ವಿದ್ಯಾವಂತರೆಲ್ಲಾ ವಿವೇಕವಂತರಲ್ಲ: ಬರಗೂರು

ಶಿಕ್ಷಣ ಜನರಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಸುವಂತಿರಲಿ

80

Get real time updates directly on you device, subscribe now.


ತುಮಕೂರು: ಜನರಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಸುವುದು ಶಿಕ್ಷಣದ ಗುರಿಯಾಗಬೇಕು ಎಂದು ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದ್ದಾರೆ.

ನಗರದ ಶ್ರೀಸಿದ್ದಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿ ಕರ್ನಾಟಕ ರಾಜ್ಯವೈಜ್ಞಾನಿಕ ಸಂಶೋಧನಾ ಪರಿಷತ್ ಆಯೋಜಿಸಿದ್ದ ರಾಜ್ಯಮಟ್ಟದ 2ನೇ ವೈಜ್ಞಾನಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಇಂದು ಅತಿ ಹೆಚ್ಚು ವಿದ್ಯಾವಂತರೇ ಮೂಢನಂಬಿಕೆ ಪ್ರತಿಪಾದಿಸುತಿದ್ದು. ಹಾಗಾಗಿಯೇ ವಿದ್ಯಾವಂತರೆಲ್ಲಾ ವಿವೇಕವಂತರಲ್ಲ. ಅವಿದ್ಯಾವಂತರಲ್ಲ ಅವಿವೇಕಿಗಳಲ್ಲ ಎಂಬ ಮಾತು ಪ್ರಚಲಿತದಲ್ಲಿದೆ ಎಂದರು.

ವೈಜ್ಞಾನಿಕ ಮನೋಧರ್ಮ ಎಂಬುದು ಮನುಷ್ಯನಲ್ಲಿ ಮಾನವೀಯತೆ, ಆಂತಃಕರಣ, ಸಮಾನತೆ, ಸಹಬಾಳ್ವೆ ಪ್ರತಿನಿಧಿಸುತ್ತದೆ. ಅದು ಏಕಮುಖಿಯಲ್ಲ, ಅದಕ್ಕೆ ಬಹುಮುಖಿ ಆಯಾಮವಿದೆ. ಆಸ್ಥಿಕನಾಗಿದ್ದು, ನಾಸ್ಥಿಕನ ಅಭಿಪ್ರಾಯ ಗೌರವಿಸುವ, ನಾಸ್ಥಿಕನಾಗಿದ್ದು ಅಸ್ಥಿಕನ ಅಭಿಪ್ರಾಯ ಕೇಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಇದನ್ನ ಬುದ್ದ, ಬಸವ, ಅಂಬೇಡ್ಕರ್, ಕುವೆಂಪು, ಗಾಂಧಿ, ಸ್ವಾಮಿ ವಿವೇಕಾನಂದ ಮಾಡಿ ತೋರಿಸಿದ್ದಾರೆ. ಆದರೆ ಇಂದು ಅಸಮಾನತೆ, ಅಮಾನಿಯತೆ, ಅವಾಸ್ತವ ಅಂಶಗಳೇ ಹೆಚ್ಚು ಪ್ರಜ್ವಲಿಸುತ್ತಿವೆ ಸ್ವಾತಂತ್ರ ಆಲೋಚನೆಯನ್ನು ಜನರು ಮರೆತಿರುವಂತೆ ಕಂಡು ಬರುತ್ತಿದೆ. ಇವುಗಳ ಕುರಿತು ಪೂರ್ವಾಗ್ರಹ ರಹಿತ ಸಂವಾದ ಅಗತ್ಯವಿದೆ ಎಂದು ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಇಂದು ದೇವರು, ಧರ್ಮದ ಹೆಸರಿನಲ್ಲಿ ಹೆಚ್ಚು ಜನರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ. ಇಂದು ಮನುಷ್ಯನಿಗಿಂತ ಹೆಚ್ಚು ಶೋಷಣೆಗೆ ಒಳಗಾಗುತ್ತಿರುವುದು ದೇವರುಗಳು, ಸಾಮಾಜಿಕ ಕೇಡು ಮತ್ತು ಮೌಢ್ಯ ವಿರೋಧಿಸುವ ಕೆಲಸವನ್ನು ವೈಜ್ಞಾನಿಕ ಮನೋಧರ್ಮ ಉಳ್ಳವರು ಮಾಡಬೇಕಿದೆ. ಮನಃಸಾಕ್ಷಿ, ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳದಿರುವುದೇ ನಿಜವಾದ ವೈಜಾನಿಕ ಮನೋಧರ್ಮ ಎಂದು ಬರಗೂರು ರಾಮಚಂದ್ರಪ್ಪ ನುಡಿದರು.

