ವೈದ್ಯರು ಜನಮುಖಿ ಸೇವೆ ಮಾಡಲಿ: ಪರಮೇಶ್ವರ್

170

Get real time updates directly on you device, subscribe now.


ತುಮಕೂರು: ರೋಗಿಗಳ ಸೇವೆಯಲ್ಲಿ ಸಂತೋಷವನ್ನು ಕಾಣುವುದು ವೈದ್ಯರಿಗೆ ರಕ್ತಗತವಾಗಬೇಕು. ವೈದ್ಯರು ಹಣದ ಆಮಿಷಕ್ಕೆ ಒಳಗಾಗದೆ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕತೆಯಿಂದ ಜನಮುಖಿ ಸೇವೆ ಮಾಡಬೆಕೆಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಕರೆ ನೀಡಿದರು.

ನಗರದ ಅಗಳಕೋಟೆಯಲ್ಲಿ ಶಿಕ್ಷಣ ಶಿಲ್ಪಿ ಡಾ.ಎಚ್.ಎಂ.ಗಂಗಾಧರಯ್ಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಶ್ರೀಸಿದ್ಧಾರ್ಥ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ 2022- 23ನೇ ಶೈಕ್ಷಣಿಕ ಸಾಲಿನ ಶೈಕ್ಷಣಿಕ ಚಟುವಟಿಕೆ ಮತ್ತು ಅಗಳಕೋಟೆ ಹಾಗೂ ಟಿ.ಬೇಗೂರಿನ ವೈದ್ಯಕೀಯ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ವೈದ್ಯರಿಗೆ ತುಂಬಾ ಅನಿವಾರ್ಯ, ಪ್ರತಿ ದಿನದ ಕಲಿಕೆ ಅವರಿಗೆ ತುಂಬಾ ಮಹತ್ವದ್ದು, ಹೀಗಾಗಿ ವೈದ್ಯರು ನಿರಂತರ ಅಧ್ಯಯನ ಮಾಡಿದರೆ ಮಾತ್ರ ಹೊಸತನಕ್ಕೆ ಹೊಂದಿಕೊಳ್ಳಲು ಸಾಧ್ಯ. ವೈದ್ಯರನ್ನು ಯಾರೂ ಅನುಮಾನದಿಂದ ನೋಡಬಾರದು. ಇದರಿಂದ ವೃತ್ತಿಗೆ ಅಪಮಾನವಾಗುತ್ತದೆ. ಹೀಗಾಗಿ ಎಲ್ಲರೂ ಸಮರ್ಪಣೆ ಮಾಡಿಕೊಂಡು ವೈದ್ಯ ವೃತ್ತಿ ಮಾಡಬೇಕು ಎಂದರು.

ವೈದ್ಯಕೀಯ ವೃತ್ತಿಯನ್ನು ಸಮರ್ಪಣಾ ಮನೋಭಾವದಿಂದ ಮಾಡಬೇಕು. ವೃತ್ತಿ ಪರತೆ ಹಾಗೂ ಕಾರ್ಯಕ್ಷಮತೆ ವೈದ್ಯರ ಪ್ರತಿಕ್ಷಣದ ಜವಾಬ್ದಾರಿಯಾಗಬೇಕು. ಹಣದಿಂದ ವೈದ್ಯರ ಸೇವೆ ಅಳೆಯಲು ಸಾಧ್ಯವಿಲ್ಲ. ವೈದ್ಯರು ವೃತ್ತಿ ಪರರಾಗಿದ್ದಾಗ ಸಮಾಜ ಅವರನ್ನು ಗುರುತಿಸಿ ಗೌರವಿಸುತ್ತದೆ. ವೈದ್ಯರು ಕೇವಲ ಔಷಧಿ ಮಾತ್ರ ಕೊಡುವುದಿಲ್ಲ. ಬದಲಾಗಿ ರೋಗಿಯನ್ನು ಅಂತಃಕರಣದಿಂದ ಆರೈಕೆ ಮಾಡುತ್ತಾರೆ ಎಂದು ಹೇಳಿದರು.

