ತುಮಕೂರು: ಕನ್ನಡ ಸಾಹಿತ್ಯ ಲೋಕದ ಅಗ್ರಮಾನ್ಯ ಕವಿ, ವಿಶ್ವ ಮಾನವ ಸಂದೇಶ ಸಾರಿದ ಯುಗದ ಕವಿ- ಜಗದ ಕವಿ, ರಸಋಷಿ, ಪ್ರಕೃತಿ ಕವಿ, ನಾಟಕಕಾರ, ಕಾದಂಬರಿಕಾರ, ದಾರ್ಶನಿಕ, ಸಾಮಾಜಿಕ ಚಿಂತಕ ಎಂದು ತುಮಕೂರು ವಿಶ್ವ ವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ನಾಗಭೂಷಣ್ ಬಗ್ಗನಡು ತಿಳಿಸಿದರು.
20ನೇ ಶತಮಾನ ಕಂಡ ಸಾಹಿತ್ಯದ ದೈತ್ಯ ಪ್ರತಿಭೆ ಕುವೆಂಪು ಅವರ ಜನ್ಮ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಗರ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಹಿತ್ಯ ವಲಯವಲ್ಲದೆ ಸಾಮಾಜಿಕ ವಲಯದ ಕಡೆಗೂ ಕುವೆಂಪು ಅವರ ಮನ ತುಡಿಯುತ್ತಿದ್ದುದರಿಂದ ಅಪಾರ ಜನ ಮನ್ನಣೆಗೆ ಪಾತ್ರರಾಗಿದ್ದರು, ತಮ್ಮ ಸಾಹಿತ್ಯ, ಭಾಷಣದ ಮೂಲಕ ಸಮಾಜದಲ್ಲಿದ್ದ ಜಾತಿ, ಲಿಂಗ, ಧರ್ಮ, ಬುಡಕಟ್ಟಿನ ಅಸಮಾನತೆ ಹೋಗಲಾಡಿಸಿ ಸಾಮಾಜಿಕ ಬದಲಾವಣೆಗಾಗಿ ಹೋರಾಡಿದ ಮಹಾನ್ ಸಾಮಾಜಿಕ ಚಿಂತಕರಾಗಿದ್ದರು ಎಂದು ತಿಳಿಸಿದರು.
ಕುವೆಂಪು ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯ, ಅಧ್ಯಯನ ಕೇಂದ್ರ, ನಗರಗಳು, ರಸ್ತೆ ಮಾರ್ಗ ಪ್ರಮುಖ ವೃತ್ತಗಳಿರುವುದು ಅವರ ಮೇಲಿರುವ ಅತಿ ಹೆಚ್ಚು ಪ್ರೀತಿಗೆ ಸಾಕ್ಷಿಯಾಗಿದೆ. ಅವರು ತಮ್ಮ ಜೀವಿತಾವಧಿಯಲ್ಲಿ ಮನುಷ್ಯನನ್ನು ಮನುಷ್ಯನನ್ನಾಗಿ ಕಾಣಬೇಕು. ಆತನ ಜಾತಿ, ಧರ್ಮದಿಂದಲ್ಲ. ಮನುಷ್ಯ ವಿಶ್ವಮಾನವನಾಗಿ ಹುಟ್ಟಿ ಬೆಳೆಯುತ್ತಾ ಅಲ್ಪ ಮಾನವನಾಗುತ್ತಾನೆ. ಆದರೆ ಅಂತರಾತ್ಮದಲ್ಲಿ ಜ್ಞಾನದ ದೀವಿಗೆಯನ್ನು ಬೆಳೆಗಿಸಿ ವಿಶ್ವ ಮಾನವನಾಗಬೇಕು ಎಂದು ಜಗತ್ತಿಗೆ ಸಾರಿದ ಮೇರು ಕವಿ ಎನಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಕುವೆಂಪು ಅವರ ವಿರಚಿತ ನಾಡಗೀತೆಯ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಸಾಲುಗಳನ್ನು ನಾವು ಮರೆಯುವಂತಿಲ್ಲ. ಇಡೀ ವಿಶ್ವದಲ್ಲೇ ಭಾರತದಂತಹ ವೈವಿಧ್ಯತೆಯ ರಾಷ್ಟ್ರ ಮತ್ತೊಂದಿಲ್ಲ. ಹಿಂದೂ, , ಪಾರ್ಸಿ, ಜೈನ, ಬೌದ್ಧ, ಕ್ರಿಶ್ಚಿಯನ್ ಧರ್ಮದವರು ಶಾಂತಿಯಿಂದ ನೆಲೆಸಿರುವ ನಮ್ಮ ದೇಶ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಈ ಸಾಲಿನ ಮೂಲಕ ಹೇಳಿದ್ದಾರೆ. ತಮ್ಮ ಕೃತಿಗಳ ಮೂಲಕ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಚಾತುರ್ವರ್ಣ ವ್ಯವಸ್ಥೆಯ ಮೂಲಕ ಜೀವನ ಪರ್ಯಂತ ಹೋರಾಟ ಮಾಡಿದರಲ್ಲದೆ ಸಮಾಜದಲ್ಲಿ ವೈಚಾರಿಕತೆಯ ಬೀಜ ಬಿತ್ತಿದರು. ನಮ್ಮ ಬದುಕನ್ನು ಆವರಿಸಿಕೊಂಡಿರುವ ಮೌಢ್ಯತೆಯ ಮಾರಿಯನ್ನು ಹೊರದೂಡಬೇಕು. ಮತವೆಂಬ ಮೋಹದ ಜ್ಞಾನಕ್ಕೆ ಸಿಲುಕಬಾರದು. ಇರುವುದೊಂದೇ ಮತ ಅದುವೇ ಮನುಜ ಮತ, ಎಲ್ಲರೂ ಮನುಜ ಮತಕ್ಕೆ ಸೇರಬೇಕೆಂದು ಸಂದೇಶ ನೀಡುವ ಮೂಲಕ ದಾರ್ಶನಿಕರೆನಿಸಿಕೊಂಡಿದ್ದರು ಎಂದರು.