ಶಿವಮೊಗ್ಗದಲ್ಲಿ ನಡೆದ 1ನೇ ವೈಜ್ಞಾನಿಕ ಸಮ್ಮೇಳನದ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್, 2ನೇ ವೈಜ್ಞಾನಿಕ ಸಮ್ಮೇಳನದ ಅಧ್ಯಕ್ಷರಾಗಿರುವ ಜಸ್ಟಿಸ್ ಹೆಚ್.ಎನ್.ನಾಗಮೋಹನ್ ದಾಸ್ ಅವರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಅವರು, ವೈಜ್ಞಾನಿಕ ಮನೋಧರ್ಮವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ. ಇದರ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳೆವಣಿಗೆಯ ದುಷ್ಪರಿಣಾಮಗಳ ಬಗ್ಗೆ ಅರ್ಥ ಮಾಡಿಕೊಂಡು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ. ಕೃತಕ ಬುದ್ಧಿಮತ್ತೆಯಿಂದ ಇಂದು ನಮ್ಮ ಕೈಯಲ್ಲಿರುವ ಮೊಬೈಲ್ ಉತ್ಪಾದಕ ಕಂಪನಿಗಳಿಗೆ ಗ್ರಾಹಕರನ್ನು ಹುಡುಕಿಕೊಡುವ ಸಾಧನಗಳಾಗಿ ಪರಿವರ್ತನೆಯಾಗಿವೆ. ನಮಗೆ ಗೊತ್ತಿಲ್ಲದೆ ನಮ್ಮ ಮಾಹಿತಿ ಕಳುವಾಗುತ್ತಿದೆ. ಈ ಬಗ್ಗೆ ನಾವುಗಳು ಎಚ್ಚರಿಕೆ ವಹಿಸಬೇಕಾಗಿದೆ ಎಂದರು.

