ಇಂದಿನ ಸಮಾಜಕ್ಕೆ ಕುವೆಂಪು ಸಾಹಿತ್ಯ ಪ್ರಸ್ತುತ: ಸಿಇಒ

129

Get real time updates directly on you device, subscribe now.


ತುಮಕೂರು: ಇಂದಿನ ಸಮಾಜಕ್ಕೆ ಕುವೆಂಪುರವರ ಸಾಹಿತ್ಯ ಮತ್ತು ನಾಟಕಗಳು ಅತ್ಯಂತ ಪ್ರಸ್ತುತ ಹಾಗೂ ಅತ್ಯಗತ್ಯವಾಗಿವೆ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ರಂಗ ಕಹಳೆ, ಬೆಂಗಳೂರು ಹಾಗೂ ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು ಸಹಯೋಗದೊಂದಿಗೆ ಏರ್ಪಡಿಸಲಾಗಿರುವ 21ನೇ ಕುವೆಂಪು ನಾಟಕೋತ್ಸವ ಉದ್ಘಾಟಿಸಿ ಮಾತನಾಡಿ, ಮಕ್ಕಳ ಮನೋವಿಕಾಸಕ್ಕಾಗಿ ಕುವೆಂಪುರವರ ಮಕ್ಕಳ ನಾಟಕಗಳು ಶಾಲಾ ಪಠ್ಯದಲ್ಲೂ ಸೇರಬೇಕು. ರಂಗ ಕಹಳೆ ಸಂಸ್ಥೆಯ ಬಗ್ಗೆ ಸುಮಾರು ವರ್ಷಗಳಿಂದ ತಿಳಿದಿದ್ದೇನೆ. ಭಾರತದಾದ್ಯಂತ ಪ್ರತಿ ರಾಜ್ಯ, ಜಿಲ್ಲೆಯಲ್ಲೂ ಕುವೆಂಪುರವರ ನಾಟಕೋತ್ಸವದ ಮೂಲಕ ವಿಶ್ವಮಾನವ ಸಂದೇಶ ಸಾರುತ್ತಿರುವುದು ಒಂದು ಹೆಗ್ಗಳಿಕೆಯ ವಿಷಯ ಎಂದರು.

ನಾಟಕ ತಂಡದವರು ಮಕ್ಕಳ ಮೂಲಕ ಕುವೆಂಪು ನಾಟಕಗಳನ್ನು ಅಭ್ಯಾಸ ಮಾಡಿ ಪ್ರದರ್ಶಿಸುತ್ತಿರುವುದು ಹೆಮ್ಮೆಯ ಸಂಗತಿ. ತುಮಕೂರು ಜಿಲ್ಲೆಯಲ್ಲಿ ರಂಗಕಲೆಗೆ ಸಾಕಷ್ಟು ಪ್ರೋತ್ಸಾಹವಿದ್ದು, ತುಮಕೂರಿನ ಜನ ಕುವೆಂಪು ನಾಟಕಗಳನ್ನು ಹೆಚ್ಚು ವೀಕ್ಷಿಸಲಿ ಎಂದರು.
ಆಶಯ ನುಡಿಗಳನ್ನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಜಗತ್ತಿಗೇ ವಿಶ್ವಮಾನವ ಸಂದೇಶ ನೀಡಿದ ಕುವೆಂಪುರವರು ನಮ್ಮ ಕನ್ನಡಿಗರ ಹೆಮ್ಮೆ. ಅವರ ನಾಟಕಗಳು ದೇಶದಾದ್ಯಂತ 1000 ಹೆಚ್ಚು ಪ್ರದರ್ಶನ ನೀಡಿ ಕುವೆಂಪು ಸಾಹಿತ್ಯವನ್ನು ಪರಿಚಯಿಸುತ್ತಿರುವ ರಂಗ ಕಹಳೆ ಸಂಸ್ಥೆಯು ಅಭಿನಂದನಾರ್ಹವಾದುದು ಎಂದರು.

ಕುವೆಂಪು ರವರು ನವೋದಯ ಕವಿ, ಪ್ರಕೃತಿ ಕವಿ. ಕುವೆಂಪುರವರ ಸಾಹಿತ್ಯಗಳನ್ನು ನಾಟಕ ರೂಪದಲ್ಲಿ ಅಭಿನಯ ಮಾಡುತ್ತಿರುವ ರಂಗ ಕಹಳೆ ನಾಟಕ ತಂಡಕ್ಕೆ ಯಶಸ್ಸು ದೊರಕಲಿ. ತುಮಕೂರು ಜಿಲ್ಲೆಗೆ ವಿಶೇಷವಾಗಿ ಕುವೆಂಪುರವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದ ನೆನಪು ಮರುಕಳಿಸುವಂತೆ ಈ ನಾಟಕ ಯಶಸ್ವಿಯಾಗಲಿ ಎಂದು ಆಶಿಸಿದರು.

ಕುವೆಂಪುರವರ ನಾಟಕಗಳನ್ನು ಮಕ್ಕಳು ಹೆಚ್ಚು ಹೆಚ್ಚು ನೋಡುವಂತಾಗಬೇಕು ಎಂದು ಅವರು ಹೇಳಿದರು.

ನಾಟಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಡಾ. ಲಕ್ಷ್ಮಣದಾಸ್ ಮಾತನಾಡಿ, ಕುವೆಂಪು ಮಹಾಕವಿ, ಶಿಶು ಸಾಹಿತ್ಯದಿಂದಿಡಿದು ಮಹಾ ಕಾವ್ಯದವರೆಗೆ ಅವರು ರಚಿಸದೇ ಇರುವ ಕಾವ್ಯಗಳೇ ಇಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ಪ್ರಕೃತಿ ಮತ್ತು ಮಾನವ ಸಂಬಂಧಗಳು ಕುವೆಂಪು ಸಾಹಿತ್ಯದ ವಸ್ತು ನಿಸರ್ಗದೊಡನೆ ಮಾನವ ಹೇಗೆ ಬಾಳಬೇಕೆಂಬುದನ್ನು ಕುವೆಂಪು ಕೃತಿಗಳು ಸಾರುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಆರ್.ರೇವಣ್ಣ, ನಾಟಕಮನೆ ಮಹಾಲಿಂಗು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ.ಎಂ. ರವಿಕುಮಾರ್, ಹಿರಿಯ ಪತ್ರಕರ್ತರಾದ ಕೆ.ಜೆ.ಮರಿಯಪ್ಪ ಮತ್ತಿತರರು ಇದ್ದರು.

ನಂತರ ರಂಗ ಕಹಳೆ ಸಂಸ್ಥೆಯಿಂದ ಪ್ರದರ್ಶನಗೊಂಡ ಕುವೆಂಪು ನಾಟಕಗಳನ್ನು ಸಾರ್ವಜನಿಕರು ವೀಕ್ಷಿಸಿದರು.

Get real time updates directly on you device, subscribe now.

Comments are closed.

error: Content is protected !!