ಭಾಷೆ ಉಳಿವಿಗೆ ಪ್ರಾಧಿಕಾರ ಇರೋದು ದುರಾದೃಷ್ಟಕರ

ಭಾಷೆ ಬಗ್ಗೆ ಕನ್ನಡಿಗರಿಗೆ ಇರುವ ದುರಭಿಮಾನಕ್ಕೆ ಹಿಡಿದ ಕನ್ನಡಿ: ಡಾ.ಸಂತೋಷ

195

Get real time updates directly on you device, subscribe now.


ತುಮಕೂರು: ಭಾರತದ ಯಾವ ರಾಜ್ಯದಲ್ಲಿಯೂ ಒಂದು ಭಾಷೆಯ ಉಳಿವಾಗಿ ಪ್ರಾಧಿಕಾರವಿಲ್ಲ. ಕನ್ನಡಿಗರ ದುರ್ದೈವ ಕನ್ನಡ ನಾಡಿನಲ್ಲಿ ಮಾತ್ರ ಇಂತಹದೊಂದು ಪ್ರಾಧಿಕಾರ ಅಸ್ಥಿತ್ವದಲ್ಲಿದೆ. ಇದು ಭಾಷೆಯ ಬಗ್ಗೆ ಕನ್ನಡಿಗರಿಗೆ ಇರುವ ದುರಭಿಮಾನಕ್ಕೆ ಹಿಡಿದ ಕನ್ನಡಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ತಿಳಿಸಿದ್ದಾರೆ.

ನಗರದ ಅಂತರಸರನಹಳ್ಳಿಯಲ್ಲಿರುವ ಕೆಎಸ್ಆರ್ಟಿಸಿ ಘಟಕ 2ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕನ್ನಡ ಭಾಷೆಯ ಉಳಿವಿಗಾಗಿ ಇದುವರೆಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸರಕಾರ 168 ಕ್ಕು ಹೆಚ್ಚು ಆಜ್ಞೆ, ಆದೇಶಗಳನ್ನು ಹೊರಡಿಸಿದೆ ಎಂದರು.

ಕನ್ನಡಿಗರಿಗೆ ಶೇ.100 ರಷ್ಟು ಅವಕಾಶ ಶಿಕ್ಷಣ, ಆಡಳಿತದಲ್ಲಿವಿಜ್ಞಾನ ತಂತ್ರಜ್ಞಾನ, ಉದ್ಯೋಗ ಮತ್ತು ತರಬೇತಿಗಳಲ್ಲಿ ದೊರೆಯಬೇಕು ಎಂಬ ಕಾರಣಕ್ಕೆ ನಿರಂತರವಾಗಿ ಪ್ರಯತ್ನಿಸುತ್ತಿದೆ. 2000ರಲ್ಲಿ ಎಲೆಕ್ಟ್ರಾನಿಕ್ ಸಿಟಿಗೆ 1906 ಎಕರೆ ಜಾಗ ನೀಡಿದೆ. ಅದರದಲ್ಲಿರುವ 146 ಕಂಪನಿಗಳಲ್ಲಿ ಬೆರಳೆಣಿಕೆಯಷ್ಟು ಕನ್ನಡ ಕಂಪನಿಗಳು ಮಾತ್ರ ಇವೆ, ಉಳಿದೆಲ್ಲವೂ ಹೊರರಾಜ್ಯ, ಹೊರ ರಾಷ್ಟ್ರಕ್ಕೆ ಸೇರಿದವು, ಅಲ್ಲಿರುವ ಉದ್ಯೋಗಿಗಳು ಸಹ ಹೆಚ್ಚಿನವರು ಹೊರ ರಾಜ್ಯದವರೇ ಆಗಿದ್ದಾರೆ. ಕನ್ನಡಿಗರು ಕೇವಲ ಸಿ ಮತ್ತು ಡಿ ಗ್ರೂಪ್ ನೌಕರರಾಗಿ ಮಾತ್ರ ಕೆಲಸ ಮಾಡುತಿದ್ದಾರೆ. ಇದು ನಮ್ಮನ್ನು ನಾವು ಮಾರಿ ಕೊಂಡಿರುವುದರ ದ್ಯೋತಕ ಎಂದು ಬೇಸರ ವ್ಯಕ್ತಪಡಿಸಿದರು.

