ಮೀಸಲಾತಿ ಬಿಜೆಪಿಯ ಚುನಾವಣಾ ನಾಟಕ

ಪ್ರವರ್ಗ ಬದಲಾವಣೆ ಮಾಡಿರುವುದಷ್ಟೇ ಬಿಜೆಪಿ ಸಾಧನೆ: ಕುಮಾರಸ್ವಾಮಿ

75

Get real time updates directly on you device, subscribe now.


ತುಮಕೂರು: ಚುನಾವಣಾ ಗಿಮಿಕ್ಗಾಗಿ ಬಿಜೆಪಿ ಸರ್ಕಾರ ಮೀಸಲಾತಿ ನಾಟಕವಾಡುತ್ತಿದೆ. ಸರ್ಕಾರದ ತೀರ್ಮಾನ ನಾಡಿನ ಜನರಿಗೆ ದ್ರೋಹ ಬಗೆಯುವಂತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಕ್ಕಲಿಗ, ಲಿಂಗಾಯತ ಸಮುದಾಯದ ಮೀಸಲಾತಿ ಸಂಬಂಧ ಪ್ರವರ್ಗ ಬದಲಾವಣೆ ಮಾಡುವ ಮೂಲಕ ಬಿಜೆಪಿಯವರು ರಂಗನನ್ನು ಮಂಗ ಮಾಡಲು ಹೊರಟಿದ್ದಾರೆ ಎಂದರು.

ರಾಜ್ಯದಲ್ಲಿ ಮೀಸಲಾತಿಯ ಸುಳಿಯಲ್ಲಿ ಬಿಜೆಪಿ ಸಿಲುಕಿದೆ, ಬಿಜೆಪಿಯವರಿಗೆ ಜನರು ಓಡಾಡಿಸಿಕೊಂಡು ಹೊಡಿಯುತ್ತಾರೆ. ಪರಿಶಿಷ್ಟ ಪಂಗಡದ ಮೀಸಲಾತಿ ನೀಡಿರುವುದು ಸಮುದಾಯವನ್ನು ಗುಲಾಮಗಿರಿ ಮಾಡುವುದಕ್ಕಲ್ಲ. ಅವರಿಗೆ ನಾಚಿಕೆಯಾಗಬೇಕು ಎಂದು ಸಚಿವ ಶ್ರೀರಾಮುಲು ಅವರನ್ನು ಟೀಕಿಸಿದರು.

ಸಚಿವ ಸಂಪುಟದಲ್ಲಿ ಮೀಸಲಾತಿ ಬಗ್ಗೆ ಮಾರ್ಪಾಡು ಮಾಡಲಾಗಿದೆ. ಕೆಲವರಿಗೆ ರಂಗ ಅನ್ನುತ್ತಿದ್ದವರನ್ನು ಮಂಗ ಮಾಡಲು ಬಿಜೆಪಿ ಹೊರಟಿದ್ದಾರೆ. 3 ನಲ್ಲಿದ್ದ ಒಕ್ಕಲಿಗ ಸಮುದಾಯ ಸೇರಿದಂತೆ 2ಸಿ, ವೀರಶೈವ ಸಮುದಾಯವನ್ನು 2 ಡಿ ಮಾಡಿದ್ದಾರೆ. ಪಂಚಮಸಾಲಿಗಳ ಸ್ವಾಮೀಜಿ ಹೋರಾಟಕ್ಕೆ ಬಿಜೆಪಿ ಸರ್ಕಾರ ಗೌರವ ಕೊಟ್ಟಿದೆಯೋ, ಅಗೌರವ ಕೊಟ್ಟಿದಿಯೋ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ನುಡಿದರು.

