ತುರುವೇಕೆರೆ: ಮನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಕೂಲಿ ಮತ್ತು ಸಾಮಗ್ರಿ ಅನುಪಾತವನ್ನು ಪಾಲಿಸದ ತಾಲೂಕಿನ ಮಾದಿಹಳ್ಳಿ ಗ್ರಾಪಂ ಪ್ರಭಾರ ಪಿಡಿಓ ಸೋಮಶೇಖರ್ ಹಾಗೂ ಆನೇಕೆರೆ ಗ್ರಾಪಂ ಪ್ರಭಾರ ಪಿಡಿಓ ಎಂ.ಎಲ್.ಚಂದ್ರಶೇಖರ್ ಅವರನ್ನು ಅಮಾನತುಗೊಳಿಸಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ವಿದ್ಯಾಕುಮಾರಿ ಆದೇಶಿಸಿದ್ದಾರೆ.
ಕೇಂದ್ರ ಸರಕಾರ ಮಹತ್ವಾಕಾಂಕ್ಷೆಯ ಮನರೇಗಾ ಕಾಮಗಾರಿ ನಿರ್ವಹಿಸುವ ವೇಳೆ 60:40 ಅನುಪಾತ ಕಾಯ್ದುಕೊಳ್ಳುವಂತೆ ಸ್ಪಷ್ಟ ನಿರ್ದೇಶನವಿದೆ. ಅದರೂ ಸಹ ಆನೇಕೆರೆ ಪಂಚಾಯಿತಿ ಕೂಲಿ ಮತ್ತು ಸಾಮಗ್ರಿ ಬಿಲ್ ಅನುಪಾತವು ಕ್ರಮವಾಗಿ ಶೇ.15.92 ಹಾಗೂ ಶೇ.84.08 ಹಾಗೂ ಮಾದಿಹಳ್ಳಿ ಪಂಚಾಯಿತಿಯ ಕೂಲಿ ಮತ್ತು ಸಾಮಗ್ರಿ ಬಿಲ್ ಕ್ರಮವಾಗಿ ಶೇ.20.21 ಮತ್ತು ಶೇ.79.79 ಇರುವುದು ಕಂಡು ಬಂದಿರುವುದಾಗಿ ಇಬ್ಬರು ಪಿಡಿಓಗಳನ್ನು ಅಮಾನತುಗೊಳಿಸಿ ಆದೇಶಿಸಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸರಕಾರದ ನಿರ್ದೇಶಿಸಿರುವ ಅನುಪಾತವನ್ನು ಪಾಲಿಸದೇ ಇರುವುದರಿಂದ ಸಾಮಗ್ರಿ ಬಿಲ್ ಹಾಗೂ ಎಫ್ಟಿಓಗಳನ್ನು ಸೃಜಿಸಲು ಸಾಧ್ಯವಾಗದಾಗಿದೆ.
ಸರಕಾರದ ಮಹತ್ವಾಕಾಂಕ್ಷೆಯ ಮನರೇಗಾ ಅನುಷ್ಠಾನಗೊಳಿಸಲು ನಿರ್ಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಆನೇಕೆರೆ ಪ್ರಭಾರ ಪಿಡಿಓ ಚಂದ್ರಶೇಖರ್.ಎಂ.ಎಲ್. ಹಾಗೂ ಮಾದಿಹಳ್ಳಿ ಪ್ರಭಾರ ಪಿಡಿಓ ಸೋಮಶೇಖರ್ ಅವರು ಆರೋಪದ ಸಂಬಂಧಪಟ್ಟ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ಡಿ.28 ರಂದು ಅಮಾನತುಗೊಳಿಸಿ ಆದೇಶಿಸಿದ್ದಾರೆ.
Comments are closed.