ಕುಣಿಗಲ್: ಅಸಮರ್ಪಕ ಬಸ್ ವ್ಯವಸ್ಥೆ ಖಂಡಿಸಿ ಸೋಮವಾರ ಬೆಳ್ಳಂಬೆಳಗ್ಗೆ ನೂರಾರು ವಿದ್ಯಾರ್ಥಿಗಳು ಎಬಿವಿಪಿ ಸಹಕಾರದೊಂದಿಗೆ ಬಸ್ ತಡೆದು ದಿಡೀರ್ ಪ್ರತಿಭಟನೆ ನಡೆಸಿದರು.
ನೂರಾರು ವಿದ್ಯಾರ್ಥಿಗಳು ಸೋಮವಾರ ಬೆಳಗ್ಗೆ ಸಾರಿಗೆ ಸಂಸ್ಥೆ ನಿಲ್ದಾಣಕ್ಕೆ ಆಗಮಿಸಿ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಕಾರಣ ಬಸ್ ನಿಲ್ದಾಣದ ಮುಂಭಾಗದ ಹಳೇ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದರು. ಸಿಪಿಐ ಗುರುಪ್ರಸಾದ್ ಮತ್ತು ಸಿಬ್ಬಂದಿ ವಿದ್ಯಾರ್ಥಿಗಳ ಮನ ಒಲಿಸಲು ಯತ್ನಿಸಿದಾಗ ವಿದ್ಯಾರ್ಥಿಗಳು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ನಂತರ ಪೊಲೀಸರ ಮನವಿ ಮೇರೆಗೆ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯ ತುಮಕೂರು ಕಡೆ ಹೋಗುವ ಬಸ್ ತಡೆದು ಪ್ರತಿಭಟಿಸಿದ್ದು ಎಬಿವಿಪಿಯ ಅಪ್ಪುಪಾಟೀಲ್, ರವೀಶ್ ಇತರರು ಸಾರಿಗೆ ಸಂಸ್ಥೆ ಕಾರ್ಯ ವೈಖರಿ ಖಂಡಿಸಿ ಪೊಲೀಸರ ಮುಂದೆ ಸಾರಿಗೆ ಸಂಸ್ಥೆ ಡಿಪೋ ಮ್ಯಾನೇಜರ್ರನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಸಾರಿಗೆ ಸಂಸ್ಥೆಯ ಹಿರಿಯಾಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಆಗ್ರಹಿಸಿ ಪಟ್ಟು ಹಿಡಿದರು.
ಈ ವೇಳೆ ಕೆಲ ವಿದ್ಯಾರ್ಥಿನಿಯರು ಕುಣಿಗಲ್ನಿಂದ ತುಮಕೂರಿಗೆ ಸಾವಿರಾರು ಪಾಸ್ ನೀಡಿದ್ದಾರೆ. ಬೆಳಗ್ಗೆ ಏಳು ಗಂಟೆಯಿಂದ ಎಂಟುವರೆ ಗಂಟೆವರೆಗೂ ಒಂದು ಅಥವಾ ಎರಡು ಬಸ್ ಮಾತ್ರ ಇರುತ್ತದೆ. ಇಲ್ಲಿ ಕೇಳಿದರೆ ಸ್ಪಂದಿಸುವುದಿಲ್ಲ. ಸಾವಿರಾರು ಮಂದಿ ಒಟ್ಟಿಗೆ ಹೇಗೆ ಹೋಗಲು ಸಾಧ್ಯ, ಮೈಸೂರು ಕಡೆಯಿಂದ ಬರುವ ಬಸ್ಸುಗಳಲ್ಲಿ ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಹತ್ತಲು ಬಿಡೋದಿಲ್ಲ. ನಾವೇನು ಪಾಸ್ಗೆ ಕಾಸು ಕಟ್ಟಿಲ್ಲವೆ. ಕೆಲ ಸಿಬ್ಬಂದಿ ವಿದ್ಯಾರ್ಥಿನಿಯರನ್ನು ಕುರಿತು ಕೆಟ್ಟ ಶಬ್ದಗಳನ್ನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರವೀಶ್ ಮಾತನಾಡಿ, ಒಂದೆ ಬಸ್ಸಿನಲ್ಲಿ ವಿದ್ಯಾರ್ಥಿನಿಯರು ಸೇರಿದಂತೆ ನೂರಾರು ಮಂದಿ ಹತ್ತಿಕೊಂಡಾಗ ಕೆಲ ಸಹ ಪ್ರಯಾಣಿಕರು ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಾರೆ. ಇದರಿಂದ ಹೆಣ್ಣು ಮಕ್ಕಳು ಸಮಸ್ಯೆ ಆಗುತ್ತಿದ್ದರೂ ಹೇಳಿಕೊಳ್ಳಲಾಗದೆ ಪರದಾಡುತ್ತಿದ್ದಾರೆ. ಈ ಸಮಸ್ಯೆಗೆ ಮೂಲ ಕಾರಣ ಸ್ಥಳೀಯ ಸಾರಿಗೆ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬಸ್ ಬಿಟ್ಟರೆ ಈ ರೀತಿ ಅಗೋಲ್ಲ ಎಂದರು.
ಕೆಲಕಾಲ ಪ್ರತಿಭಟನೆ ನಂತರ ಸಾರಿಗೆ ಸಂಸ್ಥೆಯ ತುಮಕೂರು ವಿಭಾಗದ ಅಧಿಕಾರಿ ಪರಮೇಶ್ವರ್ ಆಗಮಿಸಿ ಬೆಳಗ್ಗೆ ಏಳು ಗಂಟೆಯಿಂದ ಒಂಭತ್ತು ಗಂಟೆವರೆಗೂ ಹದಿನೈದು ನಿಮಿಷಕ್ಕೆ ಒಂದರಂತೆ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿ ಯಾವುದೇ ಸಿಬ್ಬಂದಿ ವಿದ್ಯಾರ್ಥಿಯೊಂದಿಗೆ ಅಸಭ್ಯವಾಗಿ ವರ್ತಿಸಿದಲ್ಲಿ ದಾಖಲೆ ಸಮೇತ ದೂರು ನೀಡಿದರೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ಹರ್ಷೀತಾ, ವಿಕಾಸ, ಗಗನ, ಚೇತನ, ವಿನಯ್, ಜೀವಿತಾ, ರಕ್ಷಿತಾ, ಯೋಗಿನಿ, ಚಂದನಾ ಇತರರು ಇದ್ದರು.
Comments are closed.