ಕಾಂಗ್ರೆಸ್ ಅಧಿಕಾರಕ್ಕಾಗಿ ಹುಟ್ಟಿಕೊಂಡ ಪಕ್ಷವಲ್ಲ: ಚಂದ್ರಶೇಖರ್ ಗೌಡ

83

Get real time updates directly on you device, subscribe now.


ತುಮಕೂರು: ಭಾರತದ ಸ್ವಾತಂತ್ರ ಆಂದೋಲನಕ್ಕೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ಏ.ಓ.ಹ್ಯೂಮ್ ಅವರಿಂದ 1885ರಲ್ಲಿ ಆರಂಭಗೊಂಡ ಕಾಂಗ್ರೆಸ್ ಪಕ್ಷ ದೇಶದ ಅಭಿವೃದ್ಧಿಯಲ್ಲಿ ಹಲವಾರು ಮೈಲಿಗಲ್ಲು ದಾಟಿ ದೇಶಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, 138 ವರ್ಷಗಳ ಹಿಂದೆ ಸ್ಥಾಪನೆಯಾದ ಪಕ್ಷ ಇಂದಿಗೂ ಜನಮಾನಸದಲ್ಲಿ ಉಳಿದಿದೆ. ಇದು ಅಧಿಕಾರಕ್ಕಾಗಿ ಹುಟ್ಟಿಕೊಂಡ ಪಕ್ಷವಲ್ಲ. ಸ್ವಾತಂತ್ರಕ್ಕಾಗಿ ಹುಟ್ಟಿ ಅದನ್ನು ತಂದುಕೊಡುವ ಮೂಲಕ ಜನರಿಗೆ ಆತ್ಮಸ್ಥೈರ್ಯ ತುಂಬಿದೆ. ದೇಶಕ್ಕೆ ಸ್ವಾತಂತ್ರ ಬಂದಾಗ ಒಂದು ಗುಂಡು ಸೂಜಿಗೆ ಪರದೇಶದ ಕಡೆಗೆ ನೋಡಬೇಕಾದ ಸ್ಥಿತಿಯಿದ್ದಾಗ ಪಂಚವಾರ್ಷಿಕ ಯೋಜನೆಗಳ ಮೂಲಕ ಇಂದು ದೇಶದ ಜನತೆ ಎಲ್ಲಾ ವಿಭಾಗದಲ್ಲಿಯೂ ಸ್ವಾವಲಂಬಿಗಳಾಗಿ ಬದುಕುತಿದ್ದಾರೆ. ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿಯಂತಹ ಮಹಾನ್ ನಾಯಕರ ತ್ಯಾಗ ಬಲಿದಾನವನ್ನು ಪಕ್ಷಕ್ಕೆ ಬಲ ತುಂಬಿವೆ. ಅವರ ಆದರ್ಶ ಮೈಗೂಡಿಸಿಕೊಳ್ಳುವ ಮೂಲಕ ನಾವೆಲ್ಲರೂ ಮತ್ತಷ್ಟು ಬಲಿಷ್ಠವಾಗಿ ಪಕ್ಷ ಕಣ್ಣೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಮಾಜಿ ಶಾಸಕ ಎಸ್.ಷಫಿ ಅಹಮದ್ ಮಾತನಾಡಿ, 550ಕ್ಕೂ ಹೆಚ್ಚು ಸಂಸ್ಥಾನಗಳಾಗಿ ಒಡೆದು ಹೋಗಿದ್ದ ದೇಶವನ್ನು ಬ್ರಿಟಿಷರು ವಶಪಡಿಸಿಕೊಂಡು ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದ ವೇಳೆ ದೇಶದ ಪ್ರಾಕೃತಿಕ ಸಂಪತ್ತಿನ ಜೊತೆಗೆ ಜನತೆಗೆ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ವಾತಂತ್ರ ತಂದು ಕೊಡಬೇಕೆಂಬ ಮಹಾತ್ವಾಕಾಂಕ್ಷೆಯಿಂದ ಹುಟ್ಟಿಕೊಂಡ ಕಾಂಗ್ರೆಸ್ ಪಕ್ಷ, ತನ್ನ ಹುಟ್ಟಿನ ಉದ್ದೇಶ ಈಡೇರಿಸಿದಲ್ಲದೆ ಜನತೆಗೆ ಒಂದು ಭದ್ರ ಆಡಳಿತ ನೀಡಿ ವಿಶ್ವದಲ್ಲಿಯೇ ಗುರುತಿಸಿಕೊಳ್ಳುವಂತೆ ಮಾಡಿದೆ. ಹಾಗಾಗಿ ನಾವೆಲ್ಲರೂ ಪಕ್ಷದ ಶಿಸ್ತಿನ ಸಿಪಾಯಿಗಳಂತೆ ಒಗ್ಗೂಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಬೇಕಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಚಮಾರಯ್ಯ ಮಾತನಾಡಿ, ಕಾಂಗ್ರೆಸ್ ಪಕ್ಷ ಹುಟ್ಟಿ ಇಂದಿಗೆ 137 ವರ್ಷ ತುಂಬಿದೆ. ಸ್ವಾತಂತ್ರದ ಉದ್ದೇಶಕ್ಕಾಗಿ ಹುಟ್ಟಿಕೊಂಡು ಈ ಸಂಸ್ಥೆ ಇಂದಿಗೂ ಜನರ ಮಧ್ಯೆ ಇದೆ ಎಂದರೆ ಅದರ ಸಾಮಾಜಿಕ ಕಳಕಳಿ ಏನು ಎಂಬುದನ್ನು ನಾವೆಲ್ಲರು ಮನಗಾಣಬೇಕಿದೆ. ಕಾಂಗ್ರೆಸ್ ಪಕ್ಷದ ಉದಯದ ಬಗ್ಗೆ ಸರಿಯಾದ ತಿಳುವಳಿಕೆಯಿಲ್ಲದ ಸಿ.ಟಿ.ರವಿ ಯಂತಹ ಕೆಲ ಬಿಜೆಪಿ ನಾಯಕರು ತಮ್ಮ ಹರುಕು ಬಾಯಿ ಮೂಲಕ ಸುಳ್ಳುಗಳನ್ನು ಹೇಳುತಿದ್ದಾರೆ. ವಿದೇಶಿ ವ್ಯಕ್ತಿಯೊಬ್ಬರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಪಕ್ಷಕ್ಕೆ ಇಂದು ನಮ್ಮದೆ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿದ್ದು, ಅವರ ಹೇಳಿಕೆಗಳನ್ನು ತಿರುಚಿ ತೇಜೋವಧೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಧರ್ಮ, ಜಾತಿ, ಕೋಮುಗಳ ನಡುವೆ ಒಡಕು ಉಂಟು ಮಾಡಿ ಅಧಿಕಾರ ಹಿಡಿಯುತಿದ್ದಾರೆ. ಈ ಬಾರಿ ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ್ ಮಾತನಾಡಿ, ದೇಶಭಕ್ತಿ, ರಾಷ್ಟ್ರದ ಐಕ್ಯತೆ, ಭದ್ರತೆ ಕುರಿತು ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಂದ ಗೂಡ್ಸೆಗೆ ದೇವಾಲಯ ಕಟ್ಟುವ, ಪೂಜಿಸುವ ಬಿಜೆಪಿಯಿಂದ ಕಲಿಯಬೇಕಿಲ್ಲ. ನಮಗೆ ಈ ದೇಶದ ರಕ್ಷಣೆ ಹೇಗೆ ಮಾಡಬೇಕು ಎಂಬುದನ್ನು ಪಕ್ಷದ ಹಿರಿಯ ಮುಖಂಡರು ಕಲಿಸಿಕೊಟ್ಟಿದ್ದಾರೆ. ನೂತನ ಅಧ್ಯಕ್ಷ ಚಂದ್ರಶೇಖರಗೌಡ ಅವರು ಜಿಲ್ಲಾ ಕಾಂಗ್ರೆಸ್ ಕಚೇರಿ ಜೆಡಿಎಸ್ ಪಕ್ಷದಿಂದ ವಾಪಸ್ ಪಡೆಯುವ ನಿಟ್ಟಿನಲ್ಲಿ ಕಾನೂನು ಹೋರಾಟ ಮುಂದುವೆಸಲಿ. ಇದಕ್ಕೆ ನಮ್ಮೆಲ್ಲರ ಬೆಂಬಲ ಇದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ರೆಡ್ಡಿ ಚಿನ್ನಯಲ್ಲಪ್ಪ, ಹೆಚ್.ಸಿ.ಹನುಮಂತಯ್ಯ, ಶಿವಾಜಿ, ಲಿಂಗರಾಜು, ಮರಿಚನ್ನಮ್ಮ, ಅಫ್ತಾಬ್ ಅಹಮದ್, ಲೋಕೇಶ್, ನರಸೀಯಪ್ಪ, ನರಸಿಂಹಯ್ಯ, ಸುಜಾತ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!