಥಾನ ತುಂಬಲಿದೆ. ನಾನು ಸೇರಿದಂತೆ ಮೂವರು ಯುವಕರು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಬಯಸಿದ್ದು, ಭ್ರಷ್ಟಾಚಾರ ಮುಕ್ತ, ಭಯ ಮುಕ್ತ ವಾತಾವರಣ ನೀಡುವುದೇ ನಮ್ಮ ಗುರಿ ಎಂದರು.
ಚುನಾವಣಾ ಅಕ್ರಮದಿಂದ ತುಂಬಿ ಹೋಗಿರುವ ಗ್ರಾಮಾಂತರ ಕ್ಷೇತ್ರದ ಯುವ ಜನರಿಗೆ ಹೊಸ ಭರವಸೆ ಮೂಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ 2023ರ ಜನವರಿಯಲ್ಲಿ ಮತ ಭ್ರಷ್ಟಾಚಾರದ ವಿರುದ್ಧ ನಾವು ಎಂಬ ವಿನೂತನ ಜಾಗೃತಿ ಆಂದೋಲನ ಆಯೋಜಿಸಿದ್ದು, ಮತ ಭ್ರಷ್ಟಾಚಾರ ವಿರೋಧಿಸಿ ಪ್ರಜಾಪ್ರಭುತ್ವ ಉಳಿಸಿ ಎಂಬ ಶೀರ್ಷಿಕೆಯಡಿ ಅಭಿಯಾನ ನಡೆಯಲಿದೆ ಎಂದರು.

Get real time updates directly on you device, subscribe now.

Comments are closed.

error: Content is protected !!