ದಿಬ್ಬೂರಿನ ಚಿತ್ರಣ ಬದಲಾಗಲಿದೆ: ಶಾಸಕ

145

Get real time updates directly on you device, subscribe now.


ತುಮಕೂರು: ಮುಂದಿನ 3-4 ತಿಂಗಳಲ್ಲಿ ದಿಬ್ಬೂರಿನ ಚಿತ್ರಣ ಬದಲಾಗಲಿದೆ ಎಂದು ಶಾಸಕ ಜ್ಯೋತಿಗಣೇಶ್ ಹೇಳಿದರು.

ನಗರದ ದಿಬ್ಬೂರಿನಲ್ಲಿ 309 ಲಕ್ಷ ರೂ. ವೆಚ್ಚದಲ್ಲಿ 2.08 ಕಿ.ಮೀ. ಉದ್ದದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಈ ಹಿಂದೆ ದಿಬ್ಬೂರಿನ ಬಗ್ಗೆ ತೆಗಳಿಕೆಯ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಈಗ ಅದೆಲ್ಲ ಮುಗಿದ ಅಧ್ಯಾಯ. ಮುಂದಿನ 3-4 ತಿಂಗಳೊಳಗೆ ಈ ವಾರ್ಡ್ನಲ್ಲಿ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಸೌಕರ್ಯ ಜನತೆಗೆ ಸಿಗಲಿದ್ದು, ದಿಬ್ಬೂರಿನ ಚಿತ್ರಣವೇ ಬದಲಾಗುತ್ತದೆ ಎಂದರು.

ಈ ಭಾಗದಲ್ಲಿ ಮಳೆ ಬಂದಾಗ ರಸ್ತೆಯಲ್ಲಿ ನದಿಯಂತೆ ನೀರು ಹರಿಯುತ್ತಿತ್ತು. ದಿಬ್ಬೂರು ಸರ್ಕಲ್ನಿಂದ ಶಿರಾ ಗೇಟ್ವರೆಗೂ ಜನರ ಓಡಾಟಕ್ಕೆ ಅನಾನುಕೂಲವಾಗುತ್ತಿತ್ತು. ಇದನ್ನು ಮನಗಂಡು ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಪಿಡಬ್ಲ್ಯೂಡಿ ಇಲಾಖೆಯಿಂದ ರಸ್ತೆ, ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ದಿಬ್ಬೂರು ಸರ್ಕಲ್ನಿಂದ ಹಳೇ ಚೆಕ್ಪೋಸ್ಟ್ ವರೆಗೂ ಸ್ಮಾರ್ಟ್ಸಿಟಿ ವತಿಯಿಂದ ರಸ್ತೆ ನಿರ್ಮಾಣಕ್ಕೆ ಹಣ ಕೊಡಲಾಗಿದೆ. ಹಾಗೆಯೇ ಸರ್ಕಾರದಿಂದ ಶಾಸಕರಿಗೆ ನೀಡಿರುವ ಅನುದಾನದ ಹಣವನ್ನು ಎಲ್ಲೆಲ್ಲಿ ಸಮಸ್ಯೆ ಜಾಸ್ತಿ ಇದೆಯೋ ಅಲ್ಲಿಗೆ ನೀಡಲಾಗಿದೆ ಎಂದ ಅವರು ಪಿಡಬ್ಲ್ಯೂಡಿ ಇಲಾಖೆಯಿಂದ ಗುಣಮಟ್ಟದ ರಸ್ತೆ ಮಾಡಲಾಗುತ್ತಿದೆ. ಮುಂದಿನ ಒಂದೂವರೆ ತಿಂಗಳೊಳಗಾಗಿ ಈ ರಸ್ತೆ ನಿರ್ಮಾಣವಾಗಲಿದೆ ಎಂದರು.

ಈಗಾಗಲೇ ಸ್ಮಾರ್ಟ್ಸಿಟಿ ಯೋಜನೆಯಿಂದ ಅಂಗನವಾಡಿ ಕೇಂದ್ರಗಳು, ಶಾಲೆಗಳ ನಿರ್ಮಾಣ ಸಹ ಮಾಡಲಾಗುತ್ತಿದೆ. ಹಾಗೆಯೇ ಇನ್ನೊಂದು ತಿಂಗಳಲ್ಲಿ ಈ ಭಾಗದಲ್ಲಿ ಸರ್ಕಾರದಿಂದ ನಮ್ಮ ಕ್ಲಿನಿಕ್ ಸಹ ತೆರೆಯಲಾಗುತ್ತದೆ. ಈ ನಮ್ಮ ಕ್ಲಿನಿಕ್ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ತೆರೆದಿರುತ್ತದೆ. ಹೊರ ರೋಗಿಗಳಿಗೆ ಚಿಕಿತ್ಸೆ ದೊರೆಯಲಿದೆ. ಇದರಿಂದ ಸರ್ಕಾರಿ ಆಸ್ಪತ್ರೆಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ ಎಂದರು.

ತುಮಕೂರು ನಗರಕ್ಕೆ 7 ನಮ್ಮ ಕ್ಲಿನಿಕ್ ದೊರೆತಿದ್ದು, ಈಗಾಗಲೇ ಮರಳೂರು, ಮೆಳೇಕೋಟೆಯಲ್ಲಿ ಸ್ಥಾಪಿಸಲಾಗಿದೆ. ಹಾಗೆಯೇ ಅಗತ್ಯ ಇರುವ ವಾರ್ಡ್ಗಳಲ್ಲಿ ಈ ನಮ್ಮ ಕ್ಲಿನಿಕ್ ತೆರೆಯಲಾಗುವುದು ಎಂದು ಹೇಳಿದರು.

ಮುಖಂಡ ಮನೋಹರಗೌಡ ಮಾತನಾಡಿ, ನಮ್ಮ ವಾರ್ಡ್ನಲ್ಲಿ 4 ಅಶ್ವತ್ಥ್ಕಟ್ಟೆ, 4 ಅಂಗನವಾಡಿ ಕೇಂದ್ರ ಹಾಗೂ 6 ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್ಸಿಟಿ ವತಿಯಿಂದ ನಿರ್ಮಿಸಲಾಗಿದೆ. ಶಾಸಕರು ನಮ್ಮ ಒಂದೇ ವಾರ್ಡ್ಗೆ 3 ಕೋಟಿಗೂ ಅಧಿಕ ಹಣ ನೀಡಿದ್ದು, ರಸ್ತೆ, ಚರಂಡಿಗಳ ಅಭಿವೃದ್ಧಿಗೆ ಸಹಕರಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪಾಲಿಕೆ ಉಪ ಮೇಯರ್ ನರಸಿಂಹಮೂರ್ತಿ, ಪಾಲಿಕೆ ಸದಸ್ಯರಾದ ವೀಣಾ ಮನೋಹರಗೌಡ, ಜೆ.ಕುಮಾರ್, ಟೂಡಾ ಮಾಜಿ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!