ತುರುವೇಕೆರೆಯಲ್ಲಿ ಆದಿ ಜಾಂಭವ ಸಮ್ಮೇಳನ ಜ.2ಕ್ಕೆ

106

Get real time updates directly on you device, subscribe now.


ತುಮಕೂರು: ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ನಡೆಯುತ್ತಿರುವ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಹೋರಾಟಕ್ಕೆ ಇತ್ತೀಚಿನ ದಿನಗಳಲ್ಲಿ ಮನ್ನಣೆ ದೊರೆಯದಿರುವ ಹಿನ್ನೆಲೆಯಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ 2023ರ ಜನವರಿ 02ರ ಸೋಮವಾರ ತುರುವೇಕೆರೆ ಪಟ್ಟಣದ ಗುರುಭವನದ ಆವರಣದಲ್ಲಿ ಆದಿ ಜಾಂಭವ ಸಮ್ಮೇಳನ ಆಯೋಜಿಸಲಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1998ರಲ್ಲಿ ತುರುವೇಕೆರೆ ತಾಲೂಕಿನ ಮೊದಲನೇ ಆದಿ ಜಾಂಭವ ಸಮಾವೇಶ ಏರ್ಪಡಿಸಲಾಗಿತ್ತು. ಇದರ ಬೆಳ್ಳಿ ಹಬ್ಬವೆಂಬಂತೆ ಜನವರಿ 02 ರಂದು ತುರುವೇಕೆರೆ ತಾಲೂಕು ಆದಿಜಾಂಭವ ಸಮ್ಮೇಳನ ಹಾಗೂ ಸದಾಶಿವ ಆಯೋಗದ ವರದಿ ಜಾರಿಗಾಗಿ ಒತ್ತಾಯಿಸಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದ ಸಾನಿಧ್ಯವನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ಷಡಾಕ್ಷರಿ ಸ್ವಾಮೀಜಿ, ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುರುವೇಕೆರೆ ಶಾಸಕ ಮಸಾಲ ಜಯರಾಮ್ ವಹಿಸಲಿದ್ದಾರೆ. ಸಮಾವೇಶವನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ವಹಿಸಿದ್ದಾರೆ.

ಪ್ರಾಸ್ತಾವಿಕ ನುಡಿಗಳನ್ನು ಆದಿಜಾಂಭವ ಸಮಾಜದ ಅಧ್ಯಕ್ಷ ವಿ.ಟಿ.ವೆಂಕಟರಾಮಯ್ಯ ಅವರು ನುಡಿಯಲಿದ್ದಾರೆ. ಮಂತ್ರಿಗಳಾದ ಗೋವಿಂದ ಎಂ.ಕಾರಜೋಳ, ಜೆ.ಸಿ.ಮಾಧುಸ್ವಾಮಿ, ಕೋಟಾ ಶ್ರೀನಿವಾಸ ಪೂಜಾರಿ, ಸಂಸದರಾದ ಜಿ.ಎಸ್.ಬಸವರಾಜು, ಜಗ್ಗೇಶ್, ಕೆ.ಹೆಚ್.ಮುನಿಯಪ್ಪ, ಡಾ.ಎಲ್.ಹನುಮಂತಯ್ಯ, ಮಾಜಿ ಸಚಿವ ಹೆಚ್.ಆಂಜನೇಯ, ದುರ್ಯೋಧನ ಐಹೊಳೆ, ಪ್ರೊ.ಎನ್.ಲಿಂಗಣ್ಣ, ಶಾಸಕಿ ರೂಪ ಶಶಿಧರ್, ಮಾಜಿ ಮಂತ್ರಿ ಎಂ.ಶಿವಣ್ಣ, ಮುದ್ದಹನುಮೇಗೌಡ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಆದಿ ಜಾಂಭವ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ಸಿಗೊಳಿಸುವಂತೆ ವೈ.ಹೆಚ್.ಹುಚ್ಚಯ್ಯ ಮನವಿ ಮಾಡಿದರು.

ಸಮಾವೇಶದಲ್ಲಿ ಕಳೆದ 11 ವರ್ಷಗಳಿಂದ ಸರಕಾರದ ಮುಂದೆ ದೂಳು ಹಿಡಿಯುತ್ತಾ ಬಿದ್ದಿರುವ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಸರಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳುವುದಲ್ಲದೆ ಆದಿ ಜಾಂಭವ ಸಮಾಜದ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿ ಕುರಿತಂತೆ ಚರ್ಚೆಗಳು ನಡೆಯಲಿವೆ ಎಂದು ವೈ.ಹೆಚ್.ಹುಚ್ಚಯ್ಯ ನುಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಗಂಗಹನುಮಯ್ಯ, ಸಮ್ಮೇಳನ ಸ್ವಾಗತ ಸಮಿತಿ ವಿ.ಟಿ.ವೆಂಕಟರಾಯ್ಯ, ಎನ್.ಬಿ.ರಾಮಕೃಷ್ಣಯ್ಯ, ಕುಮಾರ್.ಎಂ, ಕೃಷ್ಣಮೂರ್ತಿ, ವಿಜಯಕುಮಾರ್, ಅಲ್ಲಪ್ಪ, ಸಿ.ಎ.ಶಿವಪ್ಪ, ರವೀಂದ್ರ, ಗಂಗಾಧರ್, ಟಿ.ಹಚ್.ಗುರುದತ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!