ಚುನಾವಣಾ ಗಿಮಿಕ್ ಗಾಗಿ ಬಿಜೆಪಿ ಸರ್ಕಾರ ಮೀಸಲಾತಿಯ ಡ್ರಾಮಾ ಆಡುತ್ತಿದೆ. ಸರ್ಕಾರದ ತೀರ್ಮಾನ ನಾಡಿನ ಜನರಿಗೆ ದ್ರೋಹ ಬಗೆಯುವಂತಿದೆ. ಮುಖ್ಯಮಂತ್ರಿಗಳು ಜಾಹೀರಾತು ನೀಡಿದರು. ಎಲ್ಲ ಮಣ್ಣು, ಮೂರು ವರ್ಷಗಳಲ್ಲಿ ಏನು ಮಾಡಿದೆ ಎನ್ನುವುದು ಶೀಘ್ರದಲ್ಲಿ ಬಯಲಿಗೆ ಬರಲಿದೆ ಎಂದರು.

ಕುಮಾರಸ್ವಾಮಿ ಅಸೆಂಬ್ಲಿ ಬರುವುದು ಬಿಟ್ಟು ಪಂಚರತ್ನ ಯಾತ್ರೆ ಮಾಡುತ್ತಿದ್ದಾನೆ ಎಂದು ಟೀಕಿಸಿದ ವಿರೋಧ ಪಕ್ಷದವರು ಈಗ ಯಾವ ಪುರುಷಾರ್ಥಕ್ಕೆ ಅಸೆಂಬ್ಲಿ ಕರೆದರು ಎನ್ನುತ್ತಿದ್ದಾರೆ. ಈಗ ಅವರಿಗೆ ಗೊತ್ತಾಯ್ತ ಎಂದು ಪ್ರಶ್ನಿಸಿದರು.
ಗ್ರಾಮೀಣ, ಕೊಳಚೆ ಪ್ರದೇಶದಲ್ಲಿರುವವರು ಬಡತನದಲ್ಲಿದ್ದಾರೆ. ಹಿಂದುಳಿದ ಸಮುದಾಯಗಳನ್ನು ಮೇಲೆತ್ತದ ಮೇಲೆ ಸರ್ಕಾರದ ನಿರ್ಧಾರಗಳು ವ್ಯರ್ಥವಾಗಲಿದೆ. ಮೀಸಲಾತಿ ವಿಚಾರದಲ್ಲಿ ಹಿಂದಿನ ಸರ್ಕಾರಗಳು ಮೂಗಿಗೆ ತುಪ್ಪ ಸವರುತ್ತಿದ್ದರು, ಬಿಜೆಪಿ ಸರ್ಕಾರ ಎಲ್ಲಿ ತುಪ್ಪ ಸವರಿದೆಯೋ ಗೊತ್ತಿಲ್ಲ ಎಂದು ಹೇಳಿದರು.

ಇಡಬ್ಲ್ಯೂಸ್ ಮೀಸಲಾತಿ ನಂತರ ಬಾಕಿ ಉಳಿದಿರುವ ಮೀಸಲಾತಿಯನ್ನು ಈಗ ತೀರ್ಮಾನಗೊಂಡಿರುವ ಈ ವರ್ಗಗಳಿಗೆ ನೀಡುವುದಾಗಿ ಹೇಳಿದ್ದಾರೆ. ಅವರು ಕೊಡುವುದರೊಳಗೆ ಸರ್ಕಾರ ಬಿದ್ದೋಗಲಿದೆ. ಉತ್ತರ ಪ್ರದೇಶದಲ್ಲಿ ಮೀಸಲಾತಿಯನ್ನು ಹೈ ಕೋರ್ಟ್ ರದ್ದುಗೊಳಿಸಿದೆ. ಕಾನೂನು ತೀರ್ಪಿಗೆ ಎಲ್ಲರು ತಲೆ ಬಾಗಬೇಕು ಎಂದರು.

