ತುಮಕೂರು: ಚಿತ್ರದುರ್ಗದ ಅಖಿಲ ಕರ್ನಾಟಕ ಶ್ರೀ ಗುರು ಮೇದಾರ ಕೇತೇಶ್ವರ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಅಖಿಲ ಕರ್ನಾಟಕ ಮೇದಾರ ಗಿರಿಜನಾಂಗ ಕಲ್ಯಾಣ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ 2023ರ ಜನವರಿ 7 ರಂದು ಮೇದಾರ ಶಿವಶರಣ ಶ್ರೀ ಕೇತೇಶ್ವರ ಮಹಾ ಮಠದ ಸಮುದಾಯ ಭವನ ಉದ್ಘಾಟನೆಯನ್ನು ಚಿತ್ರದುರ್ಗದಲ್ಲಿ ಆಯೋಜಿಸಲಾಗಿದೆ ಎಂದು ಚಿತ್ರದುರ್ಗ ಸೀಬಾರ ಮೇದಾರ ಗುರುಪೀಠದ ಪರಮ ಇಮ್ಮಡಿ ಬಸವ ಕೇತೇಶ್ವರ ಮಹಾ ಸ್ವಾಮೀಜಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2023ರ ಜನವರಿ 7 ರಂದು ಬೆಳಗ್ಗೆ 9 ಗಂಟೆಗೆ ಕರ್ನಾಟಕ ರಾಜ್ಯ ಚಿತ್ರದುರ್ಗ ಜಿಲ್ಲೆಯ ಹೊರ ವಲಯದಲ್ಲಿರುವ ಸೀಬಾರ ಗ್ರಾಮದಲ್ಲಿ ಭವ್ಯವಾಗಿ ನಿರ್ಮಾಣಗೊಂಡ ಮೇದಾರ ಶಿವಶರಣ ಕೇತೇಶ್ವರ ಮಹಾ ಮಠದ ಸಮುದಾಯ ಭವನ ಉದ್ಘಾಟನೆಯೊಂದಿಗೆ ಲೋಕಾರ್ಪಣೆ ಹಾಗೂ ಅಖಿಲ ಭಾರತ ಕೇತೇಶ್ವರ ಮಹಾ ಗುರು ಪೀಠವೆಂದು ಮರು ನೇಮಕ ಮಾಡುವ ಕಾರ್ಯಕ್ರಮವಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಮೇದಾರ ಬುಡಕಟ್ಟು ಬೃಹತ್ ಸಮಾವೇಶ, 12ನೇ ಶತಮಾನದ ಮೇದಾರ ಶಿವಶರಣ ಶ್ರೀಕೇತೇಶ್ವರರ ಮಡದಿ ಶಿವಶರಣೆ ಸಾತವ್ವೆ ತಾಯಿಯ ಹಾಗೂ ಮೇದಾರ ಕುಲಗುರುಗಳಾಗಿದ್ದ ಲಿಂಗೈಕ್ಯ ಹನುಮಯ್ಯ ಸ್ವಾಮೀಜಿ ಮತ್ತು ಲಿಂಗೈಕ್ಯ ಬಸವಪ್ರಭು ಸ್ವಾಮೀಜಿಗಳ ಪಂಚಲೋಹದ ವಿಗ್ರಹಗಳ ಪ್ರತಿಷ್ಠಾಪನೆ ಲೋಕಕ್ಕೆ ಅನಾವರಣ ಕಾರ್ಯಕ್ರಮದೊಂದಿಗೆ 25,111 ಮೇದಾರ ಮುತ್ತೈದೆ ತಾಯಂದಿರಿಗೆ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಪರಿಶಿಷ್ಟ ಪಂಗಡಕ್ಕೆ 3 ರಿಂದ 7 ಕ್ಕೆ ಮೀಸಲಾತಿ ಹೆಚ್ಚಿಸಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಮತ್ತು ಇವರಿಗೆ ಸಹರಿಸಿದ ಉಳಿದ ಮಂತ್ರಿ ಮಂಡಲಕ್ಕೆ, ಗಣ್ಯರಿಗೆ ಕೃತಜ್ಞತಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಎಲ್ಲಾ ಕಾರ್ಯಕ್ರಮಗಳಿಗೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಸುಮಾರು 2 ಲಕ್ಷಕ್ಕೂ ಹೆಚ್ಚು ಜನ ಸೇರಲಿದ್ದಾರೆ. ಇದು ನಮ್ಮ ದೇಶದ, ರಾಜ್ಯದ ಪ್ರತಿ ಮೇದಾರ ಕುಟುಂಬದ ಮನೆ ಮನೆ ಕಾರ್ಯಕ್ರಮವಾಗಿದ್ದು, ಈ ಬೃಹತ್ ಕಾರ್ಯಕ್ರಮವನ್ನು ರಕ್ಷಣಾ ಸಚಿವ ರಾಜನಾಥಸಿಂಗ್ ಉದ್ಘಾಟಿಸುವರು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸರ್ಕಾರದ ಮಂತ್ರಿಗಳಾದ ಪ್ರಹ್ಲಾದ್ ಜೋಷಿ, ಭಗವಂತ ಕೂಬಾ, ಎ.ನಾರಾಯಣ ಸ್ವಾಮಿ, ಶೋಭಾ ಕರಂದ್ಲಾಜೆ ಹಾಗೂ ಸಚಿವ ಸಂಪುಟದ ಮಂತ್ರಿಗಳು, ಶಾಸಕರು ಹಾಗೂ ಹೊರ ರಾಜ್ಯದ ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ಈ ಬೃಹತ್ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಈ ವೇಳೆ ಸಮುದಾಯದ ಮುಖಂಡರಾದ ಬ್ಯಾಂಕ್ ಕುಂಬಣ್ಣ, ಎಸ್.ಕೆ.ಗಂಗರಾಜು, ಸಿದ್ದಣ್ಣ, ದೊರೆರಾಜು, ಪರಶುರಾಮ್, ದಯಾನಂದ್, ಬಂಬೂ ಗಿರೀಶ್, ಬಿ.ವೈ.ಉಮೇಶ್, ಕೆ.ಎನ್. ಮಂಜುನಾಥ್, ಕಡೆಮನೆ ಎಸ್. ರವಿಕುಮಾರ್ ಹಾಜರಿದ್ದರು.
Comments are closed.