ರಾಜ್ಯಮಟ್ಟದ 2ನೇ ವೈಜ್ಞಾನಿಕ ಸಮ್ಮೇಳನದ ಅಧ್ಯಕ್ಷ ಜಸ್ಟಿಸ್ ನಾಗಮೋಹನ್ದಾಸ್ ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರದ ರಕ್ಷಣೆ ಇಲ್ಲದೆ ವೈಜ್ಞಾನಿಕ ಮನೋಧರ್ಮ ಬೆಳೆಸಲು ಸಾಧ್ಯವಿಲ್ಲ. ಟೀಕಿಸುವವರನ್ನು, ವಿರ್ಮಶೆ ಮಾಡುವವರನ್ನು ಪ್ರಶ್ನಿಸುವವರನ್ನು ಅಪರಾಧಿಗಳಂತೆ ಬಿಂಬಿಸಿ ಜೈಲಿಗೆ ಕಳುಹಿಸಲಾಗುತ್ತಿದೆ. ಪೇಗಾಸಿಸ್ ಎಂಬ ತಂತ್ರಜ್ಞಾನದ ಮೂಲಕ ನಮ್ಮ ಖಾಸಗಿತನ ಕದಿಯಲಾಗುತ್ತಿದೆ. ಪ್ರಶ್ನಿಸುವವರ ಮೊಬೈಲ್ಗಳಿಗೆ ದೇಶ ವಿರೋಧಿ ದಾಖಲೆಗಳನ್ನು ತುಂಬಿ ಅಪರಾಧಿಗಳನ್ನಾಗಿಸಿ ಕಾರಾಗೃಹದಲ್ಲಿ ಕೊಳೆಯುವಂತೆ ಮಾಡಲಾಗುತ್ತಿದೆ. ಇದಕ್ಕೆ ಫಾದರ್ ಸ್ಟಾನ್ ಸ್ವಾಮಿ ಪ್ರಕರಣವೇ ಜೀವಂತ ಸಾಕ್ಷಿ. ಅಭಿವ್ಯಕ್ತಿ ಸ್ವಾತಂತ್ರ ರಕ್ಷಸಿಕೊಳ್ಳದ ಹೊರತು ಸಂವಿಧಾನದ ಆಶಯಗಳು ಈಡೇರಲು ಸಾಧ್ಯವಿಲ್ಲ. ನಂಬಿಕೆ, ಮೂಢನಂಬಿಕೆಗಳ ನಡುವೆ ತದ್ವರುದ್ಧ ಅಂಶಗಳಿದ್ದರೂ ಕೊಲೆಯನ್ನೇ ನಂಬಿಕೆ ಎಂಬಂತೆ ಬಿಂಬಿಸುವ ಪ್ರಕ್ರಿಯೆ ನಡೆಯುತ್ತಿದೆ. ಇಂದು ಮೌಢ್ಯಕ್ಕೆ ಹೆಚ್ಚು ಬಲಿಯಾಗುತ್ತಿರುವುದು ಮಹಿಳೆಯರು, ಮೂಢನಂಬಿಕೆ ವಿರುದ್ಧ ಹೋರಾಟ ನಡೆಸುವಂತಹ ವೈಜ್ಞಾರಿಕ ಮನೋಧರ್ಮವನ್ನು ಈ ವೈಜ್ಞಾನಿಕ ಸಮ್ಮೇಳನ ಹುಟ್ಟು ಹಾಕಿ ಆ ಮೂಲಕ ನೆಮ್ಮದಿ, ಶಾಂತಿಯ ಸಮ ಸಮಾಜ ನಿರ್ಮಾಣಕ್ಕೆ ದಾರಿ ಮಾಡಿಕೊಡಲಿ ಎಂಬ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ರಾಮಕೃಷ್ಣ ಮಠದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಯಶಸ್ಸನ್ನು ಗಳಿಸಲು ಅನ್ಯ ಮಾರ್ಗಗಳಿವೆ. ಆದರೆ ಬದುಕನ್ನು ಮೌಲ್ಯಯುತ ಗೊಳಿಸಿಕೊಳ್ಳಲು ಕಳ್ಳ ದಾರಿಗಳಿಲ್ಲ. ಕೇವಲ ಫಲಿತಾಂಶದ ಆಧಾರ ಮೇಲಿರುವ ಇಂದಿನ ಶಿಕ್ಷಣ ಪದ್ಧತಿಯಿಂದ ಮಕ್ಕಳಲ್ಲಿ ಮಾನವೀಯತೆ, ಅಂತಃಕರಣ ಕಡಿಮೆಯಾಗುತ್ತಿದ್ದು, ನೈತಿಕ ಪ್ರಜ್ಞೆ ಮರೆಯಾಗುತ್ತಿದೆ. ಮೂರ್ತಿ ಪೂಜೆ ಆಧ್ಯಾತ್ಮಿಕತೆಯ ಆರಂಭವೇ ಹೊರತು ಅದೇ ಅಂತಿಮವಲ್ಲ. ಹಾಗಾಗಿ ಪ್ರತಿಯೊಬ್ಬರಲ್ಲಿಯೂ ಒಳ್ಳೆಯ ಮತ್ತು ಕೆಟ್ಟ ಗುಣಗಳು ಇದ್ದೇ ಇರುತ್ತವೆ. ಒಳ್ಳೆಯ ಗುಣಗಳನ್ನು ಉದ್ದೀಪನಗೊಳಿಸುವ ಕೆಲಸ ಆಗಬೇಕೆಂದರು.

ಕಲ್ಪಸಿರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಪತ್ರಕರ್ತ ಎಸ್.ನಾಗಣ್ಣ, ವೈಜ್ಞಾನಿಕ ಮನೋಧರ್ಮ ಎಂಬುದು ಇಂದು ಅತ್ಯಂತ ಪ್ರಸ್ತುತವಾಗಿದ್ದು, ಮೋಸ ಹೋಗುವವರನ್ನು ರಕ್ಷಿಸಲು ಇದೊಂದು ಅಸ್ತ್ರವಾಗಬೇಕು ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ ಡಾ.ಜಿ.ಎಸ್.ಶ್ರೀಧರ್, ಕ.ರಾ.ವೈ.ಸಂ.ಪರಿಷತ್ತಿನ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್, ಚಿಂತಕ ಕೆ.ದೊರೈರಾಜು, ರಾ.ವೈ.ಸಂ. ಪರಿಷತ್ತಿನ ತುಮಕೂರು ಜಿಲ್ಲಾಧ್ಯಕ್ಷ ಡಾ.ಸಿ.ಎಸ್.ಮೋಹನ್ ಕುಮಾರ್, ಡಾ.ಕೆ.ಜಿ.ರಾವ್, ಹಂಪಿನಕೆರೆ ರಾಜೇಂದ್ರ, ಎಸ್.ರೇಣುಕಾ ಪ್ರಸಾದ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!