ಶಿಕ್ಷಣ ಭೀಷ್ಮ ಡಾ.ಎಚ್.ಎಂ.ಗಂಗಾಧರಯ್ಯ ಅವರಿಂದ ಪ್ರಾರಂಭವಾದ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಖಾಸಗಿ ರಂಗದಲ್ಲಿದ್ದರು ಬಡವರಿಗಾಗಿಯೇ ಉತ್ತಮ ಸೇವೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಆಧುನಿಕ ಸಾಧನ ಸಲಕರಣೆಗಳ ಬಳಕೆ, ಸುಸಜ್ಜಿತ ಆವರಣ ಮತ್ತು ನುರಿತ ವೈದ್ಯರನ್ನು ಒಳಗೊಂಡ ಉತ್ತಮ ಸೇವೆಯನ್ನು ಸರ್ಕಾರದ ಆರೋಗ್ಯ ಸವಲತ್ತು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತದಲ್ಲಿಯೇ ಅತ್ಯಂತ ದೊಡ್ಡ ಮಟ್ಟದಲ್ಲಿ ಉತ್ತಮ ಸೇವೆ ನೀಡುವಲ್ಲಿ ಸಂಸ್ಥೆಯು ಪ್ರಮುಖ ಪಾತ್ರ ವಹಿಸಲಿದೆ ಎಂದರು.

ಬೆಂಗಳೂರಿನ ನಿಮ್ಹಾನ್ಸ್ ನಿರ್ದೇಶಕಿ ಡಾ.ಪ್ರತೀಮಾಮೂರ್ತಿ ಮಾತನಾಡಿ, ವೈದ್ಯೊ ನಾರಾಯಣ ಹರಿ ಎನ್ನುವ ಮಾನವೀಯತೆ ಗುಣ ಧರ್ಮ ವೈದ್ಯರ ಮಂತ್ರವಾಗಬೇಕು. ರೋಗಿಗಳನ್ನು ಉತ್ತಮ ರೀತಿಯಲ್ಲಿ ಉಪಚರಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ವೃತ್ತಿ ಬಗ್ಗೆ ಹೆಮ್ಮೆ ಗೌರವ ಇರಬೇಕು. ಆಗ ಮಾತ್ರ ರೋಗಿಗಳನ್ನು ಗುಣಪಡಿಸಲು ಸಾಧ್ಯ. ವೈದ್ಯಕೀಯ ಕೋರ್ಸ್ ಅಧ್ಯಯನದ ಅವಧಿಯಲ್ಲಿನ ಶ್ರಮ ನಾಳೆಯ ಭವಿಷ್ಯಕ್ಕೆ ಪೂರಕವಾಗಲಿದೆ ಎಂದರು.

ಪ್ರಾಣ ನೀಡುವವ ದೇವರಾದರೆ ಅದನ್ನು ರಕ್ಷಿಸುವನು ವೈದ್ಯನಾಗಿದ್ದಾನೆ. ತಮ್ಮ ಪ್ರಾಣವನ್ನು ಲೆಕ್ಕಿಸದೆ ರೋಗಿಗಳ ಸೇವೆಗಯ್ಯುವ ವೈದ್ಯರ ಸೇವೆ ಅನುಕರೀಣಯವಾಗಿದೆ. ಬಹು ಅಮೂಲ್ಯವಾದ ಮಾನವ ಜನ್ಮವನ್ನು ಹಲವಾರು ರೋಗ- ರುಜಿನ ಮತ್ತು ಅಪಾಯದಿಂದ ಉಳಿಸಿಕೊಡುವ ವೈದ್ಯರ ಪ್ರಯತ್ನ ಪದಗಳಿಗೆ ನಿಲುಕಲಾರದು. ರೋಗಿಯನ್ನು ಉಪಚರಿಸಲು ಹೋಗಿ ವೈದ್ಯರೇ ರೋಗಕ್ಕೆ ತುತ್ತಾದ ಅನೇಕ ಘಟನೆಗಳಿವೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಸುಶೀಲ್ಚಂದ್ರ ಮಹಾಪಾತ್ರ ಅವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಸಾಹೇ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಪಿ.ಬಾಲಕೃಷ್ಣ ಶೆಟ್ಟಿ, ಸಾಹೇ ರಿಜಿಸ್ಟ್ರಾರ್ ಡಾ.ಎಂ.ಝಡ್.ಕುರಿಯನ್, ಕಾಲೇಜಿನ ಉಪ ಪ್ರಾಂಶುಪಾಲ ಡಾ.ಪ್ರಭಾಕರ್, ದಂತ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ. ಪ್ರವೀಣ್ ಕುಡುವ, ಟಿ.ಬೇಗೂರು ವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಶ್ರೀನಿವಾಸ್ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!