ವಿವಿಧ ಬೇಡಿಕೆ ಈಡೇರಿಕೆಗೆ ಆಶಾಗಳ ಪ್ರತಿಭಟನೆ

82

Get real time updates directly on you device, subscribe now.


ತುಮಕೂರು: ಆಶಾ ಕಾರ್ಯಕರ್ತೆಯರಿಗೆ ಆರ್ಸಿಎಚ್ ಪೋರ್ಟಲ್ ಮೂಲಕ ಪ್ರೋತ್ಸಾಹಧನ ನೀಡುವುದನ್ನು ರದ್ದುಪಡಿಸಿ, ರುಟೀನ್ ಕೆಲಸಗಳು ಮತ್ತು ಇತರ ನಿಗದಿತ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಹಣವನ್ನು ಒಟ್ಟುಗೂಡಿಸಿ ಮಾಸಿಕ ಗೌರವಧನ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಟೌನ್ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ಆಶಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

ಆರ್ಸಿಹೆಚ್ (ಆಶಾ ನಿಧಿ) ಪೋರ್ಟಲ್ನಲ್ಲಿ ಇರುವ ಅಗಣಿತ ಸಮಸ್ಯೆಗಳ ಕಾರಣಗಳಿಂದ ಮಾಡಿದ ಹಲವಾರು ಚಟುವಟಿಕೆಗಳಿಗೆ ಹಣ ಬರುತ್ತಿಲ್ಲ ಎಂದು ಪುರಾವೆಗಳ ಸಹಿತ ಹಲವಾರು ವರ್ಷಗಳಿಂದ ಸರ್ಕಾರ, ಇಲಾಖೆಯಲ್ಲಿ ಪದೇ ಪದೆ ದೂರು ದಾಖಲಿಸಿದ ಮೇಲೆ ಸಂಘದ ರಾಜ್ಯ ಪದಾಧಿಕಾರಿಗಳೊಂದಿಗೆ ಉನ್ನತ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಸಮಸ್ಯೆಯನ್ನು ಗುರುತಿಸಿದ ಮೇಲೆ ಭರವಸೆ ನೀಡಿದಂತೆ 2022ರ ಡಿಸೆಂಬರ್ ನಂತರ ಆರ್ ಸಿ ಹೆಚ್ ಪೋರ್ಟಲ್ ನಿಂದ ಪ್ರೋತ್ಸಾಹಧನ ಪಾವತಿ ಮಾಡುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ರೂ. 5000, ನಿಗದಿತ ರುಟೀನ್ ಚಟುವಟಿಕೆಗಳ ನಿಶ್ಚಿತ ಗೌರವಧನ ರೂ. 2000 ಮತ್ತು ಆಶಾ ನಿಧಿಯ ಮೂಲಕ ಪಡೆಯುವ ವಿವಿಧ ಚಟುವಟಿಕೆಗಳ ಪ್ರೋತ್ಸಾಹಧನ ಸರಾಸರಿ ರೂ. 5000 ಗಳನ್ನು ಒಟ್ಟುಗೂಡಿಸಿ ಮಾಸಿಕ ರೂ.12,000 ಒಂದೇ ಗೌರವಧನ ನಿಗದಿ ಮಾಡಿ ಪ್ರತಿ ತಿಂಗಳು ಪಾವತಿಸಬೇಕು ಎಂದು ಆಗ್ರಹಿಸಿದರು.

ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಇಲ್ಲ. ಆದ್ದರಿಂದ ಗೌರವಧನ ಹೆಚ್ಚಿಗೆ ಮಾಡಿ ಸರ್ಕಾರದಿಂದ ಆದೇಶ ಮಾಡಬೇಕು. ಸೇವಾ ನಿವೃತ್ತಿ, ಸೇವಾ ಅವಧಿಯಲ್ಲಿ ಸ್ವಯಂ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಈಗಿರುವ ರೂ. 20,000 ಇಡಿಗಂಟನ್ನು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇರುವಂತೆ ರೂ. 3 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ತೀವ್ರವಾದ ಅನಾರೋಗ್ಯ, ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ 3 ತಿಂಗಳು ಕಾಲ ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಮತ್ತು ರುಟೀನ್ ಚಟುವಟಿಕೆಗಳ ನಿಗದಿತ ಪ್ರೋತ್ಸಾಹಧನ ನೀಡಲು ಸೂಕ್ತ ಆದೇಶ ಮಾಡಬೇಕು. ಆಶಾ ಸುಗಮಕಾರರನ್ನು ಆಶಾ ದಿಂದ ಬೇರ್ಪಡಿಸಿ ಅವರ ಹುದ್ದೆಗೆ ತಕ್ಕಂತೆ ಮಾಸಿಕ ಗೌರವಧನ ಮತ್ತು ಪ್ರಯಾಣ ಭತ್ಯೆ ನಿಗದಿ ಮಾಡಿ ಆದೇಶ ಹೊರಡಿಸಿ ನಗರ ಪ್ರದೇಶಗಳಿಗೂ ಸುಗಮಕಾರರನ್ನು ನೇಮಿಸಬೇಕು ಎಂದರು.

ಆಶಾ ಕ್ಷೇಮಾಭಿವೃದ್ದಿ ನಿಧಿ ಸ್ಥಾಪಿಸಿ, ತೀವ್ರ ಆರೋಗ್ಯ ತೊಂದರೆಗೊಳಗಾದ ಆಶಾಗಳಿಗೆ ಅನಾರೋಗ್ಯಕ್ಕೆ ಅನುಗುಣವಾಗಿ ಚೇತರಿಕೆಗೆ ಪರಿಹಾರ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ನೂರಾರು ಮಂದಿ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!