ಶುಲ್ಕ ಕಡಿತಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಹೋರಾಟ

233

Get real time updates directly on you device, subscribe now.


ತುಮಕೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ನಿಗದಿತ ಶೇ.10 ಕ್ಕಿಂತ ಅಧಿಕವಾಗಿ ಏರಿಸಿರುವ ಶುಲ್ಕವನ್ನು ಈ ಕೂಡಲೇ ಕಡಿತಗೊಳಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಟೌನ್ಹಾಲ್ ವೃತ್ತದಲ್ಲಿ ಜಮಾಯಿಸಿದ ಎಬಿವಿಪಿ ಕಾರ್ಯಕರ್ತರು ಅಶೋಕ ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿಗಳ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಒಂದು ರಾಜ್ಯ ಮಟ್ಟದ ವಿಶ್ವವಿದ್ಯಾಲಯವಾಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಈ ವಿವಿ ಅಧೀನ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.

ಸಮಾಜದಲ್ಲಿ ಹಲವಾರು ಉತ್ತಮ ಗುಣಮಟ್ಟದ ಅಭಿಯಂತರರು ಈ ವಿವಿ ಯಿಂದ ಪದವಿ ಹೊಂದಿದ್ದು, ವಿವಿ ಯು ಉತ್ತಮ ಹೆಸರನ್ನು ಹೊಂದಿದೆ. ಈ ವಿಟಿಯು ವಿವಿ ಯು ಕಾನೂನು ಬದ್ಧವಾಗಿ ಶೇ.10 ರಷ್ಟು ಶುಲ್ಕ ಏರಿಕೆ ಮಾಡಬೇಕಾಗಿತ್ತು. ಆದರೆ ಯಾವುದೇ ಪರಿಮಿತಿ ಅನುಸರಿಸದೆ ವಿವಿ ಯು ಶುಲ್ಕ ಏರಿಕೆ ಮಾಡಿರುವ ಈ ನಡೆ ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇಂಜಿನಿಯರಿಂಗ್ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಶೇ.25, ಅಂಕಪಟ್ಟಿ ಶುಲ್ಕವನ್ನು ಶೇ.100, ಪದವಿ ಸರ್ಟಿಫಿಕೇಟ್ ನೀಡಲು ಶೇ.50 ಶುಲ್ಕ ಏರಿಕೆ ಈ ರೀತಿಯಾಗಿ ಎಲ್ಲಾ ವಿಭಾಗದ ನೂತನವಾದ ಶುಲ್ಕ ಪಟ್ಟಿಯನ್ನು ವಿವಿ ಯು ಹೊರಡಿಸಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಕಾನೂನು ಬದ್ಧವಲ್ಲದ ಈ ರೀತಿಯ ಶುಲ್ಕ ಏರಿಕೆಯನ್ನು ಸರಿಯಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಧಿಕವಾಗಿ ಏರಿಸಿರುವ ಶುಲ್ಕವನ್ನು ಕೂಡಲೇ ಖಡಿತಗೊಳಿಸಬೇಕು ಎಂದು ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ನ ಕಾರ್ಯಕರ್ತರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ತುಮಕೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್, ಜಿಲ್ಲಾ ಸಂಚಾಲಕ ಗಣೇಶ್, ಗುರುಪ್ರಸಾದ್, ಲಿಖಿತ್, ಗುರು, ವೆಂಕಟೇಶ್, ವಿದ್ಯಾರ್ಥಿಗಳಾದ ಪೂಜಾ, ನಿತ್ಯಶ್ರೀ, ಜ್ಯೋತಿ, ರಚನಾ ಮತ್ತಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!