ಕುಣಿಗಲ್: ಪಟ್ಟಣದಲ್ಲಿ ಡಿಕೆಎಸ್ ಚಾರಿಟೇಬಲ್ ಟ್ರೆಸ್ಟ್ ವತಿಯಿಂದ ಹಮ್ಮಿಕೊಂಡಿರುವ ಕುಣಿಗಲ್ ಉತ್ಸವಕ್ಕೆ ಶುಕ್ರವಾರ ಅದ್ದೂರಿ ಚಾಲನೆ ಸಿಕ್ಕಿತು.
ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದು ರಂಗೋಲಿ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧೆಡೆಯಿಂದ ಮಹಿಳೆಯರು ಆಗಮಿಸಿ ಉತ್ಸಾಹದಿಂದ ಪಾಲ್ಗೊಂಡ ಕಾರಣ ಇಡೀ ಮೈದಾನ ರಂಗು ರಂಗಿನ ರಂಗೋಲಿಯಿಂದ ತುಂಬಿತು.
ಮೈದಾನದ ಮತ್ತೊಂದೆಡೆಯಲ್ಲಿ ವಿವಿಧ ಶಾಲಾ ಮಕ್ಕಳಿಗೆ ಸ್ಥಳದಲ್ಲೆ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಿದ್ದು ಮಕ್ಕಳು ತಮಗೆ ಇಷ್ಟ ಬಂದ ಚಿತ್ರ ಬಿಡಿಸಿ ಬಣ್ಣ ತುಂಬಿ ಖುಷಿಪಟ್ಟರು. ಡಿಕೆಎಸ್ ಟ್ರಸ್ಟ್ನ ಮುಖ್ಯಸ್ಥ ಶಾಸಕ ಡಾ.ರಂಗನಾಥ್ ಮಕ್ಕಳೊಂದಿಗೆ ಕೂತು ಕೆಲ ಚಿತ್ರ ಬಿಡಿಸುವುದು ತಾವು ಕಲಿತರು.
ಮಧ್ಯಾಹ್ನ 50ಕ್ಕೂ ಹೆಚ್ಚು ವಿವಿಧ ಗ್ರಾಮ ದೇವತೆಗಳ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆಯೋಜಿಸಿದ್ದು ಜಿಕೆಬಿಎಂಎಸ್ ಮೈದಾನದ ವರೆಗೂ ಪ್ರವಾಸಿ ಮಂದಿರದಿಂದ ಆಕರ್ಷಕ ಜನಪದ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಕರೆ ತರಲಾಯಿತು. ವೇದಿಕೆ ಕಾರ್ಯಕ್ರಮದಲ್ಲಿ ಚಿತ್ರನಟ ಪ್ರೇಮ್, ಆಯಿಶಾ ಪಾಲ್ಗೊಂಡಿದ್ದರು. ನಟ ಪ್ರೇಮ್ ಮಾತನಾಡಿ ಯುವ ಜನತೆ ಪೆಪ್ಸಿ, ಕೋಲಾ ತಂಪು ಪಾನೀಯಗಳಿಗೆ ಮೊರೆ ಹೋಗದೆ ದೇಶಿಯ ರೈತರ ಉತ್ಪನ್ನಗಳಾದ ಎಳನೀರು, ಕಬ್ಬಿನ ಜೂಸ್, ನಿಂಬೆ ಪಾನಕ ಇವುಗಳ ಬಳಕೆ ಮಾಡಿ ರೈತರು ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಸಹಕಾರ ನೀಡಬೇಕೆಂದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ಪಟ್ಟಣದ ಇತಿಹಾಸದಲ್ಲೆ ಮೊದಲ ಬಾರಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿರುವುದು ಖುಷಿ ತಂದಿದೆ. ಮಕ್ಕಳು ಸೇರಿದಂತೆ ಮಹಿಳೆಯರಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರ ತೆಗೆಯಲು ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಡಿರುವ ಎಲ್ಲರೂ ತಮ್ಮಲ್ಲಿರುವ ಪ್ರತಿಭೆ ವ್ಯಕ್ತಪಡಿಸುತ್ತಿರುವುದು ನೋಡಿದರೆ ನಮ್ಮ ತಾಲೂಕಿನಲ್ಲಿ ಹಲವಾರು ಪ್ರತಿಭೆಗಳಿರುವುದು ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವರ್ಗದವರಿಗೂ ಪ್ರತಿಭೆ ಅನಾವರಣಗೊಳಿಸುವ ನಿಟ್ಟಿನಲ್ಲಿ ಮತ್ತಷ್ಟು ಪೂರಕ ವೇದಿಕೆ ಕಲ್ಪಿಸಲಾಗುವುದು ಎಂದರು.
ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಲೋಹಿತ್ ಸೇರಿಂದತೆ ತಾಲೂಕಿನ ವಿವಿಧೆಡೆಯಿಂದ ವಿವಿಧ ಕಾಂಗ್ರೆಸ್ ಮುಖಂಡರು, ಪುರಸಭೆ ಕಾಂಗ್ರೆಸ್ ಸದಸ್ಯರು ಪಾಲ್ಗೊಂಡಿದ್ದರು.
Comments are closed.