ಗ್ರಾಹಕರ ಹಕ್ಕುಗಳ ಬಗ್ಗೆ ಜನರಿಗೆ ಅರಿವು ಅಗತ್ಯ

94

Get real time updates directly on you device, subscribe now.


ತುಮಕೂರು: ಗ್ರಾಹಕರ ಹಕ್ಕುಗಳ ಬಗ್ಗೆ ಸಾರ್ವಜನಿಕರು ಹೆಚ್ಚಿನ ಅರಿವು ಪಡೆಯಬೇಕು. ಗ್ರಾಹಕರು ತಾವು ಪಡೆಯುವ ವಸ್ತು, ಸೇವೆ ಗುಣಮಟ್ಟದ್ದಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಂಡು ಎಚ್ಚರದಿಂದ ವ್ಯವಹರಿಸಬೇಕು. ಅಗತ್ಯ ಬಿದ್ದರೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೂಲಕ ನ್ಯಾಯ ಪಡೆಯಬಹುದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷೆ ವಿಜಯಲಕ್ಷ್ಮೀ ಜಿ.ಟಿ. ಹೇಳಿದರು.

ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಸಿದ್ಧಗಂಗಾ ಮಹಿಳಾ ಪದವಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ- 2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಿಸೆಂಬರ್ 24, 1986ರಂದು ಗ್ರಾಹಕ ಸಂರಕ್ಷಣಾ ಕಾಯಿದೆಯು ಭಾರತದ ರಾಷ್ಟ್ರಪತಿ ಒಪ್ಪಿಗೆ ಪಡೆದು ಜಾರಿಗೆ ಬಂದಿತು, ಗ್ರಾಹಕರು ತಮ್ಮ ಹಕ್ಕುಗಳು ಮತ್ತು ಜವಾಬ್ದಾರಿ ಬಗ್ಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶವಾಗಿದ್ದು, ವಾರ್ಷಿಕವಾಗಿ ಭಾರತದಾದ್ಯಂತ ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ ಆಚರಿಸಲಾಗುತ್ತದೆ. ದೋಷಯುಕ್ತ ಸರಕು, ಸೇವೆಗಳ ಕೊರತೆ ಮತ್ತು ಅನ್ಯಾಯದ ವ್ಯಾಪಾರದಂತಹ ವಿವಿಧ ರೀತಿಯ ಶೋಷಣೆ ವಿರುದ್ಧ ಗ್ರಾಹಕರಿಗೆ ಪರಿಣಾಮಕಾರಿ ಸುರಕ್ಷತೆ ಒದಗಿಸುವ ಗುರಿಯನ್ನು ಈ ಕಾಯ್ದೆ ಹೊಂದಿದೆ.

ಇ- ಕಾಮರ್ಸ್ ಸೇರಿದಂತೆ ಹಲವು ವ್ಯವಹಾರಗಳನ್ನು ನಿಯಮಗಳಿಗೆ ಸೇರಿಸಲಾಗಿದೆ. ಗ್ರಾಹಕರ ವಿವಾದದ ಇತ್ಯರ್ಥಕ್ಕೆ ಆಯೋಗಗಳನ್ನು ಸ್ಥಾಪಿಸುವ ಮೂಲಕ ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಗುರಿ ಹೊಂದಿರುವ ಗ್ರಾಹಕ ಸಂರಕ್ಷಣಾ ಕಾಯಿದೆ- 2019 ಇದೆ. ಈ ವರ್ಷ ರಾಷ್ಟ್ರೀಯ ಗ್ರಾಹಕ ದಿನವನ್ನು ಪರಿಣಾಮಕಾರಿ ಇತ್ಯರ್ಥ ಎಂಬ ಥೀಮ್ನೊಂದಿಗೆ ಆಚರಿಸಲಾಗುತ್ತಿದೆ ಎಂದರು.