ರಂಗಕಹಳೆ ಮುಖ್ಯಸ್ಥ ಓಹಿಲೇಶ್ ಮಾತನಾಡಿ, ಮಹಾನ್ ನಾಟಕಕಾರ ಕುವೆಂಪು ಅವರ ನಾಟಕಗಳ ಬಗ್ಗೆ ವಿವರಣೆ ನೀಡುತ್ತಾ ಕುವೆಂಪು ಅವರ ನಾಟಕಗಳಲ್ಲಿ ಪ್ರಕೃತಿ, ಆಧ್ಯಾತ್ಮ, ಸಾಮಾಜಿಕ ಸಮಾನತೆ, ವೈಚಾರಿಕತೆ ಕಾಣಬಹುದು, ಪ್ರತಿಯೊಬ್ಬರೂ ಅವರ ನಾಟಕಗಳಲ್ಲಿರುವ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು. ಆದರೆ ನಾವೆಲ್ಲರೂ ಅವರ ವಿಚಾರಗಳ ವಿರುದ್ಧ ಸಾಗುತ್ತಿರುವುದು ವಿಪರ್ಯಾಸ ಎಂದು ವಿಷಾದ ವ್ಯಕ್ತಪಡಿಸಿದರಲ್ಲದೆ ಶಾಲೆಗಳಲ್ಲಿರುವ ಗ್ರಂಥಾಲಯಗಳಲ್ಲಿ ಮಕ್ಕಳ ನಾಟಕ ಪುಸ್ತಕಗಳ ಸಂಗ್ರಹ ಇರಬೇಕು, ಇದರಿಂದ ಮಕ್ಕಳು ಕುವೆಂಪು ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಕುವೆಂಪು ಅವರು ರಚಿಸದಿರುವ ಸಾಹಿತ್ಯವಿಲ್ಲವೆಂದು ಜನಜನಿತವಾಗಿದೆ, ಆದರೆ ಪ್ರವಾಸ ಸಾಹಿತ್ಯ ರಚನೆಗೆ ಸಂಬಂಧಿಸಿದಂತೆ ದಾಖಲೆಗಳು ದೊರೆತಿರುವುದಿಲ್ಲ ಎಂದರಲ್ಲದೆ ಹಳೆಗನ್ನಡದ ಆರ್ಭಟವನ್ನು ಮಹಾಕವಿ ರನ್ನನ ಕಾವ್ಯದಲ್ಲಿ ಕಂಡರೆ ಹೊಸಗನ್ನಡದ ಸೌಂದರ್ಯವನ್ನು ಕುವೆಂಪು ಅವರ ಸಾಹಿತ್ಯದಲ್ಲಿ ಕಾಣಬಹುದು ಎಂದು ಕುವೆಂಪು ಅವರ ಸಾಹಿತ್ಯ ಪ್ರಕಾರಗಳ ಬಗ್ಗೆ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಡಿ.ಎನ್.ಯೋಗೀಶ್ವರಪ್ಪ, ಸಂಘಟನಾ ಕಾರ್ಯದರ್ಶಿ ಜಿ.ಹೆಚ್.ಮಹದೇವಪ್ಪ, ಕೋಶಾಧ್ಯಕ್ಷ ಎಂ.ಹೆಚ್.ನಾಗರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಚಾರಕ ಸುರೇಶ್, ಕೆ.ಎಸ್.ಉಮಾ ಮಹೇಶ್, ಸರ್ವೋದಯ ಕಾಲೇಜಿನ ಪ್ರಾಧ್ಯಾಪಕ ವರ್ಗ, ಆಡಳಿತ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.
Comments are closed.