ಕೆಂಗಲ್ ಹನುಮಂತಯ್ಯ ಅವರು ಬಳ್ಳಾರಿ ಕರ್ನಾಟಕವೂ ಸೇರಿದಂತೆ ಇಡೀ ಕರ್ನಾಟಕವನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಪ್ರಾಣ ತ್ಯಾಗ ಮಾಡಿದ ವ್ಯಕ್ತಿ ರಂಜಾನ್ ಸಾಬ್ ಪಿಂಚಾರ್, ಅನ್ಯ ಭಾಷಿಕರು ಆತನ ಮೇಲೆ ಆಸಿಡ್ ಎರಚಿ ಕೊಲೆ ಮಾಡುತ್ತಾರೆ. ಕನ್ನಡ ಏಕೀಕರಣಕ್ಕೆ ಹಾಕಿದ್ದ ಪೆಂಡಾಲ್ ಕಾಯುತ್ತಿದ್ದ ಆತನ ಮೇಲೆ ಅನ್ಯ ಭಾಷೆಯವರು ಪೆಂಡಾಲ್ ನಾಶ ಮಾಡಲು ಬಂದಾಗ ವಿರೋಧಿಸಿದ್ದಕ್ಕೆ ಆತನನ್ನು ಕೊಲೆ ಮಾಡಲಾಗುತ್ತದೆ, ಇಂತಹ ಹಲವಾರು ಉದಾಹರಣೆ ನಮ್ಮ ಮುಂದಿವೆ. ಹಾಗಾಗಿ ನಮ್ಮ ಮುಂದಿನ ಪೀಳಿಗೆಗೆ ನಾವು ಮಾದರಿಯಾಗಬೇಕಿದೆ ಎಂದು ಡಾ.ಸಂತೋಷ್ ಹಾನಗಲ್ಲ ನುಡಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶಿಕ್ಷಣ ಪ್ರೇಮಿ ಹರಕೇಳ ಹಾಜಬ್ಬ ಅವರಿಗೆ ಕನ್ನಡ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, ದ್ರಾವಿಡ ಭಾಷೆಗಳಲ್ಲಿಯೇ ಅತ್ಯಂತ ಶ್ರೀಮಂತ ಭಾಷೆ ಕನ್ನಡ, ಭಾಷೆಯ ಕೆಲಸ ಉದ್ಯೋಗ ನೀಡುವುದಲ್ಲ, ಹೃದಯಗಳನ್ನು ಬೆಸೆಯುವಂತದ್ದು. ಇಂದು ಕನ್ನಡ ಸಂಘಟನೆಗಳು ಹೋರಾಡುತ್ತಿರುವುದು ಕನ್ನಡ ಭಾಷೆಯ ಉಳಿವಿಗಾಗಿ ಅಲ್ಲ. ತಮ್ಮ ಆಸ್ಮಿತೆ ಮತ್ತು ಅಧಿಕಾರ ಉಳಿಸಿಕೊಳ್ಳಲಿಕ್ಕಾಗಿ, ಈ ಬಗ್ಗೆ ಚಿಂತನ ಮಂಥನ ಅಗತ್ಯವಾಗಿದೆ. ಕನ್ನಡ ಭಾಷೆಯ ಬಗ್ಗೆ ಅಭಿಮಾನಕ್ಕಿಂತ, ಅನುಯಾಯಿತನ ಬೇಕು. ಆ ಕೆಲಸವನ್ನು ಕೆಎಸ್ಆರ್ಟಿಸಿ ಕನ್ನಡ ಕ್ರಿಯಾ ಸಮಿತಿ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎನ್.ಗಜೇಂದ್ರಕುಮಾರ್ ವಹಿಸಿದ್ದರು. ಕನ್ನಡ ಭಾಷೆಯ ಕುರಿತು ಉಪನ್ಯಾಸಕ ಎ.ಎಂ.ನಾಗರಾಜರಾವ್ ವಿಶೇಷ ಉಪನ್ಯಾಸ ನೀಡಿದರು. ಕೆಎಸ್ಆರ್ಟಿಸಿ ಕನ್ನಡ ಕ್ರಿಯಾ ಸಮಿತಿ ಕೇಂದ್ರದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಪ್ರಭುಸ್ವಾಮಿ, ಖಜಾಂಚಿ ಹುಸೇನ್.ಕೆ.ಎಸ್.ಎಂ, ಕನ್ನಡ ಕ್ರಿಯಾ ಸಮಿತಿ ತುಮಕೂರು ಘಟಕದ ಆದ್ಯಕ್ಷ ವಿ.ಡಿ.ಹನುಮಂತರಾಯ, ಉಪಾಧ್ಯಕ್ಷ ಹೆಚ್.ಎಸ್.ರಾಜಶೇಖರ್, ಜಿ.ಭೀಮಾನಾಯ್ಕ್, ಪ್ರಧಾನ ಕಾರ್ಯದರ್ಶಿ ಜಿ.ನಾಗೇಂದ್ರ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!