ಮೋಸ ಹೋದ ಯಾವುದೇ ಗ್ರಾಹಕನು ತನಗಾದ ನಷ್ಟ ಹಿಂಪಡೆಯಲು ಗ್ರಾಹಕನು ವಾಸಿಸುವ ಅಥವಾ ಕೆಲಸ ಮಾಡುವ ಪ್ರದೇಶದ ಗ್ರಾಹಕ ವೇದಿಕೆಗೆ ಲಿಖಿತ ರೂಪದಲ್ಲಿ ದೂರು ಸಲ್ಲಿಸಬಹುದು., ಪರಿಹಾರ ಕೇಳುವ ಒಟ್ಟು ಮೊತ್ತದ ಆಧಾರದ ಮೇಲೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ 50 ಲಕ್ಷ ರೂ. ಒಳಗಿನ, ರಾಜ್ಯ ಮಟ್ಟದಲ್ಲಿ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ 50 ಲಕ್ಷದಿಂದ 02 ಕೋಟಿ ರೂ., ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ 02 ಕೋಟಿ ರೂ. ಗಿಂತ ಅಧಿಕ ಮೊತ್ತದ ಪರಿಹಾರಕ್ಕಾಗಿ ಉತ್ಪನ್ನ ಅಥವಾ ಸೇವೆಯಿಂದ ಉಂಟಾಗುವ ಹಾನಿಗೆ ಗ್ರಾಹಕರು ಪರಿಹಾರ ಪಡೆಯಬಹುದು, ವಕೀಲರ ಅವಶ್ಯಕತೆ ಇಲ್ಲದೆ ನೇರವಾಗಿ ಸರಳವಾಗಿ ದೂರು ಸಲ್ಲಿಸಬಹದಾಗಿದ್ದು, 5 ಲಕ್ಷದ ವರೆಗಿನ ಪ್ರಕರಣಗಳಿಗೆ ಸಂಪೂರ್ಣ ಉಚಿತ ನೆರವು ಇರುತ್ತದೆ.

ಆಯೋಗದಲ್ಲಿ ಸರಕಿನಲ್ಲಿರುವ ನ್ಯೂನತೆ ನಿವಾರಿಸಿಕೊಳ್ಳುವ, ಬದಲಿ ಸರಕನ್ನು ನೀಡುವಂತೆ, ಸರಕಿನ ಮೌಲ್ಯ ವಾಪಸ್ ಪಡೆಯುವ, ನಷ್ಟ ಪರಿಹಾರ ಪಡೆಯುವ ಅಥವಾ ಅನುಚಿತ ವ್ಯಾಪಾರ ಪದ್ಧತಿ ನಿಲ್ಲಿಸುವ, ಹಾನಿಕಾರಕ ಸರಕುಗಳನ್ನು ಮಾರಾಟ ಮಾಡದಂತೆ ನಿಬರ್ಂಧ ಹೇರುವ, ಹಾನಿಕಾರಕ ಸರಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಆದೇಶ ನೀಡುತ್ತದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಮಂಟೇಸ್ವಾಮಿ ಮಾತನಾಡಿ, ಗ್ರಾಹಕ ಸಂರಕ್ಷಣಾ ಕಾಯ್ದೆ 1986ರ ಜಾರಿಯನ್ನು ದೇಶದ ಗ್ರಾಹಕ ಹಕ್ಕುಗಳ ಆಂದೋಲನದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ, ಗ್ರಾಹಕರ ಹಿತಾಸಕ್ತಿ ಕಾಪಾಡಲು ಮತ್ತು ಮಾರುವವರಿಂದ ಕೊಳ್ಳುವವರೆಗೆ ಒಳಗಾಗಬಹುದಾದ ಶೋಷಣೆ ತಪ್ಪಿಸಲು ಈ ಕಾಯಿದೆ ಮಾಡಲಾಯಿತು ಎಂದರು.

ನ್ಯಾಯವಾದಿ ಹಾಗೂ ಸಂಪನ್ಮೂಲ ವ್ಯಕ್ತಿ ಟಿ.ಎಸ್.ನಿರಂಜನ್, ಸಿದ್ಧಗಂಗಾ ಮಹಿಳಾ ಪದವಿ ಕಾಲೇಜ್ನ ಪ್ರಾಚಾರ್ಯ ಕೆ.ಸಿ.ಜಯಸ್ವಾಮಿ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ರವೀಶ್, ಡಿ.ನಾಗರಾಜು, ನಿವೇದಿತಾ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!