ಕಳಸಾ ಬಂಡೂರಿ ಯೋಜನೆಗೆ 100 ಕೋಟಿ ಅನುದಾನ ನೀಡಿದ್ದು ನಾನು, ಪ್ರಚಾರಕ್ಕಾಗಿ ಬಿಜೆಪಿ ಯೋಜನೆ ಮಾಡುತ್ತಾರೆ. ಮೀಸಲಾತಿ ಮೀರಬಾರದು ಎಂಬ ನಿಯಮವಿದೆ. ತಮಿಳುನಾಡು ಸರ್ಕಾರದ ಮೀಸಲಾತಿ ಪ್ರಕರಣ ನ್ಯಾಯಾಲಯದಲ್ಲಿದೆ. ಕಾನೂನಿನ ಚೌಕಟ್ಟಿನೊಳಗೆ ನಿಯಮಗಳನ್ನು ಮಾಡಬೇಕು ನ್ಯಾಯಾಲಯಗಳು ಮೀಸಲಾತಿ ಮೀರಿದ ಯೋಜನೆ ರದ್ದುಗೊಳಿಸಿದ ಉದಾಹರಣೆ ಇದೆ ಎಂದರು.

ದೇಶದಲ್ಲಿ ರೈತ ಪರ ಸರ್ಕಾರ ಇಲ್ಲ, ಅಡಿಕೆ ಬೆಳೆಗಾರರ ಬಗ್ಗೆ ಗಮನ ಹರಿಸುತ್ತಿಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಎಲ್ಲದಕ್ಕೂ ಅಂತ್ಯ ಎನ್ನುವುದು ಇದೆ. ಬಿಜೆಪಿಯೂ ನೈಸರ್ಗಿಕವಾಗಿ ಮುದುಡುತ್ತಿದೆ. ಮುದುಡುತ್ತಿರುವುದನ್ನು ಅರಳಿಸಲು ಯಾರಿಂದಲಾದರೂ ಸಾಧ್ಯವೇ? ಮಂಡ್ಯದಲ್ಲಿ ಅಮಿತ್ ಶಾ ಬದಲಿಗೆ ಯಾರಾದರೂ ಬರಲಿ ಎಂದರು.

ಬಿಜೆಪಿಗೆ ಜನರ ಅಭಿವೃದ್ಧಿ ಬೇಕಾಗಿಲ್ಲ. ಬರಿ ಸಾಲ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ರಾಜ್ಯ ಸಾಲದಲ್ಲಿ ಮುಳುಗುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಇಲಾಖೆಯ 1.36 ಕೋಟಿ ಬಿಡುಗಡೆ ಮಾಡಿದೆ. ಗುತ್ತಿಗೆದಾರರನ್ನು ಓಲೈಸಿ ಕಮಿಷನ್ ಪಡೆಯಲು ಮುಂದಾಗಿದೆ ಎಂದು ಆರೋಪಿಸಿದರು.

ಜಿಎಸ್ಟಿ ಅನುದಾನ ನಮ್ಮ ರಾಜ್ಯಕ್ಕೆ ಸಿಗುತ್ತಿಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಪ್ರಧಾನಿ ಮುಂದೆ ಹೋಗಿ ಧಮ್ಮು, ತಾಕತ್ತು ತೋರಿಸಲಿ, ರಾಜ್ಯದ ಖಜಾನೆ ಬರಿದಾಗಿದ್ದರಿಂದಲೇ ಪಿಂಚಣಿ, ಸೈಕಲ್ ಸೇರಿದಂತೆ ಎಲ್ಲಾ ಯೋಜನೆ ನಿಲ್ಲಿಸಿದ್ದು ಯಾಕೆ, ಬರೀ ಅಶೋಕ್ ಮನೆಯ ಖಜಾನೆ ತುಂಬಿದರೆ ಸಾಕೇ, ಅದು ಜನರಿಗೆ ತಲುಪಬೇಕು ಎಂದು ಕುಟುಕಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಡಿ.ಸಿ.ಗೌರಿಶಂಕರ್, ಎಂಎಲ್ಸಿ ಬೋಜೇಗೌಡ, ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಮಾಜಿ ಶಾಸಕ ತಿಮ್ಮರಾಯಪ್ಪ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!